ADVERTISEMENT

ಮಂಡ್ಯ: ರಾತ್ರಿಯಿಡೀ ನೀಲಗಾರರ ಕತೆ ಕೇಳಿ...

ಮಳವಳ್ಳಿ ಎಂ ಮಹಾದೇವಸ್ವಾಮಿ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಎಂ.ಎನ್.ಯೋಗೇಶ್‌
Published 22 ಜನವರಿ 2022, 19:31 IST
Last Updated 22 ಜನವರಿ 2022, 19:31 IST
ಮಳವಳ್ಳಿ ಎಂ ಮಹಾದೇವಸ್ವಾಮಿ
ಮಳವಳ್ಳಿ ಎಂ ಮಹಾದೇವಸ್ವಾಮಿ   

ಮಂಡ್ಯ: ನೀಲಗಾರ ಸಂಪ್ರದಾಯದ ಸಿದ್ದಪ್ಪಾಜಿ, ಮಂಟೆಸ್ವಾಮಿ, ರಾಚಪ್ಪಾಜಿ ಮುಂತಾದ ಪವಾಡಪುರುಷರ ಕತೆ ಹೇಳುವ ಮಳವಳ್ಳಿ ಎಂ.ಮಹಾದೇವಸ್ವಾಮಿ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿದೆ.

ಜನಪದ ಗೀತೆಗಳನ್ನೇ ಉಸಿರಾಡುವ ಮಹಾದೇವಸ್ವಾಮಿ ಅವರು ಮಳವಳ್ಳಿಯ ಬಸ್‌ ನಿಲ್ದಾಣದಲ್ಲಿ ಹಾಡುತ್ತಾ, ಭಿಕ್ಷೆ ಬೇಡುತ್ತಾ ಊರೂರು ಸುತ್ತಿದವರು. ಅವರ ಬದುಕೇ ಜನಪದ ಗೀತೆಗಳ ಭಂಡಾರ, ಸಾವಿರಾರು ಗೀತೆಗಳನ್ನು ಉಸಿರಾಡುವ ಅವರು ಕೇಳುಗರ ಮನಸೂರೆಗೊಂಡವರು. ನೀಲಗಾರರ ಸಂಪ್ರದಾಯದ ಜೊತೆಗೆ ದೇವರಗುಡ್ಡ ಸಂಪ್ರದಾಯದ ಮಲೆ ಮಹಾದೇಶ್ವರ ಗೀತೆಗಳನ್ನೂ ಮೈಗೂಡಿಸಿಕೊಂಡು ರಾಜ್ಯದಾದ್ಯಂತ ತಮ್ಮ ನಾದ ಸುಧೆ ಹರಿಸಿದ್ದಾರೆ.

ಮಹಾದೇವಸ್ವಾಮಿ ಅವರು 7 ರಾತ್ರಿಗಳ ಕಾಲ ಮಲೆ ಮಹಾದೇಶ್ವರನ 7 ಅಧ್ಯಾಯದ ಕತೆ ಹೇಳುತ್ತಾರೆ. 4 ರಾತ್ರಿಗಳ ಕಾಲ ಮಂಟೆಸ್ವಾಮಿ ಕತೆ ಬಿಚ್ಚಿಡುತ್ತಾರೆ. ಸಂಕಮ್ಮ, ನಂಜುಂಡೇಶ್ವರ, ಬಿಳಿಗಿರಿ ರಂಗನಾಥ, ನೀಲವೇಣಿ, ಚಾಮುಂಡೇಶ್ವರಿ ಮುಂತಾದ ಜನಪದ ಕತೆಗಳನ್ನು ತಮ್ಮ ನೆನಪಿನ ಅಂಗಳದಲ್ಲಿ ತುಂಬಿಕೊಂಡಿದ್ದಾರೆ. ಹೆಗಲ ಮೇಲೆ ತಂಬೂರಿ, ಬೆರಳಲ್ಲಿ ಗಗ್ರ ಹಿಡಿದು ಕೂತರೆ ಹಗಲು– ರಾತ್ರಿಗಳ ವ್ಯತ್ಯಾಸ ಮರೆತು ಹೋಗುತ್ತದೆ.

ADVERTISEMENT

ಮಹಾದೇವಸ್ವಾಮಿ ಅವರು ಬಸ್‌ ಹತ್ತಿ ಪ್ರಯಾಣಿಕರಿಂದ ಭಿಕ್ಷೆ ಪಡೆದು ಹೊಟ್ಟೆ ಪಾಡು ಮಾಡುತ್ತಿದ್ದರು. ಹಳ್ಳಿಗಳಿಗೆ ತೆರಳಿ ಬೀದಿಬೀದಿಯಲ್ಲಿ ಹಾಡಿ ದವಸ ಧಾನ್ಯ ಸಂಗ್ರಹಿಸುತ್ತಿದ್ದರು. ಜನರು ಅವರನ್ನು ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆದೇವರ ಮೇಲೆ ಪದ ಕಟ್ಟಿ ಹಾಡಿಸುತ್ತಿದ್ದರು.

ಅವರು ಮಾದಯ್ಯ– ಮಂಚಮ್ಮ ಅವರ ಪುತ್ರ, ತಂದೆ ಶಹನಾಯಿ ನುಡಿಸುತ್ತಿದ್ದರು. ತಾಯಿ ಸೋಬಾನೆ ಪದ ಹಾಡುಗಾರ್ತಿ. ಮನೆಯಲ್ಲೇ ಜನಪದ ಗೀತೆಗಳು ತುಂಬಿದ್ದವು. ಜೊತೆಗೆ ಅವರ ಡಾ.ರಾಜ್‌ಕುಮಾರ್ ಚಿತ್ರಗಳ ಅಪ್ಪಟ ಅಭಿಮಾನಿ. ಆರಂಭದಲ್ಲಿ ರಾಜ್‌ಕುಮಾರ್‌ ಗೀತೆಗಳನ್ನು ಮನಸಾರೆ ಹಾಡುತ್ತಿದ್ದರು. ಅವರ ಪ್ರತಿಭೆ ಗುರುತಿಸಿದ ಉಳ್ಳಂಬಳ್ಳಿ ಮಹದೇವಪ್ಪ ಅವರು ಜನಪದ ಕತೆಗಳ ಪಾಠ ಹೇಳಿಕೊಟ್ಟರು.

ನೂರಾರು ಕತೆಗಳನ್ನು ಮನದಾಳದಲ್ಲಿಟ್ಟುಕೊಂಡ ಮಹಾದೇವಸ್ವಾಮಿ ಅವರು ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುವುದನ್ನು ಬಿಟ್ಟು ತಮ್ಮದೇ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ಕತೆಗಳಿಗೆ ಹಾಡು ಕಟ್ಟಿ ಗಾಯನ ಪ್ರಸ್ತುತಪಡಿಸಿದರು. ಮೈಸೂರು ದಸರಾ ಸೇರಿದಂತೆ ಹಲವು ಉತ್ಸವಗಳಲ್ಲಿ ತಮ್ಮ ಗಾನಗಂಗೆ ಹರಿಸಿದರು.

ಕ್ಯಾಸೆಟ್‌ ಲೋಕದಲ್ಲಿ ಮಹಾದೇವಸ್ವಾಮಿ ಅವರ ಸಾಧನೆ ಬಲು ದೊಡ್ಡರು. 90 ದಶಕದಲ್ಲಿ ಅವರ ಕ್ಯಾಸೆಟ್‌ಗಳು ಕೇಕ್‌ ಮಾದರಿ ಮಾರಾಟವಾಗುತ್ತಿದ್ದವು. ಸಿದ್ದಪ್ಪಾಜಿ ಪವಾಡ, ಮಹಾದೇಶ್ವರ ಮಹಿಮೆ, ಶಿವಶರಣೆ ಸಂಕಮ್ಮ, ಬೇವಿನಹಟ್ಟಿ ಕಾಳಮ್ಮ, ಆಲಂಬೋಡಿ ಜುಂಜೇಗೌಡ, ನೀಲವೇಣಿ, ಚನ್ನಿಗರಾಮ, ಚಾಮುಂಡೇಶ್ವರಿ ಸೇರಿ 150ಕ್ಕೂ ಹೆಚ್ಚು ಕೆಸೆಟ್‌, ಸಿಡಿಗಳು ಹೊರಬಂದಿವೆ. ‘ಮಾದೇಶ್ವರ...ದಯೆ ಬಾರದೆ, ಬರಿದಾದ ಬಾಳಲ್ಲಿ ಬರಬಾರದೆ’ ಗೀತೆ ಈಗಲೂ ಜನರ ನಾಲಗೆಯ ಮೇಲೆ ನಲಿಡಾಡುತ್ತಿದೆ.

ಮೈಸೂರು ಆಕಾಶವಾಣಿ ಎ ಶ್ರೇಣಿ ಕಲಾವಿದರೂ ಆಗಿರುವ ಅವರು ಸಾವಿರಾರು ಗೀತೆಗಳಿಗೆ ಜೀವ ತುಂಬಿದ್ದಾರೆ. ಅಮೆರಿಕದಲ್ಲಿ ಕನ್ನಡ ಜನಪದ ಗೀತೆ ಮೊಳಗಿಸಿದ್ದಾರೆ. ಅವರ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ದೊಡ್ಡಮನೆ ಸಿರಿ ಪ್ರಶಸ್ತಿ, ಕಲಾ ಕೇಸರಿ, ಜನಾನಪದ ಜಂಗಮ ಪ್ರಶಸ್ತಿ ಸಂದಿವೆ. ಈಗ 63ನೇ ವಯಸ್ಸಿನಲ್ಲಿ ಜಾನಪದ ಅಕಾಡೆಮಿ ಅವರ ಸೇವೆ ಗುರುತಿಸಿ ಪ್ರಶಸ್ತಿ ಘೋಷಿಸಿದೆ.

ಜನಪದ ಸಾಹಿತ್ಯ ಉಳಿಯಲಿ

‘ಇತಿಹಾಸ, ಪರಂಪರೆ ಉಳಿಯಬೇಕಾದರೆ ಜನಪದ ಸಂಸ್ಕೃತಿ ಉಳಿಯಬೇಕು. ಬಾಯಿಯಿಂದ ಬಾಯಿಗೆ ಬಂದ ಜನಪದ ಗೀತೆಗಳು ಮುಂದಿನ ಪೀಳಿಗೆಗೂ ಸಾಗಬೇಕು. ಯುವ ಪೀಳಿಗೆ ಜನಪದ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಆದರೆ ಯುವಪೀಳಿಗೆ ಸಿನಿಮಾ ಹಾಡುಗಳಿಗೆ ಮರುಳಾಗುತ್ತಿದೆ. ಇಂದು ಹುಟ್ಟುವ ಸಿನಿಮಾ ಹಾಡುಗಳು ಇಂದೇ ಸಾಯುತ್ತಿವೆ. ಹೀಗಾಗಿ ಶಾಶ್ವತವಾದ ಜನಪದ ಸಾಹಿತ್ಯ, ಗೀತೆಗಳ ಕಲಿಕೆಯತ್ತ ಯುವಕರು ಬರಬೇಕು, ಜನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಮಳವಳ್ಳಿ ಎಂ ಮಹಾದೇವಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.