ADVERTISEMENT

ವಿಧಾನಸಭೆ ಚುನಾವಣೆ: ನನಗೂ ಒಂದು ಅವಕಾಶ ಕೊಡಿ –ಡಿ.ಕೆ.ಶಿವಕುಮಾರ್ ಮನವಿ

ಪಾಂಡವಪುರ; ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 3 ಮೇ 2023, 16:29 IST
Last Updated 3 ಮೇ 2023, 16:29 IST
ಪಾಂಡವಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೋಡ್ ಶೋ ನಡೆಸಿ ದರ್ಶನ್ ಪುಟ್ಟಣ್ಣಯ್ಯ ಪರ ಮತ ಪ್ರಚಾರ ನಡೆಸಿದರು
ಪಾಂಡವಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೋಡ್ ಶೋ ನಡೆಸಿ ದರ್ಶನ್ ಪುಟ್ಟಣ್ಣಯ್ಯ ಪರ ಮತ ಪ್ರಚಾರ ನಡೆಸಿದರು   

ಪಾಂಡವಪುರ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅವಕಾಶದ ಮೇಲೆ ಅವಕಾಶ ಕೊಟ್ಟಿದ್ದೀರಿ, ಈಗ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸುವುದರ ಮೂಲಕ ನನಗೊಂದು ಅವಕಾಶ ನೀಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಪಟ್ಟಣದ ಐದು ದೀಪ ವೃತ್ತದಲ್ಲಿ ಬುಧವಾರ ಸಂಜೆ ಕಾಂಗ್ರೆಸ್‌–ರೈತ ಸಂಘ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಪರ ರೋಡ್ ಶೋ ನಡೆಸಿ ಅವರು ಮಾತನಾಡಿದರು.

‘ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದೇವೆ. ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಈಗ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಈಗ ನನಗೊಂದು ಅವಕಾಶವಿದೆ. ಹಾಗಾಗಿ ಕ್ಷೇತ್ರದ ಎಲ್ಲ ಜನತೆ ದರ್ಶನ್ ಪುಟ್ಟಣ್ಣಯ್ಯ ಗೆಲ್ಲಿಸಿಕೊಟ್ಟು ನನಗೆ ಶಕ್ತಿ ತುಂಬಬೇಕು’ ಎಂದರು.

ADVERTISEMENT

‘ಕಳೆದ ಬಾರಿ ನಾವು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವೆಲ್ಲ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ಸಮರ್ಪಕವಾಗಿ ಆಡಳಿತ ನಡೆಸಲಾಗಲಿಲ್ಲ. ಇನ್ನು ಮುಂದೆ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇಲ್ಲ. ಜೆಡಿಎಸ್‌ ಕಾರ್ಯಕರ್ತರು ಇದನ್ನು ಅರ್ಥಮಾಡಿಕೊಂಡು ನಮ್ಮನ್ನು ಬೆಂಬಲಿಸಿ’ ಎಂದು ಹೇಳಿದರು.

‘ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯನವರು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಸಾಕಷ್ಟು ಜನಪರ ಆಡಳಿತ ನೀಡಿದ್ದಾರೆ. ಅವರ ಹಲವು ಕಾರ್ಯಕ್ರಮಗಳೇ ಜನರನ್ನು ಕಾಪಾಡುತ್ತಿವೆ. ನಾನು ನೀರಿಗಾಗಿ ಪಾದಾಯಾತ್ರ, ಹೋರಾಟ ಮಾಡಿದಾಗ ಎಚ್.ಡಿ.ಕುಮಾರಸ್ವಾಮಿ ನನ್ನನ್ನು ಗೇಲಿ ಮಾಡಿದರು. ನಾಡಿನ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆ ವಿಶ್ವಾಸವೇ ಕಾಂಗ್ರೆಸ್ ಗೆ ಶಕ್ತಿ ತುಂಬಿದೆ. ದೇಶದಲ್ಲಿಯೇ ಕಾಂಗ್ರೆಸ್ ದೊಡ್ಡ ಶಕ್ತಿಯಾಗಿ ರೂಪುಗೊಳ್ಳುತ್ತಿದೆ’ ಎಂದರು.

‘ದೇಶದಲ್ಲಿಯೇ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಕಷ್ಟವನ್ನು ಕೇಳುವವರು ಯಾರೂ ಇಲ್ಲ. ಸಂಸತ್‌ನಲ್ಲಿ ಹಾಗೂ ಸದನದಲ್ಲಿ ರೈತರ ಪರ ದನಿ ಎತ್ತುವವರಿಲ್ಲ. ಇಂತಹ ಸಂದರ್ಭದಲ್ಲಿ ರೈತ ಚಳಿವಳಿಗೆ ಶಕ್ತಿ ತುಂಬಲು ನನ್ನ ಮಿತ್ರ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಮಗ ದರ್ಶನ್‌ ಪುಟ್ಟಣ್ಣಯ್ಯನನ್ನು ಬೆಂಬಲಿಸಲಾಗುತ್ತಿದೆ. ಕಾಂಗ್ರೆಸ್ 5 ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದರು.

ಇದೇ ವೇಳೆ ಜೆಡಿಎಸ್ ಮುಖಂಡ, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ವೇಳೆ  ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಶಾಸಕರಾಗಿದ್ದ ಮಂಡ್ಯದ ಎಸ್.ಡಿ.ಜಯರಾಮ್, ಮದ್ದೂರು ಸಿದ್ದರಾಜು, ಕಿರುಗಾವಲು ನಾಗೇಗೌಡ ಅವರು  ಅಕಾಲಿಕ ಮರಣವನ್ನಪ್ಪಿದಾಗ ಅನುಕಂಪದ ಅಲೆಯಲ್ಲಿ ಅವರ ಕುಟುಂಬದವರು ಶಾಸಕರಾಗಿ ಆಯ್ಕೆಯಾದರು. ಆದರೆ ಕಳೆದ ಬಾರಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸಾವನ್ನಪ್ಪಿದಾಗ ದರ್ಶನ್ ಪುಟ್ಟಣ್ಣಯ್ಯ ಅವರನ್ನು ನಾವು ಸೋಲಿಸಿ ಅನ್ಯಾಯ ಮಾಡಿದೆವು’ ಎಂದರು.

‘ಈ ಬಾರಿ ಆ ಅನ್ಯಾಯವನ್ನು ಸರಿಪಡಿಸಿಬೇಕಿದೆ. ದರ್ಶನ್ ಪುಟ್ಟಣ್ಣಯ್ಯ ಗೆದ್ದರೆ ಕ್ಷೇತ್ರದ ಜನರ ಆಸ್ತಿಯಾಗಿ ಉಳಿಯಲಿದ್ದಾರೆ. ಹಣದ ಆಮಿಷಕ್ಕೆ ಬಲಿಯಾಗದೇ ದರ್ಶನ್‌ ಅವರನ್ನು ಆಯ್ಕೆಮಾಡಬೇಕಾಗಿದೆ’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ, ಸದಸ್ಯ ಎಚ್.ತ್ಯಾಗರಾಜು, ಮುಖಂಡರಾದ ಬಿ.ರೇವಣ್ಣ, ಎಚ್.ಮಂಜುನಾಥ್, ರವಿಬೋಜೇಗೌಡ, ಎಲ್.ಡಿ,ರವಿ, ಕನಗೋನಹಳ್ಳಿ ಪರಮೇಶ್ ಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಎಲ್.ಕೆಂಪೂಗೌಡ, ಹಿರಿಯ ಮುಖಂಡ ಕೆ.ಟಿ.ಗೋವೀಂದೇಗೌಡ ಇದ್ದರು.

Highlights - ದೇವೇಗೌಡರು, ಕುಮಾರಸ್ವಾಮಿಗೆ ಅವಕಾಶ ಸಿಕ್ಕಿದೆ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಿ ದರ್ಶನ್‌ ಗೆದ್ದರೆ ಜನಸೇವೆ ಮಾಡುವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.