ಮಂಡ್ಯ: ತಾಲ್ಲೂಕಿನ ತಗ್ಗಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ‘ಫೇಸ್ ಬಯೋಮೆಟ್ರಿಕ್’ (ಮುಖ ಗುರುತಿಸುವಿಕೆ ಯಂತ್ರ) ಅಳವಡಿಸಲಾಗಿದೆ. ಈ ವಿನೂತನ ಕ್ರಮದಿಂದ ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಬೆಳೆಸಲು ಮತ್ತು ಹಾಜರಾತಿ ಹೆಚ್ಚಿಸಲು ಸಹಕಾರಿಯಾಗಿದೆ.
ಸರ್ಕಾರದ ಅನುದಾನಕ್ಕೆ ಕಾಯದೆ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಮತ್ತು ಗ್ರಾಮಸ್ಥರ ನೆರವಿನಿಂದ ₹1 ಲಕ್ಷ ಸಂಗ್ರಹಿಸಿ, ಬಯೋಮೆಟ್ರಿಕ್ ಉಪಕರಣ ಅಳವಡಿಸಿರುವುದು ವಿಶೇಷ. ವಿದ್ಯಾರ್ಥಿಗಳು ಗೈರು ಹಾಜರಾಗುವುದನ್ನು ಮತ್ತು ಶಿಕ್ಷಕರು ವಿಳಂಬವಾಗಿ ಶಾಲೆಗೆ ಬರುವುದನ್ನು ಈ ಉಪಕರಣ ತಡೆಗಟ್ಟಿದೆ.
‘ಫೇಸ್ ಬಯೋಮೆಟ್ರಿಕ್‌ನಲ್ಲಿ ಡ್ಯಾಶ್ ಬೋರ್ಡ್ ಪ್ರೋಗ್ರಾಂ ಮೂಲಕ ಮಕ್ಕಳು, ಬೋಧಕರು ಮತ್ತು ಬೋಧಕರೇತರ ಸಿಬ್ಬಂದಿಯ ಮಾಹಿತಿ ಅಳವಡಿಸಿ, ನೋಂದಣಿ ಮಾಡಿಸಲಾಗಿದೆ. ಎರಡು ಸೆಕೆಂಡ್‌ಗಳಲ್ಲಿ ಒಬ್ಬರ ಹಾಜರಾತಿ ದಾಖಲಾಗುತ್ತದೆ. ಇದರಿಂದ ಶೇ 98ರಷ್ಟು ಮಕ್ಕಳ ಹಾಜರಾತಿ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಚಕ್ಕರ್ ಹೊಡೆದ ಮಕ್ಕಳ ಬಗ್ಗೆ ಪೋಷಕರ ಮೊಬೈಲ್‌ಗೆ ಸಂದೇಶ ಕಳುಹಿಸಲು ನಿರ್ಧರಿಸಿದ್ದೇವೆ’ ಎಂದು ಎಸ್‌ಡಿಎಂಸಿ ಸದಸ್ಯ ಅನಿಲ್‌ಕುಮಾರ್ ಮಾಹಿತಿ ನೀಡಿದರು.
ಪಿಎಂಶ್ರೀ ಯೋಜನೆಗೆ ಆಯ್ಕೆ: ‘ಕೇಂದ್ರ ಪ್ರಾಯೋಜಿತ ಪಿಎಂಶ್ರೀ (ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ 2022–23ನೇ ಸಾಲಿನಲ್ಲಿ ರಾಜ್ಯದಲ್ಲಿ 129 ಶಾಲೆಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಈ ಶಾಲೆಯೂ ಸೇರಿದೆ. ಉನ್ನತೀಕರಿಸಿದ ಮೂಲಸೌಕರ್ಯ, ನವೀನ ಬೋಧನಾಶಾಸ್ತ್ರ ಮತ್ತು ತಂತ್ರಜ್ಞಾನದೊಂದಿಗೆ, ಅನುಕರಣೀಯ ಶಾಲೆಗಳನ್ನು ಮಾಡುವುದು ಯೋಜನೆಯ ಉದ್ದೇಶ. ಯೋಜನೆಯಡಿ ಇದುವರೆಗೆ ಶಾಲೆಗೆ ₹14 ಲಕ್ಷ ಅನುದಾನ ಬಿಡುಗಡೆಯಾಗಿದೆ’ ಎಂದು ಮುಖ್ಯಶಿಕ್ಷಕಿ ಪದ್ಮಾ ವಿ.ಬಿ. ತಿಳಿಸಿದರು.
‘ಅನುದಾನದಿಂದ ಶಾಲೆಯಲ್ಲಿ ₹3 ಲಕ್ಷ ವೆಚ್ಚದಲ್ಲಿ ‘ಡಿಜಿಟಲ್ ಲೈಬ್ರರಿ’ ಆರಂಭಿಸಿದ್ದು, ಮಕ್ಕಳಿಗಾಗಿ 4 ಕಂಪ್ಯೂಟರ್ ಖರೀದಿಸಿದ್ದೇವೆ. ₹1 ಲಕ್ಷ ವೆಚ್ಚದಲ್ಲಿ ‘ಸ್ಮಾರ್ಟ್ ಕ್ಲಾಸ್’ ಆರಂಭಿಸಿದ್ದೇವೆ. ತರಗತಿಗಳಿಗೆ ‘ಗ್ರೀನ್ ಬೋರ್ಡ್’, ಶಾಲಾ ಕಾಂಪೌಂಡ್‌ಗೆ ಆಕರ್ಷಿಸುವ ಚಿತ್ರಗಳು ಮತ್ತು ಕಿಚನ್ ಗಾರ್ಡನ್ ಅಭಿವೃದ್ಧಿಪಡಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
ದಾಖಲಾತಿ ಏರಿಕೆ: ‘ಬೆಂಗಳೂರು ರೋಟರಿ ಸಂಸ್ಥೆಯವರು ₹11 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ, ಬ್ಯಾಗ್, ಡೆಸ್ಕ್, ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇವೆ. ಸೋರುತ್ತಿದ್ದ ಕೊಠಡಿಗಳನ್ನು ತಾಲ್ಲೂಕು ಪಂಚಾಯಿತಿಯ ನರೇಗಾ ಅನುದಾನದಡಿ ದುರಸ್ತಿ ಮಾಡಿಸಲಾಗಿದೆ. ಆವರಣದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದೇವೆ. ಈ ಎಲ್ಲ ಕಾರಣದಿಂದ 2022ರಲ್ಲಿ 151 ಇದ್ದ ಮಕ್ಕಳ ಸಂಖ್ಯೆ ಈಗ 253ಕ್ಕೆ ಏರಿಕೆಯಾಗಿದೆ’ ಎನ್ನುತ್ತಾರೆ ಶಿಕ್ಷಕರು.
‘ಶಾಲೆಗೆ 8 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು ಪ್ರಸ್ತುತ 7 ಶಿಕ್ಷಕರಿದ್ದಾರೆ. ಹೊಸದಾಗಿ ಆರಂಭವಾಗಿರುವ 1ರಿಂದ 4ನೇ ತರಗತಿವರೆಗಿನ ಆಂಗ್ಲ ಮಾಧ್ಯಮಕ್ಕೆ ಶಿಕ್ಷಕರ ಕೊರತೆ ಇತ್ತು. ಅದನ್ನು ನೀಗಿಸಲು ಎಸ್‌ಡಿಎಂಸಿ ಸದಸ್ಯರು ಪೋಷಕರ ನೆರವು ಪಡೆದು 3 ಅತಿಥಿ ಶಿಕ್ಷಕರು ಮತ್ತು ಒಬ್ಬರು ಆಯಾ ಅವರನ್ನು ನೇಮಿಸಿ ನಾಲ್ವರಿಗೆ ಪ್ರತಿ ತಿಂಗಳು ₹42 ಸಾವಿರ ವೇತನ ನೀಡುತ್ತಿರುವುದು ಮಾದರಿ ಕಾರ್ಯ’ ಎನ್ನುತ್ತಾರೆ ಗ್ರಾಮಸ್ಥರು.
ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರಿ ಶಾಲೆಯಲ್ಲಿ ಬಯೋಮೆಟ್ರಿಕ್ ಅಳವಡಿಸಿದ್ದೇವೆ. ಇದರಿಂದ ಮಕ್ಕಳ ಹಾಜರಾತಿ ಗಣನೀಯವಾಗಿ ಹೆಚ್ಚಳವಾಗಿದೆ-ಎಂ.ಸಿದ್ದೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ತಗ್ಗಹಳ್ಳಿ ಸರ್ಕಾರಿ ಶಾಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.