ADVERTISEMENT

ಸಾಮಾಜಿಕ ಜಾಲತಾಣಕ್ಕೆ ಕಡಿವಾಣ ಅಗತ್ಯ: ಇಂದ್ರಜಿತ್‌ ಲಂಕೇಶ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 12:40 IST
Last Updated 18 ಜೂನ್ 2024, 12:40 IST
<div class="paragraphs"><p> ಇಂದ್ರಜಿತ್‌ ಲಂಕೇಶ್‌</p></div>

ಇಂದ್ರಜಿತ್‌ ಲಂಕೇಶ್‌

   

ಮಂಡ್ಯ: ‘ಅಶ್ಲೀಲ ಫೋಟೊ, ಕೊಳಕು ಭಾಷೆ, ಅವಹೇಳನಕಾರಿ ಸಂದೇಶಗಳಿಂದ ತುಂಬಿ ಹೋಗಿರುವ ಸಾಮಾಜಿಕ ಜಾಲತಾಣಕ್ಕೆ ಕಡಿವಾಣ ಹಾಕಬೇಕು. ಫೇಕ್‌ ಅಕೌಂಟ್‌ ಮೂಲಕ ಪ್ರಚೋದನಕಾರಿ ಸಂದೇಶ ಹರಿಬಿಡುತ್ತಿರುವವರ ವಿರುದ್ಧ ಸೈಬರ್‌ ಕ್ರೈಂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಆಗ್ರಹಿಸಿದರು. 

‘ಗೌರಿ’ ಚಲನಚಿತ್ರದ ಪ್ರಚಾರಾರ್ಥ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣ ಜನಸಾಮಾನ್ಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವ ಶಕ್ತಿಯುತ ಮಾಧ್ಯಮ. ಆದರೆ, ಇದರ ದುರ್ಬಳಕೆ ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗಿದೆ. ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗಳಿಂದ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ಮಾನಸಿಕ ಖಿನ್ನತೆಗೆ ತುತ್ತಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿ ಪ್ರಸಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. 

ADVERTISEMENT

ಕತೆಗಳ ಕೊರತೆ...

ಕನ್ನಡ ಚಿತ್ರರಂಗದಲ್ಲಿ ಉತ್ತಮ ಕತೆಗಳ ಕೊರತೆ ಕಾಡುತ್ತಿದೆ. 1970–80ರ ದಶಕದಲ್ಲಿ ಕತೆ, ಕಾದಂಬರಿ ಆಧಾರಿತ ಸಿನಿಮಾಗಳು ಮೂಡಿಬರುತ್ತಿದ್ದವು. ಪ್ರತಿಭಾವಂತ ಬರಹಗಾರರು ಸಿನಿಮಾ ಕ್ಷೇತ್ರಕ್ಕೆ ಬರುತ್ತಿಲ್ಲ. ಕಾರಣ, ಅವರಿಗೆ ಉತ್ತಮ ಸಂಭಾವನೆ ಸಿಗುತ್ತಿಲ್ಲ. 3 ತಿಂಗಳು ಶ್ರಮವಹಿಸಿ ಕತೆ ಬರೆದರೆ ₹30ರಿಂದ ₹40 ಸಾವಿರ ಕೊಡುತ್ತಾರೆ. ಇದರಿಂದ ಬೇಸತ್ತು ಜಾಹೀರಾತು ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ. ಉತ್ತಮ ಸಂಭಾವನೆ ನೀಡಿದರೆ ಉತ್ತಮ ಕತೆಗಳು ಸಿನಿಮಾ ಕ್ಷೇತ್ರಕ್ಕೆ ಸಿಗುತ್ತವೆ ಎಂದರು. 

ಟಿಕೆಟ್‌ ದರ ಇಳಿಸಿ...

ಟಿಕೆಟ್‌ ದರ ಏರಿಕೆಯಿಂದ ಸಿನಿಮಾ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಅಷ್ಟು ದುಬಾರಿ ಹಣ ತೆತ್ತು ಸಿನಿಮಾ ನೋಡಲು ಬಡ–ಮಧ್ಯಮ ವರ್ಗದ ಜನರು ಮುಂದೆ ಬರುತ್ತಿಲ್ಲ. ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಕೋಟ್ಯಂತರ ಹಣ ಬೇಕು. ಅನಗತ್ಯ ಒತ್ತಡ ಬೀಳುತ್ತದೆ ಮತ್ತು ನಮ್ಮ ಸಂಸ್ಕೃತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಉತ್ತಮ ಸಿನಿಮಾ ಮಾಡಿದರೆ, ಅದೇ ಬೇರೆ ಬೇರೆ ಭಾಷೆಗಳಿಗೆ ಹೋಗುತ್ತದೆ ಮತ್ತು ಉತ್ತಮ ಕಥಾಹಂದರವಿರುವ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬೀಳುತ್ತಾರೆ ಎಂದು ಹೇಳಿದರು. 

ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ...

ದರ್ಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, 2021ರಲ್ಲಿ ದರ್ಶನ್‌ ಅವರ ಒಳ್ಳೆಯದ್ದಕ್ಕೆ ನಾನು ಹೇಳಿದ್ದೆ. ಅವತ್ತು ಸುಧಾರಣೆಯಾಗಿದ್ದರೆ, ಇಂದು ಈ ಅನಾಹುತ ಆಗುತ್ತಿರಲಿಲ್ಲ. ರೇಣುಕಸ್ವಾಮಿ ಪತ್ನಿಗೆ ನ್ಯಾಯ ಕೊಡಿಸಬೇಕು. ವೈಯಕ್ತಿಕವಾಗಿ ₹20 ಸಾವಿರ ನೆರವು ನೀಡುತ್ತೇನೆ. ಚಿತ್ರರಂಗದವರು ಕೂಡ ಆರ್ಥಿಕ ನೆರವು ನೀಡಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.