ಮಂಡ್ಯ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾದ ಜಂಬೂ ಸವಾರಿ ಮೆರವಣಿಗೆಗೆ ಚಿತ್ರನಟ ಶಿವರಾಜ್‌ಕುಮಾರ್ ಅವರು ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಶುಕ್ರವಾರ ಚಾಲನೆ ನೀಡಿದರು.
‘ಮಹೇಂದ್ರ‘ ಆನೆಯ ಮೇಲೆ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿಗೆ ಶಿವರಾಜ್‌ಕುಮಾರ್ ಮತ್ತು ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಪುಷ್ಪಾರ್ಚನೆ ಮಾಡಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಿತು.
ಬನ್ನಿಮಂಟಪ ಕಿರಂಗೂರಿನಿಂದ ಶ್ರೀರಂಗನಾಥ ಸ್ವಾಮಿ ದೇವಾಲಯದವರೆಗೆ ಅಂಬಾರಿ ಹೊತ್ತಿದ್ದ ’ಮಹೇಂದ್ರ’ ಆನೆಯು ಗಾಂಭೀರ್ಯದಿಂದ ಸಾಗಿತು. ಕುಮ್ಕಿ ಆನೆಗಳಾದ ಲಕ್ಷ್ಮಿ, ಹಿರಣ್ಯ ಉತ್ತಮ ಸಾಥ್ ನೀಡಿದವು.
ಪೂಜಾ ಕುಣಿತ, ವೀರಗಾಸೆ, ಮಹಿಳಾ ಕೋಲಾಟ, ಸೋಮನ ಕುಣಿತ, ಡೊಳ್ಳು ಕುಣಿತ, ನಂದಿಧ್ವಜ ಕುಣಿತ ಮುಂತಾದ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ರಂಗು ತಂದವು. ಕೊಂಬು ಕಹಳೆ, ನಗಾರಿ, ಡೊಳ್ಳು ವಾದ್ಯಗಳ ನಾದಕ್ಕೆ ಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಗಾರುಡಿಗೊಂಬೆ ಮತ್ತು ಚಿಲಿಪಿಲಿ ಗೊಂಬೆಗಳು ಮಕ್ಕಳನ್ನು ಆಕರ್ಷಿಸಿದವು. ‘ಹೆಣ್ಣುಭ್ರೂಣ ಹತ್ಯೆ ತಡೆಗಟ್ಟಿ’ ಎಂಬ ಸಾಮಾಜಿಕ ಸಂದೇಶ ಹೊತ್ತ ಸ್ತಬ್ಧಚಿತ್ರ ಗಮನಸೆಳೆಯಿತು. ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆ ಪ್ರದರ್ಶನ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿದವು.
ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನರು ಜಂಬೂಸವಾರಿಯನ್ನು ಕಣ್ತುಂಬಿಕೊಂಡರು. ಕೆಲವು ವಿದೇಶಿಯರು ಕೂಡ ರಸ್ತೆ ಪಕ್ಕ ನಿಂತು ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಯನ್ನು ನೋಡಿ ಪುಳಕಿತರಾದರು.
ಬನ್ನಿಪೂಜೆ ನೆರವೇರಿಸಿದ ವೈದಿಕರು
ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ 20 ವೈದಿಕರ ತಂಡ ಮಧ್ಯಾಹ್ನ 1.30ರಿಂದ ಬನ್ನಿಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿಸಿದರು.
ಗಣಪತಿ ಪೂಜೆ, ಪುಣ್ಯಾಹ, ಮಂಟಪ ಪೂಜೆ, ಗಂಗಾ ಪ್ರಾರ್ಥನೆ, ಚಾಮುಂಡೇಶ್ವರಿ ಪೂಜೆ, ಅಷ್ಟೋತ್ತರ, ಬಲಿ ಪ್ರದಾನ, ಕುಂಕುಮಾರ್ಚನೆ, ಗಜಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಮಧ್ಯಾಹ್ನ 2.30ಕ್ಕೆ ಬನ್ನಿಮರಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ದಂಪತಿ ಪೂಜೆ ನೆರವೇರಿಸಿದರು.
ಮಧ್ಯಾಹ್ನ 2.30ರಿಂದ 3ರವರೆಗೆ ಶುಭ ಮಕರ ಲಗ್ನದಲ್ಲಿ ಜಂಬೂ ಸವಾರಿಗೆ ಚಾಲನೆ ನೀಡಬೇಕಿತ್ತು. ಆದರೆ, ಚಿತ್ರನಟ ತಡವಾಗಿ ಬಂದ ಕಾರಣ ಮಧ್ಯಾಹ್ನ 3.24ಕ್ಕೆ ಚಾಲನೆ ದೊರೆಯಿತು. ಯಮಗಂಡ ಕಾಲದಲ್ಲಿ ಚಾಲನೆ ಕೊಟ್ಟಿದ್ದಾರೆ ಎಂಬ ಅಪಸ್ವರದ ಮಾತುಗಳು ಜನರಿಂದ ಕೇಳಿಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.