ADVERTISEMENT

ರಾಜ್ಯ ಬಜೆಟ್‌: ಮಂಡ್ಯ ಜಿಲ್ಲೆಯ 2 ಐತಿಹಾಸಿಕ ರೈತ ಸಂಸ್ಥೆಗಳಿಗೆ ಆಧುನಿಕ ರೂಪ

ಎಂ.ಎನ್.ಯೋಗೇಶ್‌
Published 17 ಫೆಬ್ರುವರಿ 2024, 6:50 IST
Last Updated 17 ಫೆಬ್ರುವರಿ 2024, 6:50 IST
ಮೈಷುಗರ್‌ ಕಾರ್ಖಾನೆಯತ್ತ ಕಬ್ಬಿನೊಂದಿಗೆ ತೆರಳುತ್ತಿರುವ ಎತ್ತಿನಗಾಡಿ (ಸಂಗ್ರಹ ಚಿತ್ರ)
ಮೈಷುಗರ್‌ ಕಾರ್ಖಾನೆಯತ್ತ ಕಬ್ಬಿನೊಂದಿಗೆ ತೆರಳುತ್ತಿರುವ ಎತ್ತಿನಗಾಡಿ (ಸಂಗ್ರಹ ಚಿತ್ರ)   

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 15ನೇ ಬಜೆಟ್‌ನಲ್ಲಿ ಜಿಲ್ಲೆಯ 2 ಐತಿಹಾಸಿಕ ರೈತ ಸಂಸ್ಥೆಗಳಿಗೆ ಹೊಸ ರೂಪ ನೀಡುವ ಘೋಷಣೆ ಮಾಡಿದ್ದಾರೆ. ಒಂದು; ಮೈಷುಗರ್‌ ಕಾರ್ಖಾನೆಯನ್ನು ಹೊಸದಾಗಿ ನಿರ್ಮಿಸುವುದು. ಇನ್ನೊಂದು; ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ತಜ್ಞರ ಸಮಿತಿ ರಚಿಸುವುದು.

ಮೈಷುಗರ್ ಕಾರ್ಖಾನೆ ಹಾಗೂ ವಿ.ಸಿ.ಫಾರಂ ಎರಡೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಮುಂದಾಲೋಚನೆ, ಕೃಷಿ ವಿಜ್ಞಾನಿ ಲೆಸ್ಲಿ ಕೋಲ್ಮನ್‌ ಅವರ ವೈಜ್ಞಾನಿಕ ಚಿಂತನೆಯ ಫಲದಿಂದ ನಿರ್ಮಾಣ ಕಂಡಿವೆ. ವರ್ಷಪೂರ್ತಿ ನಡೆಯುತ್ತಿದ್ದ ಮೈಷುಗರ್‌ ಕಾರ್ಖಾನೆ ರಾಜ್ಯದ ಸಕ್ಕರೆ ಉದ್ಯಮಕ್ಕೆ ಮಾರ್ಗದರ್ಶಿ ಸ್ಥಾನದಲ್ಲಿತ್ತು. ಬಿತ್ತನೆ ಬೀಜ ತಳಿ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ವಿ.ಸಿ.ಫಾರಂ ಇಂದಿಗೂ ರೈತರ ಪಾಲಿನ ಆಶಾಕಿರಣ.

ಮೈಷುಗರ್‌ ಕಾರ್ಖಾನೆಯನ್ನು ಹೊಸದಾಗಿ ನಿರ್ಮಿಸುವ ಒತ್ತಾಯ ಮೊದಲಿನಿಂದಲೂ ಇತ್ತು, ನಿರೀಕ್ಷೆಯಂತೆ ಮುಖ್ಯಮಂತ್ರಿಗಳು ಹೊಸ ಕಾರ್ಖಾನೆ ನಿರ್ಮಿಸುವ ಘೋಷಣೆ ನೀಡಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸರ್ಕಾರಗಳು ನೂರಾರು ಕೋಟಿ ಹಣ ಕೊಟ್ಟರೂ ಕಾರ್ಖಾನೆ ನಿರೀಕ್ಷೆಯಂತೆ ನಡೆಯದ ಕಾರಣ ಅತ್ಯಾಧುನಿಕ ರೀತಿಯಲ್ಲಿ ಹೊಸ ಕಾರ್ಖಾನೆ ನಿರ್ಮಾಣ ಮಾಡಬೇಕು ಎಂಬ ಕೂಗಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ.

ADVERTISEMENT

1933ರಲ್ಲಿ ಆರಂಭವಾದ ಮೈಷುಗರ್‌ ಕಾರ್ಖಾನೆಗೆ 91 ವರ್ಷ ಸಂದಿದ್ದು ಶತಮಾನದತ್ತ ಸಾಗುತ್ತಿದೆ. ಸಹವಿದ್ಯುತ್‌ ಘಟಕ, ಮದ್ಯಸಾರ ತಯಾರಿಕೆ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದ ಕಾರ್ಖಾನೆ ನಡೆದು ಬಂದ ಹಾದಿ ರೋಚಕವಾಗಿದೆ. ಆದರೆ 2 ದಶಕದಿಂದೀಚೆಗೆ ಭ್ರಷ್ಟ ರಾಜಕಾರಣ ಮೈಷುಗರ್‌ ಅಂಗಳಕ್ಕೆ ಕಾಲಿಟ್ಟ ಪರಿಣಾಮದಿಂದಾಗಿ ಕಾರ್ಖಾನೆ ರೋಗಗ್ರಸ್ತಗೊಂಡಿತ್ತು.

2 ಮಿಲ್‌ಗಳ ಸಹಿತ ಇಂದಿಗೂ ಉತ್ತಮ ಸ್ಥಿತಿಯಲ್ಲಿರುವ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ರೈತ ಹೋರಾಟ ಅದಕ್ಕೆ ಅವಕಾಶ ಕೊಡಲಿಲ್ಲ. ಸರ್ಕಾರಿ ಸ್ವಾಮ್ಯದಲ್ಲೇ ಉಳಿದ ಮೈಷುಗರ್‌ಗೆ ಈಗ ಆಧುನಿಕ ರೂಪ ನೀಡುವ ಘೋಷಣೆ ಕೂಡ ಐತಿಹಾಸಿಕವಾದುದು ಎಂದು ರೈತರು ಹೇಳುತ್ತಾರೆ.

8 ಜಿಲ್ಲೆಗೆ ಕೃಷಿ ವಿವಿ: ಜಿಲ್ಲೆಯ ರೈತ ಮುಖಂಡರು ಹಾಗೂ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ವಿಶೇಷ ಕಾಳಜಿಯಿಂದ ಮುಖ್ಯಮಂತ್ರಿಗಳು ವಿ.ಸಿ ಫಾರಂಗೆ ಕೃಷಿ ವಿವಿ ರೂಪ ನೀಡುವ ಘೋಷನೆ ಮಾಡಿದ್ದಾರೆ. ಬಜೆಟ್‌ ಪೂರ್ವ ಸಭೆಯಲ್ಲಿ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ಅದಕ್ಕೂ ಮೊದಲು ರೈತ ಮುಖಂಡರು ಹಾಗೂ ಕೃಷಿ ವಿಜ್ಞಾನಿಗಳ ಅಭಿಪ್ರಯ ಸಂಗ್ರಹಿಸಿದ್ದ ಚಲುವರಾಯಸ್ವಾಮಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದರು.

ಸದ್ಯ ವಿಸಿ.ಫಾರಂ ಬೆಂಗಳೂರು ಕೃಷಿ ವಿವಿ ಅಡಿ ನಡೆಯುತ್ತಿರುವ ವಿ.ಸಿ.ಫಾರಂ 650 ಎಕರೆ ವಿಶಾಲ ಕೃಷಿ ಭೂಮಿಯ ನಡುವೆ ಅರಳಿ ನಿಂತಿದೆ. ಕಬ್ಬು, ಭತ್ತ, ಮುಸುಕಿನ ಜೋಳ, ರಾಗಿ ತಳಿ ಸಂಶೋಧನೆ, ಕೃಷಿ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ.

ಮಂಡ್ಯ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಂತೆ ಕೃಷಿ, ತೋಟಗಾರಿಕೆ, ಅರಣ್ಯ, ಪಶುವೈದ್ಯಕೀಯ ವಿಜ್ಞಾನಗಳ ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನಾಗಿ ರೂಪಿಸಬೇಕು ಎಂಬ ಪ್ರಸ್ತಾವವನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗಿತ್ತು.

‘ಮುಖ್ಯಮಂತ್ರಿಗಳ ಘೋಷಣೆಯಿಂದ ಹಳೇ ಮೈಸೂರು ಭಾಗದ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಆದರೆ ವಿ.ಸಿ.ಫಾರಂನಲ್ಲಿರುವ ಕೆಲವು ಸಂಶೋಧಕರು ಕ್ಷುಲ್ಲಕ ಕಾರಣ ನೀಡಿ ಇದಕ್ಕೆ ವಿರೋಧಿಸುತ್ತಿದ್ದಾರೆ. ಅವರು ತಮ್ಮ ಮನೋಭಾವ ಬದಲಾಯಿಸಿಕೊಂಡು ವಿವಿ ರಚನೆಗೆ ಸಹಕಾರ ನೀಡಬೇಕು’ ಎಂದು ರೈತ ಮುಖಂಡರೊಬ್ಬರು ಒತ್ತಾಯಿಸಿದರು.

ಮಂಡ್ಯ ಜಿಲ್ಲೆಗೆ ಸಿಕ್ಕಿದ್ದೇನು

  • ಮಂಡ್ಯ ಮೈಷುಗರ್‌ ಆವರಣದಲ್ಲಿ ಹೊಸ ಕಾರ್ಖಾನೆ ನಿರ್ಮಾಣ

  • ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪಿಸಲು ತಜ್ಞರ ಸಮಿತಿ ರಚನೆ

  • ಬೃಂದಾವನಕ್ಕೆ ವಿಶ್ವದರ್ಜೆ ಮಾನ್ಯತೆ ನೀಡಲು ಉನ್ನತೀಕರಣ

  • ಮಾಧವಮಂತ್ರಿ, ಕೆಮ್ಮಣ್ಣು ನಾಲೆಗಳ ಆಧುನೀಕರಣ

  • ಜಿಲ್ಲಾಸ್ಪತ್ರೆಯಲ್ಲಿ ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗಳ ನಿರ್ಮಾಣ

  • ಸಂಯೋಜಿತ, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ

ವಿ.ಸಿ.ಫಾರಂ ಕೃಷಿ ಭೂಮಿಯಲ್ಲಿ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಯುತ್ತಿರುವುದು
ವಿ.ಸಿ.ಪಾರಂ ಸಮಗ್ರ ಕೃಷಿ ವಿವಿ ಘೋಷಣೆ ಸಂಬಂಧ ಈಚೆಗೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿ
ಬೃಂದಾವನ ಉನ್ನತೀಕರಣ
ಕೆಆರ್‌ಎಸ್‌ ಬೃಂದಾವನ ಉದ್ಯಾನವನ್ನು ಸಾರ್ಜಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸುವ ಘೋಷಣೆ ಮಾಡಿರುವುದು ಮುಖ್ಯಮಂತ್ರಿಗಳು ಮಂಡ್ಯಕ್ಕೆ ನೀಡಿರುವ ಇನ್ನೊಂದು ಪ್ರಮುಖ ಕೊಡುಗೆಯಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಮಾತುಗಳನ್ನಾಡುತ್ತಿದ್ದರು. ಇದಕ್ಕೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಡಿಸ್ನಿಲ್ಯಾಂಡ್‌ ಪರಿಕಲ್ಪನೆ ಕೈಬಿಟ್ಟ ಕಾಂಗ್ರೆಸ್‌ ಸರ್ಕಾರ ವಿಶ್ವದರ್ಜೆಯ ಪ್ರವಾಸಿತಾಣವನ್ನಾಗಿ ರೂಪಿಸುವುದಾಗಿ ಘೋಷಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯಾಗಾಲಯ (ಐಪಿಎಚ್‌ಎಲ್‌) ಸ್ಥಾಪಿಸುವ ಮೂಲಕ ಕೈಗೆಟುಕುವ ದರದಲ್ಲಿ ಪ್ರಯೋಗಾಲಯ ಸೇವೆ ನೀಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಜೊತೆಗೆ ₹ 187 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆತ್ಯಾಧುನಿಕ ತುರ್ತು ಚಿಕಿತ್ಸಾ (ಕ್ರಿಟಿಕಲ್‌ ಕೇರ್‌) ಬ್ಲಾಕ್‌ ನಿರ್ಮಾಣದ ಘೋಷಣೆಯೂ ಜಿಲ್ಲೆಗೆ ದೊರತಿದೆ.
ನಾಲೆಗಳ ಆಧುನೀಕರಣ
ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕುಗಳ ನಾಲೆಗಳಿಗೆ ಕೆಆರ್‌ಎಸ್‌ ನೀರು ತಲುಪುತ್ತಿಲ್ಲ ಈ ಭಾಗದ ರೈತರು ವಾರ್ಷಿಕವಾಗಿ ಒಂದೇ ಬೆಳೆ ಬೆಳೆಯುತ್ತಿದ್ದಾರೆ ಎಂಬ ಕೊರಗಿದೆ. ಇದಕ್ಕೆ ನಾಲೆಗಳ ಆಧುನೀಕರಣವೇ ಪರಿಹಾರವಾಗಿದ್ದು ಮುಖ್ಯಮಂತ್ರಿಗಳು ತಮ್ಮ ಬಜೆಟ್‌ನಲ್ಲಿ ಮಳವಳ್ಳಿ ತಾಲ್ಲೂಕಿನ ಮಾಧವಮಂತ್ರಿ ನಾಲೆ ಮದ್ದೂರು ತಾಲ್ಲೂಕಿನ ಕೆಮ್ಮಣ್ಣು ನಾಲೆಗಳ ಆಧುನೀಕರಣ ಘೋಷಣೆ ಮಾಡಿರುವುದು ಆ ಭಾಗದ ರೈತರ ಮೊಗದಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.