ADVERTISEMENT

ಬೈಯುವುದು ನಮ್ಮ ಸಂಸ್ಕೃತಿಯಲ್ಲ: ಮಹೇಶ ಜೋಶಿ ಟೀಕಾಕಾರರಿಗೆ ಮುದ್ದೇಗೌಡ ತಿರುಗೇಟು

ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಚ್‌.ಎಸ್‌. ಮುದ್ದೇಗೌಡ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 13:37 IST
Last Updated 19 ನವೆಂಬರ್ 2024, 13:37 IST
<div class="paragraphs"><p>ಮುದ್ದೇಗೌಡ ಮಾತನಾಡಿದರು</p></div>

ಮುದ್ದೇಗೌಡ ಮಾತನಾಡಿದರು

   

ಮಂಡ್ಯ: 87ನೇ ನುಡಿಜಾತ್ರೆಯ ಉಪಸಮಿತಿಗಳಿಗೆ ಸದಸ್ಯರ ನೇಮಕ ಮತ್ತು ಜಾಗದ ವಿವಾದ ಸೇರಿದಂತೆ ಎಲ್ಲದಕ್ಕೂ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಕೆಲವರು ವೈಯಕ್ತಿಕ ನಿಂದನೆ, ಏಕವಚನ ಪ್ರಯೋಗ ಮಾಡಿದ್ದಾರೆ. ಬೈಯುವುದೇ ನಮ್ಮ ಸಂಸ್ಕೃತಿಯಾಗಬಾರದು’ ಎಂದು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಚ್‌.ಎಸ್‌. ಮುದ್ದೇಗೌಡ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಉಪಸಮಿತಿಗಳಿಗೆ ಸದಸ್ಯರ ನೇಮಕ ಮತ್ತು ಜಾಗದ ಆಯ್ಕೆ ಈ ಎರಡು ವಿಷಯಗಳಿಗೂ, ಮಹೇಶ ಜೋಶಿ ಅವರಿಗೂ ಸಂಬಂಧವಿಲ್ಲ. ಜಿಲ್ಲಾಡಳಿತ, ಶಾಸಕರು, ಕಸಾಪ ಸದಸ್ಯರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಒಪ್ಪಿಗೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಕಸಾಪ ಅಧ್ಯಕ್ಷರಾದವರಿಗೆ ಕನಿಷ್ಠ ಗೌರವ ಕೊಡಬೇಕು’ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ADVERTISEMENT

‘ಪ್ರತಿಭಟನೆಯ ಮುಂಚೂಣಿ ವಹಿಸಿದ್ದ ಜಗದೀಶ ಕೊಪ್ಪ ಕಸಾಪ ಸದಸ್ಯರೇ ಅಲ್ಲ. ಅವರು ಮಂಡ್ಯದಲ್ಲಿ ಈ ಹಿಂದೆ ಏರ್ಪಡಿಸಿದ್ದ ಸಭೆಗೆ ಬಂದವರು ತಮ್ಮ ವಿಚಾರ ಮಂಡಿಸಬೇಕಿತ್ತು. ವಿಚಾರವನ್ನೇ ಹೇಳದೇ ಸಭೆಯನ್ನು ಬಹಿಷ್ಕರಿಸಿ ಎದ್ದು ಹೋದದ್ದು ಸರಿಯಾದ ನಡವಳಿಕೆ ಅಲ್ಲ. ಭಿನ್ನಾಭಿಪ್ರಾಯಗಳಿದ್ದರೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಸಮ್ಮೇಳನಕ್ಕೆ ಬಹಿಷ್ಕಾರ ಹಾಕುತ್ತೇನೆ ಅಂದ್ರೆ ಏನರ್ಥ?’ ಎಂದು ಪ್ರಶ್ನಿಸಿದರು.

ಸಮ್ಮೇಳನದಲ್ಲಿ ಪ್ರಕಟವಾಗಲಿರುವ 87 ಪುಸ್ತಕಗಳಲ್ಲಿ ಪರಿಷತ್ತಿನ ಅಧ್ಯಕ್ಷರ ಭಾವಚಿತ್ರ ಇರಬಾರದು ಎಂದು ಸಾಂಸ್ಕೃತಿಕ ಉಪಸಮಿತಿಯ ಉಪಾಧ್ಯಕ್ಷರಾಗಿರುವವರು (ಪ್ರೊ.ಜಯಪ್ರಕಾಶಗೌಡ) ಆಕ್ಷೇಪ ಎತ್ತಿದ್ದಾರೆ. ಎಲ್ಲ ಪುಸ್ತಕಗಳಿಗೂ ಪ್ರಧಾನ ಸಂಪಾದಕ ಕಸಾಪ ಅಧ್ಯಕ್ಷರೇ ಅಲ್ಲವೇ? ಎಂದರು. ಸಭೆಯಲ್ಲಿ ಸಲಹೆ ಕೊಡುವ ಬದಲು, ಬರೀ ಟೀಕೆಗಳನ್ನು ಮಾಡುವುದು ಎಷ್ಟು ಸರಿ? ಎಂದು ಬೇಸರ ವ್ಯಕ್ತಪಡಿಸಿದರು.

ಮಹೇಶ ಜೋಶಿಯವರು ‘ಸಮ್ಮೇಳನದಲ್ಲಿ ಕಸಾಪ ಪದಾಧಿಕಾರಿಗಳ ಪುಸ್ತಕಗಳನ್ನು ಪ್ರಕಟಿಸಿದರೆ ತಪ್ಪು ಅರ್ಥ ಹೋಗುತ್ತದೆ’ ಎಂಬ ಭಾವನೆಯಿಂದ ಐದಾರು ಪುಸ್ತಕಗಳನ್ನು ನಿರ್ದಾಕ್ಷಿಣ್ಯವಾಗಿ ಪಟ್ಟಿಯಿಂದ ಹೊರಗಿಡಿಸಿದ್ದಾರೆ. ಮುಖ್ಯಮಂತ್ರಿಯವರ ಅನುಮತಿ ಪಡೆದು ವಿದೇಶಗಳಲ್ಲಿರುವ 500 ಭಾರತೀಯರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ. ಇದನ್ನೂ ಕೆಲವರು ಟೀಕಿಸಿದ್ದಾರೆ. ಇದನ್ನು ನಾವು ಸ್ವಾಗತಿಸಬೇಕಲ್ಲವೇ? ಎಂದರು.

‘ಹಾವೇರಿ ನಂತರ ಮಂಡ್ಯದಲ್ಲಿ ಸಮ್ಮೇಳನ ಆಯೋಜಿಸುತ್ತೇವೆ’ ಎಂದಿದ್ದ ಮಹೇಶ ಜೋಶಿಯವರು ನುಡಿದಂತೆ ನಡೆದಿದ್ದಾರೆ. ಜೋಶಿಯವರ ಬಗ್ಗೆ ವಿನಾಕಾರಣ ಟೀಕೆ ಮಾಡುತ್ತಾ, ಅವರ ಉತ್ಸಾಹಕ್ಕೆ ತಣ್ಣೀರು ಎರಚಬೇಡಿ. ಅವರೊಂದಿಗೆ ಕೈಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.