ಮಂಡ್ಯ: ಕನ್ನಡ ಶಾಲೆಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದ ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ವಿವಿಧ ಸಂಘಟನೆಯ ಮುಖಂಡರು ಕಪ್ಪುಪಟ್ಟಿ ಕಟ್ಟಿಕೊಂಡು ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಶುಕ್ರವಾರ ಕನ್ನಡ ರಾಜ್ಯೋತ್ಸವ ಕರಾಳ ದಿನಾಚರಣೆ ಆಚರಿಸಿ ಪ್ರತಿಭಟನೆ ನಡೆಸಿದರು.
ಕನ್ನಡ ರಾಜ್ಯೋತ್ಸವ ಎಲ್ಲಾ ಕಡೆ ಆಚರಿಸಲಾಗುತ್ತಿದೆ ಆದರೆ, ಕನ್ನಡ ಶಾಲೆಗಳಿಗೆ ಅನುದಾನ ನೀಡಲು ಕ್ರಮವನ್ನು ತೆಗೆದುಕೊಂಡಿಲ್ಲ. 1995 ರಿಂದ ಇಲ್ಲಿಯವರೆಗೆ ಕನ್ನಡ ಶಾಲೆಗಳಿಗೆ ಗಳಿಗೆ ಅನುದಾನ ನೀಡುತ್ತಿಲ್ಲ ಇದರಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಕನ್ನಡ ಶಾಲೆಗಳು ಮತ್ತು ಶಿಕ್ಷಕರು ತೊಂದರೆಗೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಕನ್ನಡ ಶಾಲೆಗಳಿಗೆ ಅನುದಾನವನ್ನು ನೀಡಬೇಕು. ಈ ಬಗ್ಗೆ ಹಲವು ಹೋರಾಟವನ್ನು ಮಾಡಲಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಯಾವುದೇ ಮಾಹಿತಿಯನ್ನು ನೀಡಿಲ್ಲ, ಮತ್ತೊಂದು ಕಡೆ ಸರ್ಕಾರವೇ ಕನ್ನಡ ಶಾಲೆಗಳಿಗೆ ಬದಲಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದೆ. ಉಳಿದಿರುವ ಕನ್ನಡ ಶಾಲೆಗಳಿಗೆ ಮುಚ್ಚಿವೆ ಕನ್ನಡ ಶಾಲೆಗಳು ಉಳಿಯದೆ ಕನ್ನಡ ಭಾಷೆ ಉಳಿಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಸರ್ಕಾರ ಕೂಡಲೇ ಗಮನಹರಿಸಿ ಅನುದಾನ ರಹಿತ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಕಾಳೇಗೌಡ, ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ, ಶಿಕ್ಷಕರಾದ ಸುರೇಶ್, ಕೃಷ್ಣಪ್ಪ, ಶಿವಕುಮಾರ್, ವೀಣಾ, ಭಾರತಿ, ಸುಶೀಲಮ್ಮ, ರತ್ನಮ್ಮ, ರಮ್ಯಾ, ಪ್ರಶಾಂತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.