ADVERTISEMENT

ಮಳವಳ್ಳಿ | ಶಾಸಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು: ಸಿದ್ದರಾಮಯ್ಯ

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹ 5 ಕೋಟಿ: ಡಿ.ಕೆ.ಶಿವಕುಮಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 16:12 IST
Last Updated 16 ಅಕ್ಟೋಬರ್ 2024, 16:12 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ತೊರೆಕಾಡನಹಳ್ಳಿ (ಮಂಡ್ಯ): ‘ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿಯವರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ಜಲಮಂಡಳಿಯ ಶುದ್ಧೀಕರಣ ಘಟಕದ ಆವರಣದಲ್ಲಿ ಬುಧವಾರ ನಡೆದ ಕಾವೇರಿ 5ನೇ ಹಂತದ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಮಳ್ಳವಳ್ಳಿ ಕ್ಷೇತ್ರದ ಶಾಲೆಗಳಿಗೆ ಮಲ್ಟಿಮೀಡಿಯಾ ಸೌಲಭ್ಯಕ್ಕಾಗಿ ಅನುದಾನ ಕೇಳಿದ್ದಾರೆ. ಕಾರ್ಪೊರೇಟ್‌ ಸಾಮಾಜಿಕ ಹೊಣೆಕಾರಿಕೆ(ಸಿಎಸ್‌ಆರ್‌) ನಿಧಿ ಅಡಿ ಅಗತ್ಯ ಅನುದಾನದ ವ್ಯವಸ್ಥೆ ಮಾಡುವಂತೆ ಜಲಮಂಡಳಿ ಅಧ್ಯಕ್ಷರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಮಳವಳ್ಳಿಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ₹5 ಕೋಟಿ ಅನುದಾನದ ವ್ಯವಸ್ಥೆ ಮಾಡುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ಮಂಡ್ಯ ಜಿಲ್ಲೆಯ ಕಟ್ಟಕಡೆಯ ಹಳ್ಳಿಗಳಿಗೂ ಕಾಲುವೆಗಳಲ್ಲಿ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲು ನಮ್ಮ ಸರ್ಕಾರ ಶ್ರಮಿಸಲಿದೆ’ ಎಂದು ತಿಳಿಸಿದರು.

ಬೆಂಗಳೂರಿಗೆ ನೀರು ಹರಿಸಲು ಮಳವಳ್ಳಿ, ಕನಕಪುರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಅನೇಕರು ತಮ್ಮ ಭೂಮಿ ತ್ಯಾಗ ಮಾಡಿದ್ದಾರೆ. ಆಮೂಲಕ ಹೃದಯ ಶ್ರೀಮಂತಿಕೆ ತೋರಿದ್ದಾರೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ‘ಬೆಂಗಳೂರಿಗೆ ನೀರು ಪೂರೈಸುತ್ತಿದ್ದೇವೆ. ಇದರಿಂದ ಮಳವಳ್ಳಿಗೆ ಯಾವುದೇ ಅನುಕೂಲವಿಲ್ಲ, ಆದರೆ ನೀರು ಕೊಟ್ಟವೆಂಬ ತೃಪ್ತಿ ಇದೆ. ಇದಕ್ಕೆ ಪ್ರತಿಯಾಗಿ ಜಲಮಂಡಳಿಯವರು, ಗ್ರೂಪ್‌ ಡಿ ನೌಕರರನ್ನು ಆಯ್ಕೆ ಮಾಡುವಾಗ, ನಮ್ಮ ಕ್ಷೇತ್ರದ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು' ಎಂದು ಮನವಿ ಮಾಡಿದರು. ಹಾಗೆಯೇ, ಅಂಬೇಡ್ಕರ್ ಭವನ ಶಿಥಿಲಗೊಂಡಿದ್ದು, ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು. ನಮ್ಮ ಕ್ಷೇತ್ರದ ಶಾಲೆಗಳಿಗೆ ಮಲ್ಟಿಮೀಡಿಯಾ ಸೌಲಭ್ಯ ಕಲ್ಪಿಸಲು ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.