ADVERTISEMENT

ಪಾಂಡವಪುರ | ಸಿಎಸ್‌ಪಿ– ದರ್ಶನ್‌ ಪುಟ್ಟಣ್ಣಯ್ಯ ನೇರ ಹಣಾಹಣಿ

ಹಾರೋಹಳ್ಳಿ ಪ್ರಕಾಶ್‌
Published 7 ಮೇ 2023, 7:35 IST
Last Updated 7 ಮೇ 2023, 7:35 IST
ಸಿ.ಎಸ್‌.ಪುಟ್ಟರಾಜು
ಸಿ.ಎಸ್‌.ಪುಟ್ಟರಾಜು   
ಐತಿಹಾಸಿಕ ಮೇಲುಕೋಟೆ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್‌ ಅಭ್ಯರ್ಥಿ, ಶಾಸಕ ಸಿ.ಎಸ್‌.ಪುಟ್ಟರಾಜು ಹಾಗೂ ಕಾಂಗ್ರೆಸ್‌ ಬೆಂಬಲಿತ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ನಡುವೆ ನೇರ ಹಣಾಹಣಿ ಇದೆ. ಇವರ ನಡುವೆ ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್‌ ಕೂಡ ಪೈಪೋಟಿ ನೀಡುತ್ತಿದ್ದಾರೆ.

ಪಾಂಡವಪುರ: ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾವಿನ ಅನುಕಂಪದ ನಡುವೆಯೂ ದರ್ಶನ್‌ ಪುಟ್ಟಣ್ಣಯ್ಯ ಸೋಲು ಕಂಡಿದ್ದರು. ಈ ಬಾರಿ ಎಚ್ಚರಿಕೆಯ ನಡೆ ಅನುಸರಿಸುತ್ತಿರುವ ದರ್ಶನ್‌ ಹೆಚ್ಚಾಗಿ ಕಾಂಗ್ರೆಸ್‌ ಮುಖಂಡರ ಬೆಂಬಲ ಪಡೆಯಲು ಯಶಸ್ವಿಯಾಗಿದ್ದಾರೆ. ಚಿತ್ರನಟ ದರ್ಶನ್‌ ಕೂಡ ಅವರ ಪರವಾಗಿ ಮತಯಾಚನೆ ಮಾಡಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

ರೈತನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟಕೊಂಡು ದರ್ಶನ್‌ ಪುಟ್ಟಣ್ಣಯ್ಯ ಪ್ರಚಾರ ಮಾಡುತ್ತಿದ್ದಾರೆ. ದುದ್ದ ಭಾಗದಲ್ಲಿ ಪಾದಯಾತ್ರೆ ನಡೆಸಿ ಮತ ಸೆಳೆಯಲು ಸಕಲ ಪ್ರಯತ್ನ ಮಾಡಿದ್ದಾರೆ. ಅವರಿಗೆ ಸಾಹಿತಿಗಳು, ಪ್ರಗತಿಪರ ಚಿಂತರಕ ಬೆಂಬಲವೂ ಇದೆ.

ದರ್ಶನ್‌ ಅವರನ್ನು 23 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದ ಶಾಸಕ ಸಿ.ಎಸ್‌.ಪುಟ್ಟರಾಜು ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಭಾನುವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಕ್ಷೇತ್ರಕ್ಕೆ ಪ್ರಚಾರ ಮಾಡಿಸುತ್ತಿದ್ದಾರೆ. ಅವರು ಶಾಸಕರಾಗಿ, ಸಂಸದರಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುನ್ನೆಲೆಗೆ ತಂದು ಪ್ರಚಾರ ಮಾಡುತ್ತಿದ್ದಾರೆ.

ADVERTISEMENT

ಪುಟ್ಟರಾಜು ಅವರು ‘ಪುನೀತೋತ್ಸವ’ ನಡೆಸುವುದರ ಮೂಲಕ ಚುನಾವಣೆಗೆ ಭರ್ಜರಿ ತಯಾರಿ ಪ್ರಾರಂಭಿಸಿದ್ದರು. ಕನ್ನಡ ಚಿತ್ರರಂಗವೇ ಈ ಕಾರ್ಯಕ್ರಮಕ್ಕೆ ಬಂದಿತ್ತು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಂಚರತ್ನ ಯಾತ್ರೆಗೆ ಸಾವಿರಾರು ಜನರನ್ನು ಸೇರಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

ಕಳೆದ ಎರಡು ವರ್ಷಗಳಿಂದಲೂ ಪಾಂಡವಪುರ ಪರಿವರ್ತನಾ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ವೈದ್ಯ ಡಾ.ಎನ್.ಎಸ್.ಇಂದ್ರೇಶ್ ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ನಡೆಸಿದ ಜನಸಂಕಲ್ಪ ಯಾತ್ರೆಗೆ ಹೆಚ್ಚು ಜನರನ್ನು ಸೇರಿಸಿದ್ದರು. ಬಹಳ ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ಅವರು ಬಿಜೆಪಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದು ಪುಟ್ಟರಾಜು, ದರ್ಶನ್‌ ಅವರಂತೆಯೇ ಕ್ಷೇತ್ರದಾದ್ಯಂತ ಸಂಚಾರ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕ್ಷೇತ್ರಕ್ಕೆ ತರೆತಂದು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕ್ಷೇತ್ರದಲ್ಲಿ ಒಟ್ಟಾರೆ 11 ಮಂದಿ ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ಯಾರು ಮೇಲುಕೋಟೆ ರಾಜರಾಗುತ್ತಾರೆ ಎಂಬ ಬಗ್ಗೆ ಜನರ ನಡುವೆ ಚರ್ಚೆ ನಡೆಯುತ್ತಿದೆ.

ದರ್ಶನ್‌ ಪುಟ್ಟಣ್ಣಯ್ಯ
ಮೇಲುಕೋಟೆ ಮ್ಯಾಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.