ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಬೃಂದಾವನದಲ್ಲಿ, ದಸರಾ ಉತ್ಸವದ ಅಂಗವಾಗಿ ಬುಧವಾರ ಸಂಜೆ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡ ನಡೆಸಿಕೊಟ್ಟ ಕನ್ನಡ ಡಿಂಡಿಮ ಕಾರ್ಯಕ್ರಮ ಕೇಳುಗರಿಗೆ ಮುದ ನೀಡಿತು.
‘ಉಳುವಾ ಯೋಗಿಯ ನೋಡಲ್ಲಿ’ ಹಾಡಿನೊಂದಿಗೆ ಆರಂಭವಾದ ಕಾರ್ಯಕ್ರಮ ಒಂದು ತಾಸಿಗೂ ಹೆಚ್ಚು ಕಾಲ ನಡೆಯಿತು. ಕಿಕ್ಕೇರಿ ಕೃಷ್ಣಮೂರ್ತಿ ಅವರ ಕಂಠದಲ್ಲಿ ಕುವೆಂಪು ರಚಿತ ‘ಆನಂದಮಯ ಈ ಜಗ ಹೃದಯ’, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’, ‘ಭಾರತಾಂಬೆಯೆ ತಾಯಿ ಪೂಜಿಸುವ ಬಾರಾ’ ಹಾಡುಗಳು ಹೊಮ್ಮಿದವು.
ಗಾಯಕಿ ಮಂಗಳಾ ರವಿ ಅವರು ದ.ರಾ. ಬೇಂದ್ರೆ ರಚನೆಯ ‘ಘಮ ಘಮಾಡಿಸ್ತಾವ ಮಲ್ಲಿಗೀ’, ‘ಮುಗಿಲ ಮಾರಿಗೆ ರಾಗ ರತಿಯ’ ಹಾಡುಗಳನ್ನು ಹಾಡಿ ರಂಜಿಸಿದರು. ಮಧು ಮನೋಹರ್ ಅವರು ‘ಬಾ ಒಲವೇ’, ‘ಈ ಭಾನು ಈ ಚುಕ್ಕಿ’, ಪ್ರದೀಪ್ ಅವರ ಹಾಡಿದ ಪುತಿನ ರಚನೆಯ ‘ಹೆಸರೇ ಇಲ್ಲದವರು’, ಕೆ.ಎಸ್. ನರಸಿಂಹಸ್ವಾಮಿ ರಚನೆಯ ‘ನಾವು ಭಾರತೀಯರು’ ಹಾಡುಗಳು ಗಮನ ಸೆಳೆದವು.
ಗಾಯಕರು ದಾಸರ ಪದಗಳು ಮತ್ತು ವಚನಗಳಿಗೂ ದನಿಯಾದರು. ಈ ತಂಡದ ಗಾಯನಕ್ಕೆ ಇಂದು ಶೇಖರ್, ರಾಘವೇಂದ್ರ ಪ್ರಸಾದ್, ಕಾರ್ತಿಕ್ ಪಾಂಡವಪುರ, ವಿಲ್ಸನ್, ಭರತ್ ಮತ್ತು ಕೃಷ್ಣ ಅವರ ಪಕ್ಕ ವಾದ್ಯವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.