ADVERTISEMENT

ಹಲಗೂರು | ಪೂರ್ಣಗೊಳ್ಳದ ಸೇತುವೆ ಕಾಮಗಾರಿ; ತಪ್ಪದ ಕಿರಿಕಿರಿ

ಉದ್ಘಾಟನೆಗೂ ಮುನ್ನವೇ ಶಿಥಿಲಾವಸ್ಥೆ ತಲುಪಿದ ಸೇತುವೆ; ₹2.5 ಕೋಟಿ ವೆಚ್ಚದ ಯೋಜನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 7:00 IST
Last Updated 17 ಅಕ್ಟೋಬರ್ 2024, 7:00 IST
ಗೊಲ್ಲರಹಳ್ಳಿ- ಹಲಗೂರು ನಡುವೆ ಇರುವ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಬೇಕಾದ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ 
ಗೊಲ್ಲರಹಳ್ಳಿ- ಹಲಗೂರು ನಡುವೆ ಇರುವ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಬೇಕಾದ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ    

ಹಲಗೂರು: ಗೊಲ್ಲರಹಳ್ಳಿ- ಹಲಗೂರು ನಡುವೆ ಇರುವ ಭೀಮಾನದಿಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಉದ್ಘಾಟನೆಗೂ ಮುನ್ನ ಶಿಥಿಲಾವಸ್ಥೆಯ ಹಂತ ತಲುಪಿದೆ. ಕಳೆದ 2018ರಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆ.ಆರ್.ಡಿ.ಸಿ.ಎಲ್.) ವತಿಯಿಂದ ₹2.5 ಕೋಟಿ ವೆಚ್ಚದಲ್ಲಿ ಆರಂಭಿಸಿದ ಸೇತುವೆ ಕಾಮಗಾರಿ ಕೆಲಸ ಇನ್ನೂ ಕುಂಟುತ್ತಾ, ತೆವಳುತ್ತಲೇ ಸಾಗಿದೆ.

ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಿಂದಾಗಿ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಬ್ಯಾಡರಹಳ್ಳಿ, ಕರಲಕಟ್ಟೆ, ಗಾಣಾಳು ಸೇರಿದಂತೆ ಮುತ್ತತ್ತಿ ಮತ್ತು ಭೀಮೇಶ್ವರಿ ಪ್ರಕೃತಿ ಶಿಬಿರ ಈ ಭಾಗದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಕಾಮಗಾರಿ ಆರಂಭಿಸಿ ಆರು ವರ್ಷಗಳು ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕ್ರಮವಹಿಸುತ್ತಿಲ್ಲ ಎಂಬುದು ಈ ಭಾಗದ ಗ್ರಾಮೀಣ ಜನರ ಆರೋಪ.

ADVERTISEMENT

ಕಾಮಗಾರಿ ಆರಂಭಿಸಿದ ನಂತರ ವಾಹನಗಳು ಓಡಾಡಲು ಭೀಮಾ ನದಿಗೆ ಅಡ್ಡಲಾಗಿ ಸಿಮೆಂಟ್ ಪೈಪ್‌ಗಳನ್ನು ಅಳವಡಿಸಿ ಕಚ್ಚಾ ರಸ್ತೆ ನಿರ್ಮಿಸಲಾಗಿತ್ತು. 2022ರಲ್ಲಿ ಪ್ರವಾಹ ಬಂದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ವಾಹನ ಸವಾರರು ಹಲಗೂರು-ಎಚ್.ಬಸಾಪುರ ಮಾರ್ಗವಾಗಿ ತೆರಳುವಂತಾಯಿತು. ನಂತರ ತ್ವರಿತವಾಗಿ ಸೇತುವೆಯ ಚಾವಣಿ ಕಾಮಗಾರಿ ಮುಗಿಸಲಾಯಿತಾದರೂ, ಕಾಮಗಾರಿ ಕೆಲಸ ಪೂರ್ಣಗೊಳ್ಳಲಿಲ್ಲ.

ಕಾಮಗಾರಿ ಕೆಲಸ ನಡೆಯುತ್ತಿದ್ದರೂ ಸೇತುವೆ ಮೇಲೆ ವಾಹನ ಚಲಾಯಿಸಲು ಆರಂಭಿಸಿದರು. ಸೇತುವೆ ಹಾಕಿರುವ ಕಬ್ಬಿಣದ ಕಂಬಿಗಳು ಅಲ್ಲಲ್ಲಿ  ಕಿತ್ತು ಬರುತ್ತಿವೆ. ಇದರ ಮೇಲೆ ದಿನನಿತ್ಯ ಸಾವಿರಾರು ವಾಹನ ಸವಾರರು ಓಡಾಡುತ್ತಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಂದಗತಿಯ ಸೇತುವೆ ಕಾಮಗಾರಿಯಿಂದಾಗಿ ವಾಹನ ಸವಾರರು ದಿನನಿತ್ಯ ತೊಂದರೆ ಎದುರಿಸಬೇಕಾಗಿದೆ. ಜನರ ಸಮಸ್ಯೆ ಅರ್ಥಮಾಡಿಕೊಂಡು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ
-ಸುರೇಶ್ ಕರಲಕಟ್ಟೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ
ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ಮೂರು ಕಾಮಗಾರಿಗಳು ವಿಳಂಬವಾಗಿವೆ. ನವಂಬರ್ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು
-ಎಲ್.ರಘು ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಆರ್.ಡಿ.ಸಿ.ಎಲ್ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.