ಮಂಡ್ಯ: ಕನ್ನಡ– ಕನ್ನಡಿಗ ಹಾಗೂ ಕರ್ನಾಟಕದ ಸಾರ್ವಭೌಮವನ್ನು ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಪ್ರತ್ಯೇಕ ರಾಜ್ಯದ ಬಗ್ಗೆ ಕೆಲವರು ಧ್ವನಿ ಎತ್ತುತ್ತಿರುವುದು ಖಂಡನೀಯ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕ ಶ್ರೇಷ್ಠ ರಾಜ್ಯವಾಗಿದೆ. ದೇಶಕ್ಕೆ ನಮ್ಮ ರಾಜ್ಯ ಅತೀ ಹೆಚ್ಚು ಆದಾಯ ನೀಡುತ್ತದೆ. ನಾಡಿನ ಎಲ್ಲಾ ಭಾಗದ ಮುಖಂಡರ ತ್ಯಾಗ, ಬಲಿದಾನಗಳಿಂದ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಇದನ್ನು ಒಡೆಯುವ ಬಗ್ಗೆ ಯಾರೂ ಹೇಳಿಕೆ ನೀಡಬಾರದು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ಸಲ್ಲಿಸಿದ ವರದಿಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು. ರಾಜ್ಯದ ಕೆಲವು ಭಾಗಗಳು ಅಭಿವೃದ್ಧಿಯಾಗಿವೆ, ಇನ್ನೂ ಕೆಲವು ಹಿಂದುಳಿದಿವೆ. ಈ ಅಸಮತೋಲನವನ್ನು ಸರಿದೂಗಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಲವು ತಾಲ್ಲೂಕುಗಳು ಶಿಕ್ಷಣ, ಉದ್ಯೋಗ, ಉದ್ಯಮ, ಆರೋಗ್ಯ ಸೇರಿ ಮೂಲ ಸೌಲಭ್ಯಗಳಲ್ಲಿ ಹಿಂದುಳಿದಿವೆ. ಸರ್ಕಾರ ಅನುದಾನವನ್ನು ಸಮನಾಗಿ ಹಂಚಿಕೆ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಖಂಡ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಕೆಲವರು ಪ್ರತ್ಯೇಕತೆಯ ವಿಚಾರ ಮಾತನಾಡುತ್ತಿರುವುದು ಸರಿಯಲ್ಲ. ಕನ್ನಡ ನಾಡು ಹಾಗೂ ಕನ್ನಡಿಗರ ಐಕ್ಯತೆಯ ಕೂಗು ಎಲ್ಲೆಲ್ಲೂ ಮೊಳಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಎಂ.ಎಸ್.ಚಿದಂಬರ್, ರಮೇಶ್, ಅಶೋಕ್,ವೈಕೆ. ಸುನೀಲ್ ಕುಮಾರ್ , ಸೌಭಾಗ್ಯ, ಕೆ.ಎಂ.ಜಯಶೀಲಾ, ಎಚ್.ಇ.ಸುರೇಶ್, ಎಂ.ಸತೀಶ್, ವನಜಾಕ್ಷಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.