ADVERTISEMENT

ಸೆಪ್ಟೆಂಬರ್‌ ಒಳಗೆ ಬಾಕಿ ಕಾಮಗಾರಿ ಮುಗಿಸಿ: ಸಚಿವ ಚಲುವರಾಯಸ್ವಾಮಿ ಸೂಚನೆ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:34 IST
Last Updated 13 ಆಗಸ್ಟ್ 2024, 14:34 IST
ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು  –ಪ್ರಜಾವಾಣಿ ಚಿತ್ರ 
ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು  –ಪ್ರಜಾವಾಣಿ ಚಿತ್ರ    

ಮಂಡ್ಯ: ‘ಈ ಬಾರಿ ಜಿಲ್ಲೆಯಲ್ಲಿ ಸರ್ಕಾರಿ ವಿವಿಧ ಯೋಜನೆಗಳಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು. ಡಿಸೆಂಬರ್‌ ಅಂತ್ಯದೊಳಗೆ ಶೇ 80ರಷ್ಟು ಸಾಧನೆ ಮಾಡಬೇಕು. ಹಿಂದಿನ ವರ್ಷಕ್ಕೆ (2023–24ನೇ ಸಾಲು) ಸಂಬಂಧಿಸಿದಂತೆ ಬಾಕಿ ಇರುವ ಕಾಮಗಾರಿಗಳು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. 

ವಿವಿಧ ಇಲಾಖೆಗಳು ಶೇ 50ರಷ್ಟು ಅನುದಾನವನ್ನು ಬಳಕೆ ಮಾಡದಿರುವುದು ಗಮನಕ್ಕೆ ಬಂದಿದೆ. ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಕ್ಷೇತ್ರ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ₹2 ಕೋಟಿ ಅನುದಾನವನ್ನು ಸಂಪೂರ್ಣ ವಿನಿಯೋಗಿಸಲು ಅವರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಬೇಕು. ಅಭಿವೃದ್ಧಿಗೆ ಮತ್ತು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ಎಂದು ಸೂಚಿಸಿದರು. 

ADVERTISEMENT

ಫಲಿತಾಂಶ ವೃದ್ಧಿಗೆ ಸೂಚನೆ:

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಕಳೆದ ಬಾರಿ ಕುಸಿದಿದೆ. ಈ ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಫಲಿತಾಂಶ ವೃದ್ಧಿಗೆ ಶ್ರಮಿಸಬೇಕು. ನೆಪ ಹೇಳುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು. 

ತೋಟಗಾರಿಕಾ ಇಲಾಖೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಏಕೆ ತಡವಾಗುತ್ತಿದೆ? ಎಂದು ಸಚಿವರು ಪ್ರಶ್ನಿಸಿದರು. ‘ತೋಟಗಾರಿಕಾ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಲಭ್ಯವಿರುವ ಸಿಬ್ಬಂದಿಯಿಂದಲೇ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಇತರ ಇಲಾಖೆಯವರು ಸಹಕಾರ ನೀಡುತ್ತಿಲ್ಲ. ಹೀಗಾಗಿ ಕೃಷಿ ಇಲಾಖೆ ರೀತಿಯಲ್ಲೇ ನಮಗೂ ಪಿ.ಆರ್‌.ಗಳ ನೆರವು ನೀಡಬೇಕು ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದರು. 

ಕ್ರಿಮಿನಲ್‌ ಪ್ರಕರಣ ದಾಖಲಿಸಿ:

‘ಸರ್ಕಾರಿ ಜಮೀನುಗಳು ಖಾಸಗಿಯವರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲಾಗಿದೆ. ಆಸ್ತಿ ನೋಂದಣಿಯಲ್ಲಿ ಕೆಲವರು ಸುಳ್ಳು ದಾಖಲಾತಿ ಸಲ್ಲಿಸಿದ್ದಾರೆ. ಕೆ.ಆರ್‌.ಎಸ್‌ ಗ್ರಾಮದಲ್ಲಿ ಇಂಥ ಪ್ರಕರಣಗಳು ಹೆಚ್ಚು ಕಂಡುಬಂದಿವೆ’ ಎಂದು ಶ್ರೀರಂಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸಭೆಯ ಗಮನಕ್ಕೆ ತಂದರು. ಸಮತಿ ರಚಿಸಿ, ತಪ್ಪಿತಸ್ಥರ ವಿರುದ್ಧ ‘ಕ್ರಿಮಿನಲ್‌ ಪ್ರಕರಣ’ ದಾಖಲಿಸಬೇಕು ಎಂದು ಒತ್ತಾಯಿಸಿದರು. 

ಜಮೀನಿಗೆ ಆಧಾರ್ ಸೀಡಿಂಗ್ ಮಾಡುವ ಕೆಲಸಕ್ಕೆ ಅಂತಿಮ ದಿನಾಂಕವನ್ನು ನಿಗದಿ ಮಾಡಿ ಕೆಲಸವನ್ನು ಚುರುಕುಗೊಳಿಸಿ. ಮಾಲೀಕರ ಆಧಾರ್ ಕಾಡ್೯ ಸೀಡಿಂಗ್ ಕೆಲಸ ಮಾಡಿ ಯಾವುದೇ ತಪ್ಪುಗಳು ನಡೆಯದಂತೆ ನೋಡಿಕೊಳ್ಳಿ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. 

ಡೀಮ್ಡ್‌ ಫಾರೆಸ್ಟ್‌ ಗೊಂದಲ:

ಡೀಮ್ಡ್‌ ಫಾರೆಸ್ಟ್‌ನಿಂದ ಅರಣ್ಯ ಚಟುವಟಿಕೆಗಳೂ ನಡೆಯುತ್ತಿಲ್ಲ. ಇತ್ತ ರೈತರಿಗೂ ಉಪಯೋಗವಾಗುತ್ತಿಲ್ಲ. ರೈತರು ಬಳಸುತ್ತಿದ್ದ ಜಮೀನನ್ನು ಮಾರ್ಕ್‌ ಮಾಡಿ ಅರಣ್ಯ ಇಲಾಖೆಗೆ ಸೇರಿಸಲಾಗಿದೆ. ಹೀಗಾಗಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದ ಭೂಮಿ ಯಾವುದು ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಕೆ.ಆರ್‌.ಪೇಟೆ ಶಾಸಕ ಮಂಜು ಮತ್ತು ಶಾಸಕ ನರೇಂದ್ರಸ್ವಾಮಿ ಒತ್ತಾಯಿಸಿದರು. 

‘ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜತೆಗೆ ಅರಣ್ಯ ಪ್ರದೇಶ ಒತ್ತುವರಿಯಾಗದಂತೆಯೂ ಅರಣ್ಯಾಧಿಕಾರಿಗಳು ನೋಡಿಕೊಳ್ಳಬೇಕು. ಕಾಲಮಿತಿಯೊಳಗೆ ಡೀಮ್ಡ್‌ ಫಾರೆಸ್ಟ್‌ ಗೊಂದಲ ಪರಿಹರಿಸದಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ವರದಿ ಕೊಡಿ’ ಎಂದು ಸಚಿವರು ಜಿಲ್ಲಾಧಿಕಾರಿಗೂ ಸೂಚಿಸಿದರು. 

ರೈತರಿಗೆ ₹55 ಕೋಟಿ ಬರ ಪರಿಹಾರ:

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,15,621 ರೈತರಿಗೆ ₹55 ಕೋಟಿ ಪರಿಹಾರ ನೀಡಲಾಗಿದೆ. ಜೋಳ, ರಾಗಿ, ಭತ್ತ ಮತ್ತು ನೆಲಗಡಲೆ ಈ ನಾಲ್ಕು ಬೆಳೆಗಳಿಗೆ ಮಾತ್ರ ಎನ್‌ಡಿಆರ್‌ಎಫ್‌ ಅಡಿ ಅಧಿಸೂಚನೆ ಹೊರಡಿಸಲಾಗಿತ್ತು. ಕೆಲವು ರೈತರು, ತೆಂಗು, ಕಬ್ಬು ಬೆಳೆ ನಾಶಕ್ಕೂ ಪರಿಹಾರ ಕೇಳುತ್ತಿದ್ದಾರೆ. ಇದಕ್ಕೆ ಅವಕಾಶವಿಲ್ಲ. ಬಿತ್ತನೆ ಮಾಡದೇ ಇದ್ದವರು ಕೂಡ ಪರಿಹಾರ ಕೇಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕುಮಾರ ಅವರು ಸಚಿವರ ಗಮನಕ್ಕೆ ತಂದರು. 

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಮಧು ಜಿ. ಮಾದೇಗೌಡ, ಶಾಸಕ ಎಚ್.ಟಿ ಮಂಜು, ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷೆ ಪುಷ್ಪಾ ಅಮರನಾಥ್, ಎಂ‌.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಅನುಮತಿ ನೀಡಬೇಕು – ಪುಷ್ಪಾ ಅಮರನಾಥ್‌ ರಾಜ್ಯ ಉಪಾಧ್ಯಕ್ಷೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ

ಮಳವಳ್ಳಿ ಪಟ್ಟಣದಲ್ಲಿ ಯಾರದೋ ಒಬ್ಬರ ಕಟ್ಟಡ ಉಳಿಸಲು ರಸ್ತೆಯನ್ನು ಕಿರಿದು ಮಾಡಿದರು. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಎನ್‌ಎಚ್‌ಎಐ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ
– ಪಿ.ಎಂ. ನರೇಂದ್ರಸ್ವಾಮಿ ಮಳವಳ್ಳಿ ಶಾಸಕ
ತೀ ಬಾರಿ ಸ್ಮಶಾನ ಸಮಸ್ಯೆ ಕೇಳಿಬರುತ್ತಿದೆ. ಮೃತರ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಲು ಪರದಾಡುವ ಪರಿಸ್ಥಿತಿ ಇದೆ. ಕೂಡಲೇ ಅಧಿಕಾರಿಗಳು ಸ್ಮಶಾನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು
– ಎನ್‌.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಅನುಮತಿ ನೀಡಬೇಕು
– ಪುಷ್ಪಾ ಅಮರನಾಥ್‌ ರಾಜ್ಯ ಉಪಾಧ್ಯಕ್ಷೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
ಬೆಳೆ ಹಾನಿ ಸಮೀಕ್ಷೆಗೆ 10 ದಿನಗಳ ಗಡುವು
‘ಮಳೆ/ನೆರೆಯಿಂದ ಜಿಲ್ಲೆಯಲ್ಲಿ 4 ಮನೆಗಳು ಸಂಪೂರ್ಣ ಮತ್ತು 32 ಮನೆಗಳು ಭಾಗಶಃ ಹಾನಿಗೊಂಡಿವೆ. ಎಸ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುತ್ತಿದೆ. ಸುಮಾರು 249.1 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಈಗಾಗಲೇ 80 ಹೆಕ್ಟೇರ್‌ ಸಮೀಕ್ಷೆ ಮುಗಿದಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಸಭೆಗೆ ಮಾಹಿತಿ ನೀಡಿದರು.  ಕೃಷಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿಯ ಸ್ಥಳ ಸಮೀಕ್ಷೆ ಮಾಡಿ 10 ದಿನದ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.  

‘ರೈತರ ಆತ್ಮಹತ್ಯೆ: ತಕ್ಷಣ ಪರಿಹಾರ ನೀಡಿ’

‘ಮಂಡ್ಯ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 44 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು 41 ಅರ್ಹ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಈ ವರ್ಷ ಏಪ್ರಿಲ್‌ನಿಂದ ಇದುವರೆಗೆ 7 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು ಎಫ್‌.ಎಸ್‌.ಎಲ್‌ ವರದಿ ವಿಳಂಬದಿಂದ ಕೆಲವರಿಗೆ ಪರಿಹಾರ ನೀಡಿಲ್ಲ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.  ‘ರೈತ ಆತ್ಮಹತ್ಯೆ ಬಗ್ಗೆ ಅರ್ಜಿ ಬರುವವರೆಗೆ ಕಾಯದೇ ಕೃಷಿ ಮತ್ತು ಕಂದಾಯ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ವರದಿ ಸಲ್ಲಿಸಬೇಕು. ಪರಿಹಾರಕ್ಕಾಗಿ ರೈತರನ್ನು ಸುತ್ತಾಡಿಸದೇ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ತಾಕೀತು ಮಾಡಿದರು. 

‘ಕಾವೇರಿ ನದಿಗೆ ಕಲುಷಿತ ನೀರು’

‘ಮೈಸೂರು ಕೈಗಾರಿಕಾ ಪ್ರದೇಶದಿಂದ ಮತ್ತು ಕೆಲವು ಅಕ್ರಮ ರೆಸಾರ್ಟ್‌ಗಳು ರಾಸಾಯನಿಕ ಮಿಶ್ರಿತ ಮತ್ತು ವಿಷಯುಕ್ತ ನೀರನ್ನು ಕಾವೇರಿ ನದಿಗೆ ಬಿಡುತ್ತಿದ್ದಾರೆ. ಈ ನೀರೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮತ್ತು ಮೈಸೂರು ನಗರದ ಜನರಿಗೆ ಕುಡಿಯಲು ಸರಬರಾಜಾಗುತ್ತಿದೆ. ನೀರನ್ನು ಸಂಸ್ಕರಿಸಿ ಪೂರೈಸಿದರೂ ಕೆಮಿಕಲ್‌ ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಸಭೆಯ ಗಮನಸೆಳೆದರು. ‘ಈ ಬಗ್ಗೆ ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ಸಮಸ್ಯೆ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೇನೆ. ಸರ್ಕಾರದ ಮಟ್ಟದಲ್ಲೂ ಇದು ಚರ್ಚೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ನೆಟ್ಟ ಸಸಿಗಳು ಎಲ್ಲಿ ಹೋದವು?

ಅರಣ್ಯ ಇಲಾಖೆಯವರು ಪ್ರತಿ ವರ್ಷ ಗುರಿ ಹಾಕಿಕೊಂಡು ಸಾವಿರಾರು ಸಸಿ ನೆಡುತ್ತಾರೆ. 10–12 ವರ್ಷಗಳಲ್ಲಿ ಅವುಗಳೆಲ್ಲ ಬೆಳೆದಿದ್ದರೆ ಮಂಡ್ಯ ಜಿಲ್ಲೆಯ ಬಹಳಷ್ಟು ಪ್ರದೇಶ ಅರಣ್ಯದಂತೆ ಕಂಗೊಳಿಸಬೇಕಿತ್ತು. ದಾಖಲೆಯಲ್ಲಿ ತೋರಿಸಿದ ಸಸಿಗಳು ಎಲ್ಲಿ ಹೋದವು? ಎಂದು ಅರಣ್ಯ ಇಲಾಖೆಯವರನ್ನು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ತರಾಟೆ ತೆಗೆದುಕೊಂಡರು.  ಎಸ್‌ಸಿ ಎಸ್‌ಟಿ ಗ್ರಾಮಗಳಲ್ಲಿ ಎಲ್ಲಿ ಸರ್ಕಾರಿ ಜಾಗವಿದೆಯೇ ಅಲ್ಲಿ ಸ್ಮಶಾನ ಸೌಲಭ್ಯ ಕಲ್ಪಿಸಬೇಕು. ಜಾಗ ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಬೇಕು. ಅನುದಾನವಿದ್ದರೂ ಏಕೆ ಸ್ಮಶಾನಗಳ ಕೊರತೆಯಿದೆ ಎಂದು ಪ್ರಶ್ನಿಸಿದರು. ಸ್ಮಶಾನ ಒತ್ತುವರಿ ತೆರವುಗೊಳಿಸಿದರೆ ಅರ್ಧ ಸಮಸ್ಯೆ ಬಗೆಹರಿಯುತ್ತದೆ ಎಂದು ಶಾಸಕರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.