ADVERTISEMENT

ಕಾವೇರಿ ‘ದೀಪಾರತಿ’ ಮೌಢ್ಯ ಆಚರಣೆ: ವೆಂಕಟಗಿರಿಯಯ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 13:33 IST
Last Updated 4 ಅಕ್ಟೋಬರ್ 2024, 13:33 IST

ಮಂಡ್ಯ: ಕಾವೇರಿ ‘ದೀಪಾರತಿ’ ಎಂಬುದು ಒಂದು ಮೌಢ್ಯ ಆಚರಣೆಯಾಗಿದ್ದು, ಇದರ ಬದಲಿಗೆ ಕಾವೇರಿ ನೀರು ಸದ್ಬಳಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರ ತರೆಯಬೇಕೆಂದು ಸರ್ಕಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ತ್ಯಾಜ್ಯವು ಜೀವನಾಡಿ ಕಾವೇರಿ ನದಿಗೆ ಸೇರುತ್ತಿದೆ. ಈ ಗಂಡಾಂತರ ನಿವಾರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡದೇ, ಕಾವೇರಿ ದೀಪಾರತಿ ಮೂಲಕ ಮೌಢ್ಯಾಚರಣೆ, ಮತ್ತು ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಶುಕ್ರವಾರ ಆರೋಪಿಸಿದರು.

ಕಾವೇರಿ ಕೊಳ್ಳದ ಜನ ಜಾನುವಾರುಗಳ ಕುಡಿಯುವ ನೀರಿನ ಜೀವನಾಡಿಯಾಗಿರುವ ಕಾವೇರಿ ನದಿಯನ್ನು ಶುದ್ದವಾಗಿರಿಸಿಕೊಳ್ಳಲು ಸರ್ಕಾರ ವಿಫಲವಾಗಿದೆ. ಮೈಸೂರು, ಶ್ರೀರಂಗಪಟ್ಟಣ ಭಾಗದ ಕೊಳಚೆ ನೀರು ನದಿ ಸೇರುವುದನ್ನು ತಡೆಯಲು, ಕಾವೇರಿ ಅಚ್ಚುಕಟ್ಟು ಭಾಗದ ರೈತರ ಬೆಳೆಗಳಿಗೆ ನೀರು ವೈಜ್ಞಾನಿಕವಾಗಿ ಸದ್ಬಳಕೆ ಮಾಡಿಕೊಳ್ಳಲು ಕಾರ್ಯ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ನಮ್ಮ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಹರಿಸುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರವೂ ಭಾರತ ಸಂವಿಧಾನದ ಕಲಂ 262ರಡಿ ರಾಷ್ಟ್ರೀಯ ಜಲ ನೀತಿ ರೂಪಿಸಿ ಎಲ್ಲ ರಾಜ್ಯಗಳಿಗೂ ಸಮಾನವಾದ ನೀರಿನ ಸೌಲಭ್ಯ ಕಲ್ಪಿಸಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಕೆ.ಎಂ.ಅನಿಲ್‌ ಕುಮಾರ್, ಬಿ.ಆನಂದ್, ಮುದ್ದರಾಜು, ದೇವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.