ಮಂಡ್ಯ: ಕೃಷಿಯೇ ಪ್ರಮುಖವಾಗಿರುವ ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆ ಸ್ಥಾಪಿಸಬೇಕು ಎಂಬ ಬೇಡಿಕೆ ಇಲ್ಲಿಯವರೆಗೂ ಈಡೇರಿಲ್ಲ. ಜುಲೈ 7ರಂದು ಪೂರಕ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಜಿಲ್ಲೆಯ ರೈತರ ‘ಕೃಷಿ ಕೈಗಾರಿಕೆ’ ಬೇಡಿಕೆಗೆ ಸ್ಪಂದಿಸುತ್ತಾರಾ ಎಂಬ ನಿರೀಕ್ಷೆ ಗರಿಗೆದರಿದೆ.
ನಗರದ ಸುತ್ತಲೂ ನೀರಾವರಿ, ಶೀತ ವಾತಾವರಣ (ಗ್ರೀನ್ ಬೆಲ್ಟ್) ಇರುವ ಕಾರಣ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತವಾಗಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ಕೃಷಿ ಸಂಬಂಧಿತ ಸಣ್ಣ, ಪುಟ್ಟ ಕೈಗಾರಿಕೆ ಸ್ಥಾಪಿಸಿ ರೈತರನ್ನು ಆರ್ಥಿಕವಾಗಿ ಬಲಪಡಿಸುವ ಸಾಕಷ್ಟು ಅವಕಾಶಗಳಿವೆ. ಕೃಷಿಯಾಧಾರಿತ ನವ್ಯೋದ್ಯಮಕ್ಕೂ ಜಿಲ್ಲೆ ಸಶಕ್ತವಾಗಿದೆ. ಸಣ್ಣ ಕೈಗಾರಿಕೆಗಳ ಸ್ಥಾಪನೆಯ ಆಸಕ್ತಿ ಹೊಂದಿರುವ ವಿದ್ಯಾವಂತ ಯುವಕರ ಜಿಲ್ಲೆಯಲ್ಲಿ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಕಬ್ಬು, ಭತ್ತ, ತೆಂಗು, ರಾಗಿ, ಹೂವು ಮುಂತಾದ ಬೆಳೆಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸುವ ಬೇಸಾಯ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಯೋಜನೆ ಘೋಷಣೆ ಮಾಡಬೇಕು ಎಂದು ಯುವ ರೈತರು ಒತ್ತಾಯಿಸಿದ್ದಾರೆ.
‘ಬೆಂಗಳೂರು ಮೂಲಕದ ಕಂಪನಿಯೊಂದು ಮದ್ದೂರು ಬಳಿ ಎಳನೀರಿಂದ ಜ್ಯೂಸ್ ತಯಾರಿಸುತ್ತಿದೆ. ಸ್ಥಳೀಯ ವಿದ್ಯಾವಂತ ಯುವ ರೈತರಿಗೆ ತರಬೇತಿ, ಸಾಲ ಸೌಲಭ್ಯ ನೀಡಿದರೆ ಸಣ್ಣ ಪ್ರಮಾಣದಲ್ಲಿ ಪಾನೀಯ ಇನ್ನಿತರ ಉಪ ಉತ್ಪನ್ನಗಳ ಘಟಕ ಆರಂಭಿಸಬಹುದು. ರಾಗಿ ಮಾಲ್ಟ್, ಹೂವಿನ ಸುಗಂಧ ದ್ರವ್ಯ, ತೆಂಗಿನ ನಾರು ಉತ್ಪಾದನೆ ಮುಂತಾದ ಗುಡಿ ಕೈಗಾರಿಕೆ ಸ್ಥಾಪಿಸಲೂ ಅವಕಾಶವಿದೆ’ ಎಂದು ಯುವ ರೈತ ಶಿವಕುಮಾರ್ ತಿಳಿಸಿದರು.
‘ಹೂವಿನಿಂದ ತಯಾರಿಸುವ ಸುಗಂಧ ದ್ರವ್ಯಗಳನ್ನು ಹೊರದೇಶಗಳಿಗೆ ರಪ್ತು ಮಾಡಬಹುದು. ಮಳೆಯಾಶ್ರಿತ ಪ್ರದೇಶವಾಗಿರುವ ಕೆ.ಆರ್.ಪೇಟೆ, ನಾಗಮಂಗಲ ತಾಲ್ಲೂಕುಗಳಲ್ಲಿ ಬೆಳೆಯುವ ರಾಗಿಗೂ ಬೇಡಿಕೆ ಸೃಷ್ಟಿಸಬಹುದು. ರಾಗಿ ಉತ್ಪನ್ನ ತಯಾರಿಸುವ ಘಟಕ ಸ್ಥಾಪನೆಗೆ ಒತ್ತು ನೀಡಬಹುದು. ಹಲವು ಪ್ರಸ್ತಾಪಗಳು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮುಂದಿವೆ. ಆದರೆ ಸರ್ಕಾರದ ಪ್ರೋತ್ಸಾಹವಿಲ್ಲದ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದರೆ ಕೈಗಾರಿಕೆಗಳು ಬೆಳೆಯುತ್ತವೆ, ಉದ್ಯೋಗ ಸೃಷ್ಟಿಯಾಗುತ್ತವೆ’ ಎಂದು ಯುವ ಉದ್ಯಮಿಯೊಬ್ಬರು ತಿಳಿಸಿದರು.
ಕೆರೆ ತುಂಬಿಸುವ ಯೋಜನೆ: ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರು ತಡೆದು ಕೆರೆ ತುಂಬಿಸಿಕೊಳ್ಳುವ ಯೋಜನೆಗಳು ಕಾರ್ಯವಾಗದ ಕಾರಣ ನಾಲಾ ಕೊನೆ ಭಾಗದ ರೈತರಿಗೆ ನೀರಿನ ಕೊರತೆ ನೀಗಿಲ್ಲ. ಕೆರೆ ಅಭಿವೃದ್ಧಿ, ಕೆರೆಗಳಿಗೆ ನಾಲೆ ಸಂಪರ್ಕಕ್ಕೆ ಸಮಗ್ರ ಯೋಜನೆಯ ಅವಶ್ಯಕತೆಯಿದ್ದು ಅದಕ್ಕೆ ಈ ಬಾರಿಯ ಬಜೆಟ್‌ನಲ್ಲಾದರೂ ಮುಖ್ಯಮಂತ್ರಿಗಳು ಅನುದಾನ ಮೀಸಲಿಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕಾವೇರಿ ಜಲಾನಯದ ಪ್ರದೇಶದಲ್ಲಿ ಭಾರಿ ಮಳೆ ಬಂದರೆ ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಮಿಳುನಾಡಿಗೆ ನಿಗದಿಯಾಗಿರುವ ನೀರಿಗಿಂತ ಹಲವು ಪಟ್ಟು ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಅಪಾರ ಪ್ರಮಾಣದ ನೀರು ಸಮುದ್ರ ಸೇರುತ್ತದೆ.
ಮದ್ದೂರು ತಾಲ್ಲೂಕು ಎಡದಂಡೆ, ಬಲದಂಡೆ ನಾಲೆಗಳಿಗೆ ತಲುಪಿಲ್ಲ. ಶಿಂಷಾ ತಟದ ಆತಗೂರು, ಮಲ್ಲನಕುಪ್ಪೆ, ಕೆಸ್ತೂರು, ತೈಲೂರು, ಭೀಮನಕೆರೆ, ಬ್ಯಾಡರಹಳ್ಳಿ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ನಾಲೆಯ ಆರಂಭಿಕ ಭಾಗದ ರೈತರು ನೀರು ಬಿಟ್ಟುಕೊಳ್ಳುತ್ತಿರುವ ಕಾರಣ ಕೊನೆಯವರೆಗೂ ನೀರು ಹರಿಯುತ್ತಿಲ್ಲ.
ಮಳವಳ್ಳಿ ತಾಲ್ಲೂಕಿನ ‘ಕನ್ನಂಬಾಡಿಯಿಂದ ಯತ್ತಂಬಾಡಿವರೆಗೆ’ ಕನಸು ಇನ್ನೂ ನನಸಾಗಿಲ್ಲ. ಧನಗೂರು, ಡಿ.ಹಲಸಹಳ್ಳಿ, ಹಾಡ್ಲಿ, ಅಗಸನಪುರ, ಕಂದೇಗಾಲ, ನೆಲಮಾಕನಹಳ್ಳಿ ಭಾಗಗಳಿಗೆ ನೀರು ಬರುತ್ತಿಲ್ಲ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಹೇಮಾವತಿ ಬಲದಂಡೆ, ಎಡದಂತೆ ನಾಲೆಗಳಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಾಲುವೆ ಕಾಮಗಾರಿಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಅಲ್ಲಿ ನೀರು ಹರಿಸುವ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ರೈತರು ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.