ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ 110 ವಿಷಯಗಳನ್ನು ನೀಡಿ ಲೇಖನಗಳನ್ನು ಬರೆಯುವಂತೆ ಲೇಖಕರಿಗೆ ಮನವಿ ಸಲ್ಲಿಸಲಾಗಿತ್ತು. 40 ಲೇಖನಗಳು ಬಂದಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜ್ ತಿಳಿಸಿದರು.
ಮಂಗಳವಾರ ಇಲ್ಲಿ ನಡೆದ ಸ್ಮರಣ ಸಂಚಿಕೆ ಸಭೆಯಲ್ಲಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯ ಭೌಗೋಳಿಕತೆ, ನೈಸರ್ಗಿಕತೆ, ಪ್ರಾದೇಶಿಕತೆ, ಮಂಡ್ಯ ಜಿಲ್ಲೆಯ ಪುರಾತತ್ವ ನೆಲೆಗಳು, ಮಂಡ್ಯ ಜಿಲ್ಲೆಯ ಜನಸಮುದಾಯಗಳು, ಮಂಡ್ಯದಲ್ಲಿ ರೈತ ಸಂಘಟನೆ ಸ್ವರೂಪ ಹೋರಾಟ ವ್ಯಾಪ್ತಿ ಸೇರಿದಂತೆ 110ಕ್ಕೂ ಹೆಚ್ಚು ವಿಷಯಗಳನ್ನು ರಚಿಸಲಾಗಿದೆ ಎಂದರು.
ಸ್ಮರಣ ಸಂಚಿಕೆಯನ್ನು 5 ಭಾಗಗಳಾಗಿ ವಿಂಗಡಿಸಿ, ಆಯಾ ಭಾಗದ ಲೇಖನಗಳನ್ನು ಪಡೆದು ಚರ್ಚಿಸಿ ಅಂತಿಮಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ. ಮೌಲ್ಯಯುತವಾಗಿ ಸ್ಮರಣ ಸಂಚಿಕೆ ಮೂಡಿ ಬರಲಿ ಎಂದರು.
ಛಾಯಾಚಿತ್ರ ಆಹ್ವಾನ: ಸ್ಮರಣ ಸಂಚಿಕೆಯಲ್ಲಿ ಮಂಡ್ಯ ಜಿಲ್ಲೆಗೆ ಮಹಾತ್ಮ ಗಾಂಧೀಜಿ, ಕುವೆಂಪು ಅವರ ಭೇಟಿ, ಕೆ.ಆರ್.ಎಸ್. ನಿರ್ಮಾಣ, ಶಿವಪುರ ಸತ್ಯಾಗ್ರಹದಲ್ಲಿ ಹೋರಾಟಗಾರರು ಸೇರಿದಂತೆ ಇನ್ನಿತರೆ ಅಪರೂಪದ ಛಾಯಾಚಿತ್ರಗಳನ್ನು ಸ್ಮರಣ ಸಂಚಿಕೆಗೆ ಕಳುಹಿಸಿಕೊಡಬಹುದು. ಸಮಿತಿಯು ಪರಿಶೀಲಿಸಿ ಛಾಯಾಚಿತ್ರಗಳನ್ನು ಆಯ್ಕೆ ಮಾಡಲಿದೆ. ಆಸಕ್ತರು ಜಿಲ್ಲಾ ಗ್ರಂಥಾಲಯದ ಸ್ಮರಣ ಸಂಚಿಕೆ ಕಚೇರಿಗೆ ಸಲ್ಲಿಸಬಹುದು ಎಂದರು.
ನೇಮಕ: ಮಧುರ ಮಂಡ್ಯ ಉಪ ಸಮಿತಿ: ದಕೋ ಹಳ್ಳಿ ಚಂದ್ರಶೇಖರ್, ಮಂಡ್ಯ- ಕರ್ನಾಟಕ ಭಾರತ ಉಪ ಸಮಿತಿ: ಎಂ.ಬಿ. ಸುರೇಶ್, ವಿಶ್ವ ಕರ್ನಾಟಕ ಉಪಸಮಿತಿ: ಪ್ರೊ.ಹುಲ್ಕೆರೆ ಮಹದೇವು, ಅಭಿವೃದ್ಧಿ ಭಾರತ ಉಪ ಸಮಿತಿ: ಕೆ.ಪಿ.ಮೃತ್ಯುಂಜಯ, ಚಿತ್ರಸಂಚಿಕೆ ಮಂಡ್ಯ ದರ್ಶನ ಉಪ ಸಮಿತಿಗೆ:ಎಸ್.ಬಿ. ಶಂಕರೇಗೌಡ ಅವರನ್ನು ಸಂಚಾಲಕರಾಗಿ ನೇಮಕ ಮಾಡಲು ಸಮಿತಿ ತೀರ್ಮಾನಿಸಿತು.
ಸಾಹಿತಿ ತೈಲೂರು ವೆಂಕಟ ಕೃಷ್ಣ, ಸಮ್ಮೇಳನದ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ಗ್ರಂಥಾಲಯ ಅಧಿಕಾರಿ ಕೃಷ್ಣಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಎಸ್.ಎಚ್, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು, ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್, ಪುಸ್ತಕ ಸಮಿತಿ ಅಧ್ಯಕ್ಷ ಡಾ.ಮುದ್ದೇಗೌಡ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಡಾ.ಮ. ರಾಮಕೃಷ್ಣ. ಸಮಿತಿ ಸದಸ್ಯರಾದ ಎಂ.ವಿ. ಧರಣೇಂದ್ರಯ್ಯ, ಹುಲ್ಲುಕೆರೆ ಮಹದೇವ, ಕೆ.ಪಿ.ಮೃತ್ಯುಂಜಯ, ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷಾಧಿಕಾರಿ ಚಂದ್ರಶೇಖರ್ ಜಿ.ಆರ್ ಇತರರು ಪಾಲ್ಗೊಂಡಿದ್ದರು.
Cut-off box - ‘ಅನುದಾನ ಬಳಕೆಯಲ್ಲಿ ಲೋಪವಾಗದಿರಲಿ’ ಮಂಡ್ಯ: ‘ಜಿಲ್ಲೆಯಲ್ಲಿ ಡಿಸೆಂಬರ್ 20 21 22ರಂದು ಒಟ್ಟು 3 ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ವೆಚ್ಚ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಅವರು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಂಚಾಲಕರಿಗೆ ತಿಳಿಸಿದರು. 28 ಸಮಿತಿಗಳ ಸಂಚಾಲಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಮ್ಮ ಸಮಿತಿಗೆ ಬಿಡುಗಡೆಯಾಗುವ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಮಿತಿಯಲ್ಲಿ ಮಂಡಿಸಿ ಸಾಹಿತ್ಯ ಸಮ್ಮೇಳನದ ವಿಶೇಷಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು. ಕ್ರಿಯಾ ಯೋಜನೆ ವಿಷಯವಾರು ವಿಸ್ತೃತವಾಗಿರಬೇಕು. ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಕಾರ್ಯಾಕಾರಿ ಸಮಿತಿಯಲ್ಲಿ ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಕೆಲಸಗಳನ್ನು ಪ್ರಾರಂಭಿಸಬೇಕು. ಸಮಿತಿಯಿಂದ ಭರಿಸಲ್ಪಡುವ ವೆಚ್ಚಕ್ಕೆ ಸಂಬಂಧಿಸಿದ ದಾಖಲೆಗಳನ್ನು ಧೃಡೀಕರಣ ಪಡಿಸಿ ಹಣಕಾಸು ಸಮಿತಿಗೆ ಸಲ್ಲಿಸಬೇಕು ಎಂದರು.
Cut-off box - ಸ್ಮರಣ ಸಂಚಿಕೆ: ಶೀರ್ಷಿಕೆಗೆ ಆಹ್ವಾನ ‘ಶೀರ್ಷಿಕೆ ಆಹ್ವಾನ ಸ್ಮರಣ ಸಂಚಿಕೆಗೆ ಸೂಕ್ತ ಶೀರ್ಷಿಕೆ ನೀಡಲು ಶೀರ್ಷಿಕೆಯನ್ನು ಆಹ್ವಾನಿಸಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ಆಸಕ್ತರು ಶೀರ್ಷಿಕೆಯನ್ನು ನವೆಂಬರ್ 20 ರೊಳಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಡ್ಯ ಇಲ್ಲಿಗೆ ಸಲ್ಲಿಸುವುದು. ಆಯ್ಕೆಯಾದ ಶೀರ್ಷಿಕೆಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ತಿಳಿಸಿದರು. ನೆನಪಿನ ಸಂಪುಟಕ್ಕೆ ಗಣ್ಯರು ಹಾಗೂ ಜನಪ್ರತಿನಿಧಿಗಳಿಂದ ಸಂದೇಶ ಪಡೆಯಲು ಪತ್ರ ಮೂಲಕ ಮನವಿ ಮಾಡುವ ಬಗ್ಗೆ ಸಂಪುಟದ ಮುಖಪುಟ ವಿನ್ಯಾಸ ಮಾಡುವ ಬಗ್ಗೆ ಸಮಿತಿಯ ಸದಸ್ಯರಿಂದ ಅಭಿಪ್ರಾಯ ಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.