ADVERTISEMENT

ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಮುಖ್ಯ: ಬಿ.ಎಸ್.ಶ್ರೀಧರ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 13:38 IST
Last Updated 26 ಜೂನ್ 2024, 13:38 IST
ಹಲಗೂರಿನ ಜೆ.ಪಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್. ಶ್ರೀಧರ್ ಮಾತನಾಡಿದರು. ದೇವೇಗೌಡ, ಮೀನಾಕ್ಷಿ ಭಾಗವಹಿಸಿದ್ದರು
ಹಲಗೂರಿನ ಜೆ.ಪಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್. ಶ್ರೀಧರ್ ಮಾತನಾಡಿದರು. ದೇವೇಗೌಡ, ಮೀನಾಕ್ಷಿ ಭಾಗವಹಿಸಿದ್ದರು   

ಹಲಗೂರು: ಉತ್ತಮ ಸಮಾಜ ನಿರ್ಮಾಣದ ಸತ್ಕಾರ್ಯ ಈಡೇರಿಕೆಗೆ ಸಮುದಾಯದ ಒಳಗೊಳ್ಳುವಿಕೆ ಮತ್ತು ವಿದ್ಯಾರ್ಥಿಗಳ ಕೊಡುಗೆ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ಹಲಗೂರು ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಶ್ರೀಧರ್ ತಿಳಿಸಿದರು.

ಹಲಗೂರಿನ ಜೆ.ಪಿ.ಎಂ.ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಲಗೂರು ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಹದಿಹರೆಯದವರು ಮತ್ತು ಯುವಜನರಲ್ಲಿ ಸಣ್ಣ, ಸಣ್ಣ ಆಕರ್ಷಣೆ ಮಾದಕ ಸೇವನೆಯ ಪ್ರಯತ್ನ ಮಾಡಿಸುತ್ತದೆ. ಪ್ರಯತ್ನ ಚಟವಾಗಿ ಬದಲಾಗಲಿದೆ. ಒಂದು ಬಾರಿ ಮಾದಕ ವಸ್ತುಗಳ ದುಶ್ಚಟಕ್ಕೆ ಸಿಲುಕಿದರೆ, ಮಾದಕ ಜಗತ್ತು ತನ್ನ ಭ್ರಮಾ ಲೋಕಕ್ಕೆ ಸೆಳೆದುಕೊಳ್ಳುತ್ತದೆ. ಸಣ್ಣದಾಗಿ ಆರಂಭವಾದ ಚಟ ಹಂತ ಹಂತವಾಗಿ ದೊಡ್ಡದಾಗುತ್ತದೆ. ಕೆಲಸವಿಲ್ಲದ ಯುವಕರು ಹಣ ಹೊಂದಿಸಲು ಸಾಧ್ಯವಾಗದೇ, ದುಶ್ಚಟವನ್ನು ಬಿಡಲು ಸಾಧ್ಯವಾಗದೇ, ಕಳ್ಳತನ ಮತ್ತು ದರೋಡೆಗಳಂತಹ ಸಮಾಜಘಾತುಕ ಕೃತ್ಯಗಳಿಗೆ ಇಳಿಯುತ್ತಾರೆ. ಯುವಕರು ಈ ಮೋಸದ ಜಾಲಕ್ಕೆ ಸಿಲುಕುವ ಮುನ್ನ ಜಾಗೃತರಾಗಿರಬೇಕು ಮತ್ತು ಸುತ್ತಮುತ್ತಲಿನ ಸಮಾಜಕ್ಕೂ ಈ ದುಷ್ಕೃತ್ಯದ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಸಲಹೆ ನೀಡಿದರು.

ADVERTISEMENT

ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಬಗೆಯ ಮಾದಕ ವಸ್ತುಗಳ ಬಳಕೆ ಮಾಡುವುದು, ಮತ್ತು ಸಾಗಣೆ ಮಾಡುವುದು ಕಂಡು ಬಂದರೇ, ಜಾಲದ ಬಗ್ಗೆ ನಿಮಗೆ ಮಾಹಿತಿ ದೊರತರೂ ಅಪರಾಧ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ವಸ್ತುಗಳ ಸಾಗಣೆಯ ಜಾಲ ತಡೆಗಟ್ಟುವ ಮೂಲಕ ಸದೃಢ ಭಾರತ ಕಟ್ಟುವ ಸಂಕಲ್ಪಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕಾಲೇಜು ದಿನಗಳಲ್ಲಿ ಕಾಣಿಸುವ ಕುತೂಹಲಗಳನ್ನು ಬದಿಗೊತ್ತಿ, ದುಶ್ಚಟಗಳಿಂದ ದೂರವಿರಿ. ಉತ್ತಮ ಕಲಿಕೆಯ ಕಡೆಗೆ ಗಮನ ಕೊಡಿ, ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಜಗತ್ತನ್ನು ಅರಿತುಕೊಳ್ಳಿ, ಸಕಾಲಕ್ಕೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಲಭಿಸಲಿದೆ. ಆಗ ಸಮಾಜವೇ ನಿಮ್ಮನ್ನು ಗೌರವಿಸಲಿದೆ ಎಂದರು.

ಈ ಸಂದರ್ಭದಲ್ಲಿ ಸ್ವಾಮಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ದೇವೇಗೌಡ, ಪ್ರಾಂಶುಪಾಲರಾದ ಮೀನಾಕ್ಷಿ, ಉಪನ್ಯಾಸಕರಾದ ಸೋಹೆಲ್ ಅಹಮದ್, ಜಯಂತಿ, ಲಾವಣ್ಯಾ, ಶಿವಮಣಿ, ರಾಜು, ಎಎಸ್ಐ ಸಿದ್ದರಾಜು, ರಫೀಕ್ ನಧಾಪ್ ಭಾಗವಹಿಸಿದ್ದರು.

ಹಲಗೂರಿನ ಜೆ.ಪಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.