ADVERTISEMENT

ಜೆಡಿಎಸ್‌ಗೆ ತೀವ್ರ ಮುಖಭಂಗ: ಮದ್ದೂರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:29 IST
Last Updated 9 ಸೆಪ್ಟೆಂಬರ್ 2024, 15:29 IST
<div class="paragraphs"><p>ಮದ್ದೂರು ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆಯಾದ ಕೋಕಿಲಾ ಅರುಣ್ ಹಾಗೂ ಪ್ರಸನ್ನ ಶಾಸಕ ಕೆ.ಎಂ. ಉದಯ್‌ ಅವರೊಂದಿಗೆ ವಿಜಯೋತ್ಸವ ಆಚರಿಸಿದರು</p></div>

ಮದ್ದೂರು ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆಯಾದ ಕೋಕಿಲಾ ಅರುಣ್ ಹಾಗೂ ಪ್ರಸನ್ನ ಶಾಸಕ ಕೆ.ಎಂ. ಉದಯ್‌ ಅವರೊಂದಿಗೆ ವಿಜಯೋತ್ಸವ ಆಚರಿಸಿದರು

   

– ಪ್ರಜಾವಾಣಿ ಚಿತ್ರ

ಮದ್ದೂರು: ಇಲ್ಲಿನ ಪುರಸಭೆಯ 2ನೇ ಅವಧಿ ಅಧ್ಯಕ್ಷರಾಗಿ ಕೋಕಿಲಾ ಅರುಣ್ ಹಾಗೂ ಉ‍‍ಪಾಧ್ಯಕ್ಷರಾಗಿ ಪ್ರಸನ್ನ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ADVERTISEMENT

ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಯು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿತ್ತು. ‘ಕೇವಲ ಮೂರು 3 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷವನ್ನು ಹೇಗಾದರೂ ಮಾಡಿ ಪುರಸಭೆಯ ಗದ್ದುಗೆಗೆ ತರಬೇಕೆಂದು ಶಾಸಕ ಕೆ.ಎಂ. ಉದಯ್ ಮಾಡಿದ ಕಸರತ್ತು ಯಶಸ್ಸು ಕಂಡಿದೆ’ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಕೋಕಿಲ ಅರುಣ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಆಯ್ಕೆ ಬಯಸಿ ನಾಮಪತ್ರಗಳನ್ನು ಸಲ್ಲಿಸಿದ್ದರು. ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಶೋಭಾ ರಾಣಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮನೋಜ್ ಸ್ಪರ್ಧಿಸಿದ್ದರು.

ಕಾಂಗ್ರೆಸ್ ಪರ ಶಾಸಕ ಉದಯ್ ಮತವೂ ಸೇರಿದಂತೆ 15 ಮತಗಳು ಬಂದವು. ಇವುಗಳಲ್ಲಿ ಕಾಂಗ್ರೆಸ್‌ನ 3, ಜೆಡಿಎಸ್‌ನ 6, ಪಕ್ಷೇತರರಾದ ನಾಲ್ವರು ಹಾಗೂ ಬಿಜೆಪಿಯ ಒಂದು ಮತ ಸೇರಿತ್ತು. ಜೆಡಿಎಸ್ ಪರ 8 ಮತಗಳು ಲಭಿಸಿದವು. ಜೆಡಿಎಸ್‌ನ ಐವರು, ಕಾಂಗ್ರೆಸ್‌ನ  ಒಬ್ಬರು ಹಾಗೂ ಒಬ್ಬರು ‍ಪಕ್ಷೇತರರು ಬೆಂಬಲಿಸಿದರು.

ಅಂತಿಮವಾಗಿ ಕೋಕಿಲಾ ಅರುಣ್ ಹಾಗೂ ಪ್ರಸನ್ನ 7 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಶಿವಮೂರ್ತಿ ಘೋಷಿಸಿದರು.

ಬಳಿಕ ಮಾತನಾಡಿದ ಶಾಸಕ, ‘ಕಾಂಗ್ರೆಸ್‌ನ ಸದಸ್ಯರು ಮೂರೇ ಮಂದಿ ಇದ್ದಾರೆ. ಹೀಗಿರುವಾಗ 15 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಸಂತಸ ತಂದಿದೆ’ ಎಂದರು.

‘ಅಭಿವೃದ್ಧಿಯ ದೃಷ್ಟಿಯಿಂದ ಬೇರೆ ಪಕ್ಷದ ಸದಸ್ಯರು ಕೂಡಾ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು’ ಎಂದು ಹೇಳಿದರು.

‘ಇಲ್ಲಿ ಹಿಂದೆ ಬಹಳಷ್ಟು ಹೊಂದಾಣಿಕೆ ರಾಜಕಾರಣ ನಡೆಯುತ್ತಿತ್ತು ಹಾಗೂ ಹಿಂದಿನಿಂದಲೂ ವಿರೋಧ ಪಕ್ಷಕ್ಕೆ ಸಹಾಯ ಮಾಡಿಕೊಂಡು ಬರುತ್ತಿದ್ದರು. ಈಗ, ಹೊಸ ಅಧ್ಯಾಯ ಪ್ರಾರಂಭವಾಗಿದೆ’ ಎಂದರು.

ಆಪರೇಷನ್ ಹಸ್ತ ನಡೆಸಲಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದೆಲ್ಲಾ ಸುಳ್ಳು. ಆಪರೇಷನ್ ಹಸ್ತ ಎಲ್ಲಿಂದ ಬಂತು? ಎಲ್ಲ ಸದಸ್ಯರ ಸಹಕಾರದಿಂದ ಪುರಸಭೆ ಅಧಿಕಾರ ಹಿಡಿದ್ದಿದ್ದೇವೆ. ನಾವು ಯಾರನ್ನೂ ಹೈಜಾಕ್ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜೆಡಿಎಸ್‌ನವರು ಗೆಲ್ಲುವ ಪರಿಸ್ಥಿತಿ ಇದ್ದಿದ್ದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬರುತ್ತಿದ್ದರು. ನಂಬರ್ ಇಲ್ಲದ ಕಾರಣ ಮುಖಭಂಗವಾಗುತ್ತದೆ ಎಂದು ಅವರು ಬರಲಿಲ್ಲ’ ಎಂದು ಟೀಕಿಸಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಮುಖಂಡರಾದ ಕದಲೂರು ರಾಮಕೃಷ್ಣ, ನಿಡಘಟ್ಟ ಪ್ರಕಾಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.