ADVERTISEMENT

‘ಹೈನುಗಾರಿಕೆಯು ಗ್ರಾಮೀಣರ ಬದುಕಿಗೆ ಆಸರೆ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:01 IST
Last Updated 24 ಜೂನ್ 2024, 16:01 IST
ಪಾಂಡವಪುರ ಪಟ್ಟಣದಲ್ಲಿ ಮನ್‌ಮುಲ್ ಮತ್ತು ಕೆಎಂಎಫ್‌ನಿಂದ ನಡೆದ ಹೈನುರಾಸು ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಉದ್ಫಾಟಿಸಿದರು
ಪಾಂಡವಪುರ ಪಟ್ಟಣದಲ್ಲಿ ಮನ್‌ಮುಲ್ ಮತ್ತು ಕೆಎಂಎಫ್‌ನಿಂದ ನಡೆದ ಹೈನುರಾಸು ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಉದ್ಫಾಟಿಸಿದರು   

ಪಾಂಡವಪುರ: ‘ಹೈನುಗಾರಿಕೆಯು ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ’ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಮನ್‌ಮುಲ್, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕರ್ನಾಟಕ ಹಾಲು ಮಹಾಮಂಡಳಿ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕ್ಷೀರಸಂಜೀವಿನಿ ಹಂತ–2 ಮತ್ತು 3ರ ಯೋಜನೆಯಡಿ ಸೋಮವಾರ ನಡೆದ ಹೈನುರಾಸು ನಿರ್ವಹಣೆ ತರಬೇತಿ ಕಾರ್ಯಕ್ರಮಲ್ಲಿ ಮಾತನಾಡಿದರು.

‘ಹೈನುಗಾರಿಕೆ ಮಾಡಿಕೊಂಡು ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ರೈತರು ಬೆಳೆಯುವ ತರಕಾರಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲವಾಗಿದೆ. ಅದೇ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಒಕ್ಕೂಟಗಳು ಸೂಕ್ತ ಬೆಲೆ ನೀಡಿ ಹಾಲು ಖರೀದಿ ಮಾಡುತ್ತಿವೆ. ರೈತರಿಗೆ ಮತ್ತಷ್ಟು ಹಾಲಿನ ದರ ಏರಿಕೆ ಮಾಡಿ ಅನುಕೂಲ ಮಾಡಿಕೊಡಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದರು.

ADVERTISEMENT

ರಾಸು ನಿರ್ವಹಣೆ ಮಾಡಬೇಕು: ‘ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ, ಜತೆಗೆ ಒಕ್ಕೂಟವು ಷೇರುದಾರರಿಗೆ ಗುಂಪು ವಿಮೆ ಯೋಜನೆ ಜಾರಿಗೆ ತಂದಿದ್ದು, ಉತ್ಪಾದಕರ ರೈತರು ₹200 ಹಾಗೂ ಷೇರುದಾರರು ₹400 ನೀಡಿ ವಿಮೆ ಮಾಡಿಸಿದರೆ ಆ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಕುಟುಂಬಕ್ಕೆ ₹50 ಸಾವಿರ ಪರಿಹಾರ ಬರುತ್ತದೆ. ಜು.20 ಗುಂಪು ವಿಮೆ ಮಾಡಿಸಲು ಕೊನೆಯ ದಿನವಾಗಿದ್ದು, ಕಾರ್ಯದರ್ಶಿಗಳು ರೈತರಿಗೆ ಅರಿವು ಮೂಡಿಸಬೇಕು’ ಎಂದ ಮನವಿ ಮಾಡಿದರು.

ಕ್ಷೀರ ಸಂಜೀವಿನಿ ಯೋಜನೆಯಡಿ ಆಯ್ದ ಮಹಿಳಾ ಸಹಕಾರ ಸಂಘಗಳಿಗೆ ₹2.50 ಲಕ್ಷದವರೆಗೆ ಹಸು ಖರೀದಿಗೆ ಸಾಲ ನೀಡುತ್ತಿವೆ. ಸಾಲ ಪಡೆದ ರೈತರು ಹೈನುಗಾರಿಕೆ ನಡೆಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ತಾಲ್ಲೂಕಿನಲ್ಲಿ 72 ಮಹಿಳಾ ಸಹಕಾರ ಸಂಘಗಳಿದ್ದು, ಇವುಗಳ ಪೈಕಿ ಹಲವು ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಿಕೊಡಲಾಗಿದೆ. ಉಳಿದ ಸಂಘಗಳಿಗೆ ಹಂತ ಹಂತವಾಗಿ ಸಾಲಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ತರಬೇತಿ ಶಿಬಿರದಲ್ಲಿ ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ಡೇರಿ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.