ಮಂಡ್ಯ: ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ಕಾರ್ಯಕರ್ತರಲ್ಲಿ ಕೆಲ ಕಿಡಿಗೇಡಿಗಳು ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ, ಕನಕದಾಸ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಲೆಕ್ಸ್ ಹರಿದು ಹಾಕಿದ್ದಾರೆ ಎಂದು ಕುರುಬರ ಸಂಘ ಜಿಲ್ಲಾ ಘಟಕ ಆರೋಪಿಸಿದೆ.
ಸೋಮವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಸುರೇಶ್, ‘ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ಕಿಡಿಗೇಡಿಗಳು ಅಕ್ರಮವಾಗಿ ಪ್ರವೇಶಿಸಿ ಕಿಟಕಿ ಗಾಜುಗಳನ್ನು ಒಡೆದು ವಿಕೃತಿ ಮೆರೆದಿದ್ದಾರೆ. ಕನಕದಾಸ ಹಾಗೂ ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಹಾನಿ ಮಾಡಿ, ಫ್ಲೆಕ್ಸ್ ಹರಿದಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಸೇರಿದ್ದಾರೆಂಬ ಕಾರಣಕ್ಕೆ ಹಾಸ್ಟೆಲ್‌ಗೆ ನುಗ್ಗಿದ್ದಾರೆ. ದಾಸಶ್ರೇಷ್ಠ ಕನಕದಾಸರ ಭಾವಚಿತ್ರ ಹರಿದಿರುವುದು ಖಂಡನೀಯ. ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಘಟನೆಯನ್ನು ಖಂಡಿಸಿ ಸಂಘವು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ’ ಎಂದು ಎಚ್ಚರಿಸಿದರು.
ಬಿಜೆಪಿಯವರು ಧರ್ಮದ ಆಧಾರದಲ್ಲಿ ಜನರನ್ನು ಪ್ರಚೋದಿಸಲು ಹೊರಟಿದ್ದಾರೆ. ಸಮಾಜದಲ್ಲಿ ಘರ್ಷಣೆ, ಹಿಂಸೆ ಸೃಷ್ಟಿಸಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದೇ ಅವರ ಕಾರ್ಯಸೂಚಿ.– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಕೆರಗೋಡು ಘಟನೆ ಬಿಜೆಪಿಯ ಗುಪ್ತ ಕಾರ್ಯಸೂಚಿ. ಬಹುಸಂಖ್ಯಾತರನ್ನು ಓಲೈಕೆ ಮಾಡಲು ಬಿಜೆಪಿ ಈ ರೀತಿ ಮಾಡುತ್ತಿದೆ.–ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಮರು ಸ್ಥಾಪನೆಯಾಗುವವರೆಗೂ ಹೋರಾಟ ನಡೆಯಲಿದೆ. ಭಾವನಾತ್ಮಕ ವಿಚಾರದಲ್ಲಿ ಜನ ದಂಗೆ ಎದ್ದರೆ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ.–ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ
ಕೇಸರಿ ಧ್ವಜಕ್ಕೆ ಅವಮಾನವಾದಾಗ, ಒಂದು ಧರ್ಮದ ತುಷ್ಟೀಕರಣ ಮಾಡಿದಾಗ ಹೋರಾಡಿ ಅಧಿಕಾರಕ್ಕೆ ಬಂದಿದ್ದೆವು. ಕೇಸರಿ ಅಂದ್ರೆ ಬಿಜೆಪಿ ಎಂದು ಬ್ರಾಂಡ್ ಮಾಡಿದ್ದೀರಿ. ಅದನ್ನೇ ನಾವು ಒಪ್ಪಿಕೊಂಡಿದ್ದೇವೆ.–ಟಿ.ಎಸ್.ಶ್ರೀವತ್ಸ, ಶಾಸಕ
‘ಕಾಂಗ್ರೆಸ್‌ನವರಿಗೆ ಕೇಸರಿ, ಹಿಂದೂಗಳನ್ನು ಕಂಡರೂ ಆಗಲ್ಲ. ತುಷ್ಟೀಕರಣಕ್ಕೆ ಕೆರಗೋಡಿನಲ್ಲಿ ಹನುಮನ ಧ್ವಜ ತೆಗೆದಿದ್ದಾರೆ.–ಪ್ರಮೋದ ಮುತಾಲಿಕ್, ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.