ಮದ್ದೂರು: ತಾಲ್ಲೂಕಿನ ಆಲೂರು ಗ್ರಾಮದ ಕೆರೆಗೆ ಹಾಕಲಾಗಿದ್ದ ತಡೆಗೋಡೆಯು ಕೇವಲ ಒಂದೇ ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚಿನ ಭಾಗ ನಾಪತ್ತೆಯಾಗಿದೆ.
ತಾಲ್ಲೂಕಿನ ಪುರಾಣ ಪ್ರಸಿದ್ಧ ವೈದ್ಯನಾಥಪುರದ ಬಳಿಯಿರುವ ಆಲೂರು ಗ್ರಾಮದ ಪಕ್ಕದಲ್ಲೇ ಈ ಕೆರೆಯಿದೆ. ಇದರ ಬಳಿ ಸಾಗುವ ರಸ್ತೆಯು ಕೆ. ಹೊನ್ನಲಗೆರೆ, ಕೊಕ್ಕರೆ ಬೆಳ್ಳೂರು, ನೀಲಕಂಠನಹಳ್ಳಿ, ಆಗಲಹಳ್ಳಿ, ಕಬ್ಬಾರೆ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಸಾಧಿಸುತ್ತದೆ.
ಈ ರಸ್ತೆಯಲ್ಲಿ 3 ತಿರುವುಗಳಿವೆ. ಗ್ರಾಮದ ವೃತ್ತದಿಂದ ಹೊರವಲಯದಲ್ಲಿರುವ ಬೀರೇಶ್ವರ ದೇವಸ್ಥಾನದವರೆಗೂ ವರ್ಷದ ಹಿಂದೆ ಕಬ್ಬಿಣದ ತಡೆ ಗೋಡೆಯನ್ನು ಹಾಕಲಾಗಿತ್ತು. ಕೆಲ ತಿಂಗಳಲ್ಲಿ ಕಬ್ಬಿಣವನ್ನು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದಾರೆ. ಕೆಲವೆಡೆ ಬೋಲ್ಟ್‌ಗಳನ್ನು ಸಡಿಲಿಸಿರುವುದು ಕಂಡುಬಂದಿದೆ.
ತಾಲ್ಲೂಕು ಕೇಂದ್ರವಾದ ಮದ್ದೂರು ಪಟ್ಟಣಕ್ಕೆ ನಿತ್ಯ ಸಾವಿರಾರು ಮಂದಿ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇದರಿಂದ, ರಾತ್ರಿ ವೇಳೆ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಈ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಆಲೂರು ಗ್ರಾಮದ ಕೆರೆಯ ತಡೆಗೋಡೆಗಳು ನಾಪತ್ತೆಯಾಗಿದೆ. ಇದರಿಂದ ಕತ್ತಲಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ವೇಳೆ ಅಪಾಯ ಎದುರಾಗುವ ಭೀತಿ ಎದುರಾಗಿದೆ-ಪ್ರಭು, ವೈದ್ಯನಾಥಪುರ ನಿವಾಸಿ
ಆಲೂರು ಕೆರೆ ಬಳಿ ಹಾಕಿದ ತಡೆಗೋಡೆ ಕಳ್ಳತನದ ಕುರಿತು ಈಗಾಗಲೇ ಮದ್ದೂರು ಪೊಲೀಸರ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಈ ಬಗ್ಗೆ ಕ್ರಮ ಕೈಗೊಳ್ಳಲು ದೂರು ನೀಡಲಾಗುವುದು-ಹನುಮಂತು, ಸಹಾಯಕ ಎಂಜಿನಿಯರ್ ಪಿ ಡಬ್ಲ್ಯೂಡಿ ಮದ್ದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.