ADVERTISEMENT

ಮಂಡ್ಯ: ಜಿಲ್ಲಾಡಳಿತದಲ್ಲಿ ಮೊಳಗುತ್ತಿದೆ ಮಹಿಳಾ ಧ್ವನಿ!

ಡಿ.ಸಿ, ಎಸ್ಪಿ ಎಡಿಸಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸ್ತ್ರೀಶಕ್ತಿ,

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:30 IST
Last Updated 7 ಮಾರ್ಚ್ 2021, 19:30 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ ಹಾಗೂ ಜಿಲ್ಲಾಧಿಕಾರಿ ಎಸ್‌.ಅಶ್ವಥಿ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ ಹಾಗೂ ಜಿಲ್ಲಾಧಿಕಾರಿ ಎಸ್‌.ಅಶ್ವಥಿ   

ಮಂಡ್ಯ: ಜಿಲ್ಲೆಯ ಆಡಳಿತ ಮಹಿಳೆಯರ ಕೈಯಲ್ಲಿದೆ ಎಂದರೆ ತಪ್ಪಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಿಳೆಯರೇ ಆಗಿದ್ದು ಸಕ್ಕರೆ ನಾಡಿನಲ್ಲಿ ಮಹಿಳಾ ಧ್ವನಿ ಮೊಳಗುತ್ತಿದೆ.

ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಮೂರು ವರ್ಷಗಳ ಹಿಂದೆ ಇಂಥದ್ದೇ ವಾತಾವರಣವಿತ್ತು. ಜಿಲ್ಲಾಧಿಕಾರಿಯಾಗಿ ಮಂಜುಶ್ರೀ, ಪೊಲೀಸ್‌ ವರಿಷ್ಠಾಧಿಕಾರಿಯಾಗಿ ರಾಧಿಕಾ ಇದ್ದರು. ಈಗ ಮತ್ತೊಮ್ಮೆ ಡಿ.ಸಿ, ಎಸ್ಪಿ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿರುವುದು ವಿಶೇಷವಾಗಿದೆ.

ಇವರ ಜೊತೆಗೆ ವಿವಿಧ ಇಲಾಖೆಯ ಪ್ರಮುಖ ಹುದ್ದೆಯಲ್ಲಿ ಮಹಿಳೆಯೇ ಇದ್ದು ಸುಲಲಿತವಾಗಿ ಆಡಳಿತ ನಡೆಸುತ್ತಿದ್ದಾರೆ. ಆ ಮೂಲಕ ಮಹಿಳೆ ಎಲ್ಲಾ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲಳು ಎಂಬ ಸಂದೇಶ ನೀಡಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಹುದ್ದೆ ಮುಳ್ಳಿನ ಹಾಸಿಗೆಯಾಗಿದ್ದು ಅದನ್ನು ಹಲವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದೇ ಪರಂಪರೆಯನ್ನು ಈಗ ಎಸ್‌.ಅಶ್ವಥಿ ಮುಂದುವರಿಸುತ್ತಿದ್ದಾರೆ.

ADVERTISEMENT

ಎಸ್‌.ಅಶ್ವಥಿ ಅವರು ಜಿಲ್ಲಾಧಿಕಾರಿಯಾಗಿ ಅದಿಕಾರ ವಹಿಸಿಕೊಂಡು ಕೇವಲ 15 ದಿನ ಕಳೆದಿವೆ. ಈಗಾಗಲೇ ಅವರು ಜಿಲ್ಲೆಯ ಒಳನೋಟವನ್ನು ಅರಿತು ಅಧಿಕಾರಿ ವರ್ಗದಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಚಿವರ ಸಭೆಗಳಲ್ಲಿ ಸಮರ್ಥವಾಗಿ ಉತ್ತರ ನೀಡುತ್ತಾ ಭರವಸೆ ಮೂಡಿಸಿದ್ದಾರೆ. ಕೇರಳ ಮೂಲದವರಾದರೂ ಕನ್ನಡ ಚೆನ್ನಾಗಿ ಮಾತನಾಡುತ್ತಾರೆ. ಅವರು ಅಧಿಕಾರ ವಹಿಸಿಕೊಂಡ 2ನೇ ದಿನದಲ್ಲೇ ಕೋವಿಡ್‌ ಲಸಿಕೆ ಪಡೆಯುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ.

ಮಂಡ್ಯ ಜಿಲ್ಲೆ ಅಪರಾಧ ಪ್ರಕರಣಗಳಲ್ಲಿ ರಾಜ್ಯದ ಗಮನ ಸೆಳೆದಿದೆ. ಇಂತಹ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾತ್ರ ದೊಡ್ಡದಿದೆ. ಇಂತಹ ಜವಾಬ್ದಾರಿಯನ್ನು ಡಾ.ಅಶ್ವಿನಿ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಿಂದೆಯೂ ಹಲವು ಮಂದಿ ಮಹಿಳಾ ಐಪಿಎಸ್‌ ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ಪಾಂಡವಪುರ ಉಪ ವಿಭಾಗಾಧಿಕಾರಿಯಾಗಿದ್ದ ಶೈಲಜಾ ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಜವಾಬ್ದಾರಿ ಹೊತ್ತಿದ್ದು ನಗರದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಹಿಳಾ ಧ್ವನಿ ಮೊಳಗಿಸುತ್ತಿದ್ದಾರೆ.

ಇವರ ಜೊತೆಗೆ ಆಹಾರ ಇಲಾಖೆ ಉಪ ನಿರ್ದೇಶಕಿಯಾಗಿರುವ ಕುಮುದಾ ಅವರು ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ಧಾರೆ. ಅನಧಿಕೃತ ಪಡಿತರ ಚೀಟಿ ವಾಪಸ್‌ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನಧಿಕೃತ ಅಕ್ಕಿ ಸಾಗಣೆ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯಾಗಿರುವ ಟಿ.ವಿ.ಪುಷ್ಪಾ ಅವರು ಅಕ್ರಮ ಕಲ್ಲು ಗಣಿಗಾರಿಕೆ ತಡೆಗೆ ಶ್ರಮಿಸುತ್ತಿದ್ದಾರೆ.

ಶ್ರೀರಂಗಪಟ್ಟಣದ ತಹಶೀಲ್ದಾರ್‌ ಆಗಿ ರೂಪ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿಯಾಗಿ ಸವಿತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆಯುಷ್‌ ಅಧಿಕಾರಿಯಾಗಿ ಡಾ.ಪುಷ್ಪಾ ಹಲವು ವರ್ಷಗಳಿಂದ ಇದ್ದಾರೆ. ಯುವಜನ ಸೇವೆ ಮತ್ತು ಕ್ರೀಡೆ ಇಲಾಖೆ ಸಹಾಯಕ ನಿರ್ದೇಶಕಿಯಾಗಿ ಅನಿತಾ ಕಾರ್ಯರ್ನಿವಹಿಸುತ್ತಿದ್ದಾರೆ.

ಇಷ್ಟೇ ಅಲ್ಲದೇ ಪೊಲೀಸ್‌ ಇಲಾಖೆಯಲ್ಲಿ ಮಹಿಳೆಯರು ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಬಕಾರಿ, ಆರ್‌ಟಿಒ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಸಂತಸ ವ್ಯಕ್ತಪಡಿಸಿದ ಸುಮಲತಾ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಸದೆ ಸುಮಲತಾ ನಡೆಸಿದ ಅಧಿಕಾರಿಗಳ ಸಭೆ ಸಂಪೂರ್ಣ ಮಹಿಳಾಮಯವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸುಮಲತಾ ಅವರು ಮಹಿಳಾ ಅಧಿಕಾರಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಸಂಸದೆ ಸುಮಲತಾ ಅವರೊಂದಿಗೆ ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ, ಭೂವಿಜ್ಞಾನಿ ಟಿ.ವಿ.ಪುಷ್ಪಾ ಇದ್ದಾರೆ

‘ನಾನೂ ಸೇರಿದಂತೆ ಮಂಡ್ಯ ಜಿಲ್ಲೆಯನ್ನು ಮುನ್ನಡೆಸುತ್ತಿರುವ ಅಧಿಕಾರಿಗಳ ತಂಡದಲ್ಲಿ ಎಲ್ಲರೂ ಮಹಿಳೆಯರೇ ಇದ್ದಾರೆ. ಸೋಮವಾರ ಮಹಿಳಾ ದಿನಾಚರಣೆ ಇದ್ದು ಈ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳ ಜೊತೆಗೆ ಕೆಲಸ ಮಾಡಲು ಸಂತಸವಾಗುತ್ತಿದೆ. ಜಿಲ್ಲಾಧಿಕಾರಿ, ಎಸ್ಪಿ, ಎ.ಡಿ.ಸಿ ಎಲ್ಲರೂ ಉತ್ತಮ ಅನುಭವ ಹೊಂದಿರುವ ಅಧಿಕಾರಿಗಳು. ಅವರ ಜೊತೆ ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುತ್ತೇವೆ. ಜಿಲ್ಲೆಯ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನದ ಶುಭಾಶಯ ಕೋರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.