ADVERTISEMENT

ಮಂಡ್ಯ| ಅರಣ್ಯ ಪ್ರದೇಶದಲ್ಲೇ ಕಲ್ಲು ಗಣಿಗಳ ಕಾರುಬಾರು

ಜಿಲ್ಲೆಯಲ್ಲಿ 42 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿ, ಜನಪ್ರತಿನಿಧಿಗಳಿಂದಲೇ ಲೂಟಿ

ಎಂ.ಎನ್.ಯೋಗೇಶ್‌
Published 4 ಜೂನ್ 2022, 19:30 IST
Last Updated 4 ಜೂನ್ 2022, 19:30 IST
ಕಲ್ಲು ಗಣಿಗಾರಿಕೆಯಿಂದ ಕರಗುತ್ತಿರುವ ಬೇಬಿಬೆಟ್ಟ
ಕಲ್ಲು ಗಣಿಗಾರಿಕೆಯಿಂದ ಕರಗುತ್ತಿರುವ ಬೇಬಿಬೆಟ್ಟ   

ಮಂಡ್ಯ: ಜಿಲ್ಲೆಯಾದ್ಯಂತ 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ವ್ಯಾಪ್ತಿ ಗುರುತಿಸಲಾಗಿದೆ. ಬಹುತೇಕ ಅರಣ್ಯ ಭೂಮಿಯಲ್ಲೇ ಅಕ್ರಮ ಕಲ್ಲು ಗಣಿ ಕ್ರಷರ್‌ಗಳು ತಲೆ ಎತ್ತಿದ್ದು ಜಿಲ್ಲಾಡಳಿತ ಪ್ರಾಕೃತಿಕ ಸಂಪನ್ಮೂಲ ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ.

ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಜಿಲ್ಲೆಯಲ್ಲಿ 32,958 ಹೆಕ್ಟೇರ್‌ ಪ್ರದೇಶವನ್ನು ಉದ್ಘೋಷಿತ (ಡೀಮ್ಡ್‌) ಅರಣ್ಯ ಎಂದು ಗುರುತಿಸಲಾಗಿದೆ. ಇದರಲ್ಲಿ ಗೋಮಾಳ, ಅಮೃತ್ ಮಹಲ್‌ ಕಾವಲು ಪ್ರದೇಶವೂ ಒಳಗೊಂಡಿದೆ. ಜೊತೆಗೆ 6,895 ಹೆಕ್ಟೇರ್‌ ಮೀಸಲು ಅರಣ್ಯ ಪ್ರದೇಶವಿದೆ. ಅರಣ್ಯ ಕಾಯ್ದೆ ಕಲಮು 4ರ ಅಡಿ 2,201 ಹೆಕ್ಟೇರ್‌ ಪ್ರದೇಶವನ್ನು ಅರಣ್ಯ ಭೂಮಿ ಎಂದು ಗುರುತಿಸಲಾಗಿದ್ದು ನಂತರ ಇದು ಉದ್ಘೋಷಿತ ಅರಣ್ಯವಾಗಲಿದೆ.

5,549 ಹೆಕ್ಟೇರ್‌ ಗ್ರಾಮ ಅರಣ್ಯ ವ್ಯಾಪ್ತಿ ಇದೆ. ಎಲ್ಲವೂ ಸೇರಿ 42,054 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ವ್ಯಾಪ್ತಿ ಇದೆ. ಈ ಪ್ರದೇಶವನ್ನು ಸಮೀಕ್ಷೆ ಮಾಡಿ ಒತ್ತುವರಿಯಾಗಿದ್ದರೆ, ಕಾನೂನು ಬಾಹಿರವಾಗಿ ಬಳಸಲಾಗುತ್ತಿದ್ದರೆ ಅದನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆಗೆ ಇದೆ. ಶೇ 60ರಷ್ಟು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಅದನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ. ಕಂದಾಯ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಅರಣ್ಯ ರಕ್ಷಣೆ ಸಾಧ್ಯವಾಗಿಲ್ಲ.

ADVERTISEMENT

ಪಾಂಡವಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಗಣಿ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಬೇಬಿಬೆಟ್ಟದ ಅಮೃತ್‌ ಮಹಲ್‌ ಕಾವಲು, ಚಿನಕುರುಳಿ, ಹೊನಗಾನಹಳ್ಳಿ, ಬನ್ನಂಗಾಡಿ, ಶಂಭೂನಹಳ್ಳಿ ಪ್ರದೇಶದಲ್ಲಿ ಸಾವಿರಾರು ಗಣಿ ಯಂತ್ರಗಳು ಅರಣ್ಯ ಸಂಪನ್ಮೂಲವನ್ನು ನಾಶ ಮಾಡುತ್ತಿವೆ. ಶ್ರೀರಂಗಪಟ್ಟಣ ತಾಲ್ಲೂಕು ಮುಂಡುಗದೊರೆ, ಟಿ.ಎಂ.ಹೊಸೂರು, ಹಂಗರಹಳ್ಳಿ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

ನಾಗಮಂಗಲ ತಾಲ್ಲೂಕಿನ ಬಹುತೇಕ ಉದ್ಘೋಷಿತ ಅರಣ್ಯದಲ್ಲಿ ಕಲ್ಲು ಗಣಿ ಯಂತ್ರಗಳು ತಲೆ ಎತ್ತಿವೆ. ಹೊಣಕೆರೆ ಹೋಬಳಿಯ ಬಹುಭಾಗ ಗಣಿಗಳಿಂದ ಕೂಡಿದೆ. ಕೆ.ಆರ್‌.ಪೇಟೆ ತಾಲ್ಲೂಕಿನ ಶೀಳನೆರೆ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಅದು ಮೇಲುಕೋಟೆ ವನ್ಯಜೀವಿ ವಲಯ ವ್ಯಾಪ್ತಿಗೆ ಸೇರಿದೆ. ಮಂಡ್ಯ ತಾಲ್ಲೂಕಿನ ಆನುಕುಪ್ಪೆ, ಹೊನ್ನೆಮಡು, ಮದ್ದೂರು ತಾಲ್ಲೂಕಿನ ಲಿಂಗಸಂದ್ರ ಮುಂತಾದೆಡೆ ಅಕ್ರಮ ಗಣಿ ಕಂಪನಿಗಳು ಚಟುವಟಿಕೆ ನಡೆಸುತ್ತಿವೆ.

‘ಜಿಲ್ಲೆಯ ಬಹುತೇಕ ಶಾಸಕರು ನೇರವಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಇದೆ. ಜಿಲ್ಲಾಡಳಿತ ಅರಣ್ಯ ಸಂಪನ್ಮೂಲ ಸಂರಕ್ಷಿಸುವಲ್ಲಿ ವಿಫಲವಾಗಿದೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಹೇಳಿದರು.

****

ಉದ್ಘೋಷಿತ ಅರಣ್ಯ, ವನ್ಯಜೀವಿ ವಲಯದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದರೆ ಈ ಕುರಿತು ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು

– ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.