ADVERTISEMENT

ಲಕ್ಷಗಟ್ಟಲೆ ಜನ ಎಲ್ಲಿಂದ ಬರ್ತಾರೆ ಎನ್ನುವವರಿಗೆ ಸಮ್ಮೇಳನದಲ್ಲಿ ಉತ್ತರ:ಮಹೇಶ ಜೋಶಿ

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 13:24 IST
Last Updated 17 ಅಕ್ಟೋಬರ್ 2024, 13:24 IST
ಮಂಡ್ಯದಲ್ಲಿ ಡಿ.20ರಿಂದ ಮೂರು ದಿನ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಶ್ರೀರಂಗಪಟ್ಟಣಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಚಾರ ಸಭೆಯನ್ನು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ಉದ್ಘಾಟಿಸಿದರು. ಮೀರಾ ಶಿವಲಿಂಗಯ್ಯ, ಹುಸ್ಕೂರು ಕೃಷ್ಣೇಗೌಡ, ಹರ್ಷ, ಸಿದ್ದಲಿಂಗು ಪಾಲ್ಗೊಂಡಿದ್ದರು
ಮಂಡ್ಯದಲ್ಲಿ ಡಿ.20ರಿಂದ ಮೂರು ದಿನ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಶ್ರೀರಂಗಪಟ್ಟಣಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಚಾರ ಸಭೆಯನ್ನು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ಉದ್ಘಾಟಿಸಿದರು. ಮೀರಾ ಶಿವಲಿಂಗಯ್ಯ, ಹುಸ್ಕೂರು ಕೃಷ್ಣೇಗೌಡ, ಹರ್ಷ, ಸಿದ್ದಲಿಂಗು ಪಾಲ್ಗೊಂಡಿದ್ದರು   

ಶ್ರೀರಂಗಪಟ್ಟಣ: ‘ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಗಟ್ಟಲೆ ಜನ ಎಲ್ಲಿಂದ ಬರುತ್ತಾರೆ ಎಂದು ಕೇಳುವವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದು, ಸಮ್ಮೇಳನದಲ್ಲಿ ಅದಕ್ಕೆ ಉತ್ತರ ಸಿಗಲಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿರುಗೇಟು ನೀಡಿದರು.

ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಗುರುವಾರ ಏರ್ಪಡಿಸಿದ್ದ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮ್ಮೇಳನಕ್ಕೆ ಬಂದು ನೋಡಲಿ. ಹಿಂದೆ ಸಾವಿರದ ಲೆಕ್ಕದಲ್ಲಿ ಜನರು ಬರುತ್ತಿದ್ದರು. ಈ ಬಾರಿಯ ಸಮ್ಮೇಳನಕ್ಕೆ ಹೊರ ದೇಶಗಳಿಂದಲೂ ಕನ್ನಡಿಗರು ಬರುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸರ್‌ಎಂವಿ ಕುಟುಂಬ:

ಸಮ್ಮೇಳನಕ್ಕೆ ವಿದೇಶದಲ್ಲಿರುವ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಮೊಮ್ಮಗಳು, ಪುತಿನ ಅವರ ಮಗಳು, ಕೆ.ಎಸ್‌. ನರಸಿಂಹಸ್ವಾಮಿ ಅವರ ಕುಟುಂಬ ಮತ್ತು ಕನ್ನಡ ನಿಘಂಟು ಬ್ರಹ್ಮ ರೆವರೆಂಟ್‌ ಫರ್ಡಿನೆಂಡ್‌ ಕಿಟೆಲ್‌ ಅವರ ಕುಟುಂಬದ ಸದಸ್ಯರು ಬರುತ್ತಿದ್ದಾರೆ. ಹೊರ ರಾಜ್ಯಗಳ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿ ಬರಲಿದ್ದಾರೆ’ ಎಂದು ಜೋಶಿ ತಿಳಿಸಿದರು.

‘ಈ ಸಮ್ಮೇಳನ ಚಾರಿತ್ರಿಕವಾಗಲಿದ್ದು, ಮುಂದೆ ನಡೆಯುವ ಸಮ್ಮೇಳನಗಳಿಗೆ ಮಾದರಿಯಾಗಲಿದೆ. ಸ್ಥಳೀಯ ಸಾಹಿತಿ, ಕಲಾವಿದರಿಗೆ ಅವಕಾಶ ಇರುತ್ತದೆ. ಕಾವೇರಿ ನೀರಿನ ಸಮಸ್ಯೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿಯಂತೆ ಕೆಲಸ ಮಾಡಬೇಕು. ಅತಿಥಿಗಳನ್ನು ತಮ್ಮ ಮನೆಗಳಲ್ಲಿ ಉಳಿಸಿಕೊಂಡು ಸತ್ಕರಿಸಲು ಇಚ್ಛಿಸುವವರು ಮುಂಚಿತವಾಗಿ ಹೆಸರು ನೊಂದಾಯಿಸಬೇಕು’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ‘ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಿಗರನ್ನು ಒಗ್ಗೂಡಿಸುವ ಮುಖ್ಯ ವೇದಿಕೆ. ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಪ್ರಕಾಶಪಡಿಸಲು ಸಹಕಾರಿಯಾಗಲಿದೆ’ ಎಂದರು.

ತಾಲ್ಲೂಕಿನಿಂದ ಹೆಚ್ಚು ಮಂದಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ತಿಳಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿದರು.

ಕಸಾಪ ಕೇಂದ್ರ ಸಮಿತಿ ಕೋಶಾಧ್ಯಕ್ಷ ಪಟೇಲ್‌ ಪಾಂಡು, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಹುಸ್ಕೂರು ಕೃಷ್ಣೇಗೌಡ, ಹರ್ಷ, ಕೋಶಾಧ್ಯಕ್ಷ ಅಪ್ಪಾಜಪ್ಪ, ತಾಲ್ಲೂಕು ಘಟಕದ ಕಾರ್ಯದರ್ಶಿ ಸ್ವಾಮಿಗೌಡ, ನಗರ ಘಟಕದ ಅಧ್ಯಕ್ಷ ಎಂ. ಸುರೇಶ್‌, ಬಿಇಒ ಆರ್‌.ಪಿ. ಮಹೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್‌, ಪುರಸಭೆ ಮುಖ್ಯಾಧಿಕಾರಿ ಎಂ ರಾಜಣ್ಣ, ಚಂದ್ರಲಿಂಗು, ಸೋಮಶೇಖರ್‌, ಬಸವರಾಜು, ಉಮಾಶಂಕರ್‌ ಭಾಗವಹಿಸಿದ್ದರು.

ಸಭೆಯಲ್ಲಿ ಟಿಪ್ಪು ಸುಲ್ತಾನ್‌ ಅವರ ಹೆಸರನ್ನು ಏಕೆ ಪ್ರಸ್ತಾಪ ಮಾಡಲಿಲ್ಲ ಎಂದು ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಪಿ.ಡಿ. ತಿಮ್ಮಪ್ಪ ಪ್ರಶ್ನಿಸಿದರು
ಸಭೆಯಲ್ಲಿ ಭಾಗವಹಿಸಿದ್ದ ಕಸಾಪ ಆಜೀವ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು

‘ಟಿಪ್ಪು ಬಗ್ಗೆ ನಿರ್ಲಕ್ಷ್ಯ ಏಕೆ’

ಸಭೆಯಲ್ಲಿ ಮಹೇಶ್ ಜೋಶಿ ಅವರು ಟಿಪ್ಪು ಸುಲ್ತಾನ್‌ ಹೆಸರು ಪ್ರಸ್ತಾಪ ಮಾಡದೇ ಹೋದದ್ದಕ್ಕೆ ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಪಿ.ಡಿ. ತಿಮ್ಮಪ್ಪ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಧೋರಣೆ ಸರಿಯಲ್ಲ. ಟಿಪ್ಪು ಸುಲ್ತಾನ್‌ ಕಾರಣಕ್ಕೆ ಈ ಊರು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಅಂತಹ ವ್ಯಕ್ತಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಏಕೆ’ ಎಂದು ತಿಮ್ಮಪ್ಪ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ ಜೋಶಿ ‘ನೀವು ಕನ್ನಡ ಸಾಹಿತ್ಯ ಪ‍ರಿಷತ್ತಿನ ಅಧ್ಯಕ್ಷರ ಜತೆ ಮಾತನಾಡುತ್ತಿದ್ದೀರಿ ಎಂಬ ಜ್ಞಾನ ಇರಲಿ. ಗೌರವದಿಂದ ಕೇಳಿದರೆ ನಾನೂ ಗೌರವದಿಂದ ಉತ್ತರ ಕೊಡುತ್ತೇನೆ. ನನ್ನ ಮುತ್ತಾತ ಸಂತ ಶಿಶುನಾಳ ಷರೀಫರ ಶಿಷ್ಯ ಎಂಬುದು ಗೊತ್ತಿರಲಿ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.