ADVERTISEMENT

ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ: ತನಿಖೆಗೆ ಶಾಸಕರಿಂದ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 23:45 IST
Last Updated 13 ಅಕ್ಟೋಬರ್ 2024, 23:45 IST
ದರ್ಶನ್‌ ಪುಟ್ಟಣ್ಣಯ್ಯ
ದರ್ಶನ್‌ ಪುಟ್ಟಣ್ಣಯ್ಯ   

ಪಾಂಡವಪುರ: ಇಲ್ಲಿನ ಪುರಸಭೆಯ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದು, ಈ ಸಂಬಂಧ ಸಂಪೂರ್ಣ ಮಾಹಿತಿ ನೀಡುವಂತೆ ಗೃಹ ಇಲಾಖೆಯು ಪುರಸಭೆಗೆ ಆದೇಶಿಸಿದೆ.

1994–96ರಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಶಾಸಕರಾಗಿದ್ದ ಅವಧಿಯಲ್ಲಿ ಪಟ್ಟಣದ ಮಹಾತ್ಮ ಗಾಂಧಿ ನಗರ, ಹನುಮಂತ ನಗರ, ಸುಭಾಷ್ ನಗರ ಹಾಗೂ ಹೇಮಾವತಿ ಬಡಾವಣೆ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನು ಮತ್ತು ಖಾಸಗಿಯವರಿಂದ ಜಮೀನು ಖರೀದಿಸಿ ಬಡಾವಣೆ ನಿರ್ಮಾಣ ಮಾಡಿ ಪಟ್ಟಣದ ಬಡ ನಿವಾಸಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.

ಹಂಚಿಕೆ ನಂತರ ಉಳಿದಿದ್ದ ನಿವೇಶನಗಳನ್ನು ಮತ್ತು ಮೂಲ ಫಲಾನುಭವಿಗಳಿಗೆ ಗಮನಕ್ಕೆ ಬಾರದೆ ಕೆಲ ಪ್ರಭಾವಿ ವ್ಯಕ್ತಿಗಳು ನಿವೇಶನಗಳನ್ನು ಅಕ್ರಮವಾಗಿ ಕಬಳಿಸಿ ಅನ್ಯರಿಗೆ ಮಾರಾಟ ಮಾಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಹೀಗಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅರ್ಹರಿಗೆ ನಿವೇಶನ ವಾಪಸ್ಸು ಕೊಡಿಸುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯಲ್ಲಿ 1994–95ರಿಂದ ಈವರೆಗೂ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಶಾಸಕರ ಪತ್ರಕ್ಕೆ ಸ್ಪಂಧಿಸಿರುವ ಗೃಹ ಇಲಾಖೆ ನಿವೇಶನಗಳ ಹಂಚಿಕೆ ಬಗ್ಗೆ ಪುರಸಭೆಯಿಂದ ಮಾಹಿತಿ ಕೇಳಿದೆ ಎಂದು ತಿಳಿದುಬಂದಿದೆ.

ADVERTISEMENT

ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ 1976, 1997–98, 2006 ಹೀಗೆ ಹಲವಾರು ಬಾರಿ ಪಟ್ಟಣದ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ದಾಗ 1994ರಿಂದ 99 ರ ಅವಧಿಯಲ್ಲಿ ಅತಿ ಹೆಚ್ಚು 1053 ನಿವೇಶನವನ್ನು ಹಂಚಿಕೆ ಮಾಡಲಾಗಿದೆ. ಶಾಂತಿನಗರ ಹೊಂದಿಕೊಂಡಂತೆ ನಿ‌ರ್ಮಾಣವಾಗಿರುವ ಬಡಾವಣೆಗಳ ಪೈಕಿ ಮಹಾತ್ಮಗಾಂಧಿ, ಸುಭಾಷ್ ನಗರ ಮತ್ತು ಚಂದ್ರೆ ಸಮೀಪದ ಹನುಮಂತನಗರಗಳಲ್ಲಿ 20X30 ಅಳತೆಯ ನಿವೇಶನಗಳನ್ನು ಪುರಸಭೆ ಅಂದಿನ ಆಡಳಿತ ಮಂಡಳಿ ಮತ್ತು ಆಶ್ರಯ ಸಮಿತಿ ಮೂಲಕ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ. ಆದರೆ ಹಂಚಿಕೆಯಾಗಿ ಉಳಿದಿದ್ದ ಸುಮಾರು ನಿವೇಶಗಳನ್ನು ಬಲಾಢ್ಯರು ತಮ್ ಪ್ರಭಾವದಿಂದ ನಿವೇಶನಗಳನ್ನು ಕಬಳಿಸಿ ಅದಕ್ಕೆ ಅಕ್ರಮವಾಗಿ ಖಾತೆ–ಇ–ಸ್ವ‌ತ್ತು ಮಾಡಿಸಿಕೊಂಡು ಲಕ್ಷಾಂತರ ರೂ.ಗಳಿಗೆ ಅನ್ಯರಿಗೆ ಮಾರಾಟ ಮಾಡಿರುವುದಾಗಿ ನಿವೇಶನ ಕಳೆದುಕೊಂಡ ಅರ್ಹ ಫಲಾನುಭವಿಗಳು ಮತ್ತು ಸಾರ್ವಜನಿಕರ ಆರೋಪಗಳು ಶಾಸಕ ದರ್ಶನ್ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.


ಪುರಸಭೆ ಆಸ್ತಿಯೇ ಮಾಯ: ನಿವೇಶನ ಹಂಚಿಕೆಯಾದ ಬಳಿಕ ಹಣಕಾಸು ತೊಂದರೆಯಿಂದ ಕೆಲವರು ಮನೆ ನಿರ್ಮಿಸಲು ಸಾಧ್ಯವಾಗದೆ ಹಾಗೆಯೇ ಪಾಳು ಬಿಟ್ಟಿದ್ದರು. ಕೆಲಸ ನಿಮಿತ್ತ ಹೊರಗಡೆ ವಾಸವಿರುವ ಫಲಾನುಭವಿಗಳು, ಬಡವರು ಇಂತಹ ಫಲಾನುಭವಿಗಳಿಗೆ ಹಂಚಿಕೆಯಾಗಿದ್ದ ನಿವೇಶನಗಳ ಜತೆಗೆ ಹಂಚಿಕೆಯಾಗಿ ಉಳಿಕೆಯಾಗಿದ್ದ ನಿವೇಶನಗಳು, ಪುರಸಭೆ ಆಸ್ತಿ, ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗ ಹಾಗೂ ಸರ್ಕಾರಿ ಜಾಗಗಳಿಗೂ ಪ್ರಭಾವಿಗಳ ಪಾಲಾಗಿದ್ದು ಇವುಗಳಿಗೆ ಅಕ್ರಮವಾಗಿ ಖಾತೆ, ಇ–ಸ್ವತ್ತು ಆಗಿದೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಅರ್ಹರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

‘ನಿವೇಶನ ಹಂಚಿಕೆ ನಂತರ ಕೆಲವು ನಿವೇಶನಗಳನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ವಿಚಾರಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸ‌ರ್ಕಾರಕ್ಕೆ ಪತ್ರ ಬರೆಯಲಾಗಿದೆ’.
ದರ್ಶನ್ ಪುಟ್ಟಣ್ಣಯ್ಯ, ಶಾಸಕರು
‘ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. ಅರ್ಹ ಫಲಾನುಭವಿಗಳಿಗೆ ನಿವೇಶ ದೊರೆಯಬೇಕಿದೆ. ಈ ಸಂಬಂಧ ಶಾಸಕ ದರ್ಶನ್ ಪುಟ್ಟಣ್ಣಯ್ಯನವರು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ’
ಎಚ್.ಎಲ್.ಮುರುಳೀಧರ್, ಪುರಸಭೆ ಮಾಜಿ ಉಪಾಧ್ಯಕ್ಷರು.
ಪುರಸಭೆ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.