ಮಂಡ್ಯ: ‘ಕೋವಿಡ್ ನಿರ್ಬಂಧದ ಹೆಸರಿನಲ್ಲಿ ಪಂಚರತ್ನ ರಥಯಾತ್ರೆ ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಈ ಕುರಿತು ಕೇಶವ ಕೃಪದಲ್ಲೇ ಚರ್ಚೆ ನಡೆಸಲಾಗಿದೆ’ ಎಂದು ಜೆಡಿಎಸ್ ಶಾಸಕಾಂಗದ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು.
ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಥಯಾತ್ರೆಯ ಅಲೆ ಕಂಡು ಬಿಜೆಪಿ ಮುಖಂಡರಿಗೆ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಕೋವಿಡ್ ನೆಪದಲ್ಲಿ ಯಾತ್ರೆ ಸ್ಥಗಿತಗೊಳಿಸುವ ಚರ್ಚೆ ನಡೆದಿದೆ. ಕೋವಿಡ್ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಮುಂಜಾಗೃತಾ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ, ಅದಕ್ಕೆ ನಾನೂ ಸಹಕಾರ ನೀಡುತ್ತೇನೆ’ ಎಂದರು.
‘ವಿಧಾನಸಭಾ ಅಧಿವೇಶನಕ್ಕಿಂತ ನನಗೆ ಪಂಚರತ್ನ ರಥಯಾತ್ರೆಯೇ ಮುಖ್ಯ. ಅಧಿವೇಶನದಲ್ಲಿ ಕುಳಿತು ಮಾತನಾಡಿಬಿಟ್ಟರೆ ಸಮಸ್ಯೆಗಳು ಸರಿಯಾಗುವುದಿಲ್ಲ. ಕಳೆದ ಮೂರು ದಿನಗಳಿಂದ ಅಧಿವೇಶನದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇನೆ. 75 ವರ್ಷಗಳಿಂದ ಆಗಿರುವ ಅನಾಹುತಗಳನ್ನು ಸರಿಪಡಿಸಬೇಕಾಗಿದೆ. ಜನರ ನಡುವೆ ಇದ್ದು ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ಧೇನೆ’ ಎಂದರು.
‘ಪಂಚಮಸಾಲಿ ಮೀಸಲಾತಿ ಮಧ್ಯಂತರ ವರದಿ ವಿಚಾರದಲ್ಲಿ ಚುನಾವಣೆ ಗಿಮಿಕ್ ಇದೆ. ತಾತ್ಕಾಲಿಕವಾಗಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವೈಜ್ಞಾನಿಕವಾಗಿ ಕಾನೂನು ವ್ಯಾಪ್ತಿಯಲ್ಲಿ ಸಮುದಾಯಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಬೇರೆ ಸಮುದಾಯಗಳ ಪರಿಸ್ಥಿತಿ ಬಗ್ಗೆಯೂ ತೀರ್ಮಾನ ಮಾಡಬೇಕು’ ಎಂದರು.
‘ಕರ್ನಾಟಕದ ಮೇಲೆ ಚೀನಾ ರೀತಿ ಹೋರಾಟ ಮಾಡುತ್ತೇವೆ ಎಂಬ ಹೇಳಿಕೆ ಕೀಳುಮಟ್ಟದಿಂದ ಕೂಡಿದೆ. ಒಕ್ಕೂಟ ವ್ಯವಸ್ಥೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಜ್ಯ ಇನ್ನೊಂದು ರಾಜ್ಯದ ಮೇಲೆ ದಾಳಿ ಮಾಡಲು ಸಾಧ್ಯವೇ’ ಎಂದುಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.