ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಷಯವು ವಿವಾದದ ಸ್ವರೂಪ ಪಡೆದಿದೆ. ಸಾಹಿತಿಗಳು ಅಥವಾ ಸಾಹಿತ್ಯೇತರರಲ್ಲಿ ಯಾರು ಅಧ್ಯಕ್ಷರಾಗಬೇಕೆಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಅದನ್ನು ನಾನಾಗಲೀ ಅಥವಾ ಸಾಹಿತ್ಯ ಪರಿಷತ್ತಾಗಲಿ ಆರಂಭಿಸಿಲ್ಲ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಸ್ಪಷ್ಟಪಡಿಸಿದರು.
‘ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ (33) ನಿಯಮ (5)ರ ಪ್ರಕಾರ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಆಯಾ ವರ್ಷದ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವಿರುತ್ತದೆ. ಹೀಗಾಗಿ ನ.12ರಂದು ಕಾರ್ಯಕಾರಿ ಮಂಡಳಿಯ ಸಭೆ ನಡೆಸಿ, ಕೂಲಂಕಶವಾಗಿ ಚರ್ಚೆ ನಡೆಸಿ ಅಧ್ಯಕ್ಷರ ಆಯ್ಕೆ ಬಗ್ಗೆ ನಿರ್ಣಯಿಸುತ್ತೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಅಧ್ಯಕ್ಷರ ಆಯ್ಕೆ ಬಗ್ಗೆ ಸಾರ್ವಜನಿಕ ವಲಯದಿಂದ ಸಲಹೆ, ಸೂಚನೆ, ಅಭಿಪ್ರಾಯಗಳು ಬಂದಿವೆ. ಚರ್ಚೆಗಳು ತೀವ್ರವಾಗಿ ನಡೆದಷ್ಟೂ ಉತ್ತಮ ಫಲಿತಾಂಶ ಸಿಗುತ್ತದೆ. ಬದಲಾವಣೆಗೆ ನಾಂದಿ ಹಾಡುತ್ತದೆ. ಚರ್ಚೆಗಳು ಪ್ರಜಾಸತ್ತೆಯ ಜೀವಾಳ’ ಎಂದರು.
ವಿವಾದ ಹೊಸದೇನಲ್ಲ:
‘ಸಮ್ಮೇಳನ ಕುರಿತು ವಿವಾದಗಳು ಇದು ಮೊದಲೇನಲ್ಲ. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೇ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದ.ರಾ.ಬೇಂದ್ರೆ ಕುರಿತು ಯಾರಿಗೂ ಆಕ್ಷೇಪಣೆ ಇರದಿದ್ದರೂ, ಪ್ರಗತಿಶೀಲ ಸಾಹಿತ್ಯಕ್ಕೆ ಅವಕಾಶ ನೀಡಲಿಲ್ಲವೆಂಬ ಆಕ್ಷೇಪ ಕೇಳಿ ಬಂದಿತ್ತು. ಅಂದು ಪ್ರತಿಭಟಿಸಿದ್ದ ಶ್ರೀರಂಗ, ಅನಕೃ, ಬಸವರಾಜ ಕಟ್ಟೀಮನಿ ಅವರೆಲ್ಲರೂ ಮುಂದಿನ ಸಮ್ಮೇಳನಗಳಲ್ಲಿ ಅಧ್ಯಕ್ಷರಾದದ್ದು ಈಗ ಇತಿಹಾಸ’ ಎಂದರು.
‘ದೇಜಗೌ ಆಯ್ಕೆಯಾದಾಗ ‘ಕಿರಿಯ ವಯಸ್ಸಿನವರು’ ಎಂದು, ಡಾ.ಆರ್.ಸಿ.ಹಿರೇಮಠ ಆಯ್ಕೆಯಾದಾಗ ‘ಅವರು ಸಂಶೋಧಕರೇ ಹೊರತು ಬರಹಗಾರರಲ್ಲ’ ಎಂದು, ಪ್ರೊ.ಎಲ್.ಎಸ್.ಶೇಷಗಿರಿರಾಯವರು ಅಧ್ಯಕ್ಷರಾದಾಗ ‘ಸಂಘ ಪರಿವಾರದವರು’ ಎಂದು ಆರೋಪಿಸಲಾಗಿತ್ತು. ಗೀತರಚನೆಕಾರ ದೊಡ್ಡರಂಗೇಗೌಡರಿಂದ ಕನ್ನಡ ಸಾಹಿತ್ಯಕ್ಕೆ ಕೊಡುಗೆಯೇ ಇಲ್ಲ ಎಂಬ ಆಕ್ಷೇಪಣೆ ಕೇಳಿಬಂದಿತ್ತು’ ಎಂದು ಜೋಶಿ ಹೇಳಿದರು.
‘ಸಿದ್ದರಾಮಯ್ಯ ದೇವೇಗೌಡರ ಹೆಸರೂ ಶಿಫಾರಸು’
‘ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಎಚ್.ಡಿ.ದೇವೇಗೌಡ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಸಿದ್ದರಾಮಯ್ಯನವರೇಕೆ ಸಮ್ಮೆಳನಾಧ್ಯಕ್ಷರಾಗಬಾರದು ಎಂಬ ಸಲಹೆಗಳೂ ಕೇಳಿ ಬಂದಿವೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. ‘ಸಾಹಿತ್ಯದ ಜೊತೆಗೆ ಕನ್ನಡ– ಕನ್ನಡಿಗ– ಕರ್ನಾಟಕದ ಅಭಿವೃದ್ಧಿಗೆ ಸೇವೆ ಸಲ್ಲಿಸಿದವರನ್ನೂ ಅಧ್ಯಕ್ಷತೆಗೆ ಏಕೆ ಪರಿಗಣಿಸಬಾರದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. 26 ಮಠಾಧೀಶರು ಈ ಪ್ರಶ್ನೆ ಎತ್ತುವ ಮೂಲಕ ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದರು. ಆದಿಚುಂಚನಗಿರಿಶ್ರೀ ಸುತ್ತೂರು ಶ್ರೀ ಸಿದ್ಧಗಂಗಾಶ್ರೀ ಸಾಣೆಹಳ್ಳಿ ಶ್ರೀ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರ ಪರ ಮನವಿಗಳು ಬಂದಿವೆ. ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿರುವ ಸಿ.ಎನ್.ಆರ್.ರಾವ್ ಬಾಹ್ಯಾಕಾಶ ವಿಜ್ಞಾನಿ ಕಿರಣ್‌ಕುಮಾರ್ ಸುಧಾ ಮೂರ್ತಿ ವಾಟಾಳ್ ನಾಗರಾಜ್ ಕರವೇ ಅಧ್ಯಕ್ಷ ನಾರಾಯಣಗೌಡ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಪ್ರಕಾಶ ಪಡುಕೋಣೆ ಅವರನ್ನೇಕೆ ಪರಿಗಣಿಸಬಾರದು ಎಂಬ ಸಲಹೆಗಳು ಬಂದಿವೆ’ ಎಂದರು. ‘ಡಾ.ಲತಾ ರಾಜಶೇಖರ್ ಡಾ.ರಾಮೇಗೌಡ (ರಾಗೌ) ನಾಗತಿಹಳ್ಳಿ ಚಂದ್ರಶೇಖರ್ ಬಿ.ಟಿ.ಲಲಿತಾ ನಾಯಕ್ ಟಿ.ವಿ.ವೆಂಕಟಾಚಲಶಾಸ್ತ್ರಿ ಮಾಲತಿ ಪಟ್ಟಣಶೆಟ್ಟಿ ಪ್ರೊ.ಕೆ.ಎಸ್.ಭಗವಾನ್ ದೇವನೂರು ಮಹಾದೇವ ಕುಂ.ವೀ ಗಿರೀಶ ಕಾಸರವಳ್ಳಿ ಪರ ಶಿಫಾರಸುಗಳು ಬಂದಿವೆ’ ಎಂದು ತಿಳಿಸಿದರು. ‘ಕನ್ನಡ ಭಾಷೆ–ಸಂಸ್ಕೃತಿಯ ರಾಯಭಾರಿಯಾಗಿದ್ದ ಡಾ.ರಾಜ್‌ಕುಮಾರ್ ಅವರನ್ನು ಪರಿಗಣಿಸಲೇ ಇಲ್ಲವೆಂಬ ಅಸಮಾಧಾನ ಚಿತ್ರರಂಗದಿಂದ ಕೇಳಿಬಂದಿದೆ. ಮಾಧ್ಯಮ ಕ್ಷೇತ್ರ ನ್ಯಾಯಾಂಗ ಕ್ಷೇತ್ರಗಳಲ್ಲಿರುವವರನ್ನೂ ಪರಿಗಣಿಸಿ ಎಂದು ಮನವಿಗಳು ಬಂದಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.