ADVERTISEMENT

ಮೊಬೈಲ್‌ ಗೀಳಿನಿಂದ ಮಕ್ಕಳನ್ನು ದೂರವಿಡಿ: ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 13:25 IST
Last Updated 1 ಮೇ 2024, 13:25 IST
ಶ್ರೀರಂಗಪಟ್ಟಣದಲ್ಲಿ ಆಚೀವರ್ಸ್‌ ಅಕಾಡೆಮಿ ಏರ್ಪಡಿಸಿದ್ದ ಉಚಿತ ಕ್ರೀಡಾ ಬೇಸಿಗೆ ಶಿಬಿರದ ನಿಮಿತ್ತ ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿಯ ಮುಖ್ಯಸ್ಥ ಡಾ.ಆರ್‌. ರಾಘವೇಂದ್ರ ಮಾತನಾಡಿದರು. ಡಾ.ಬಿ. ಸುಜಯಕುಮಾರ್‌ ಇದ್ದಾರೆ
ಶ್ರೀರಂಗಪಟ್ಟಣದಲ್ಲಿ ಆಚೀವರ್ಸ್‌ ಅಕಾಡೆಮಿ ಏರ್ಪಡಿಸಿದ್ದ ಉಚಿತ ಕ್ರೀಡಾ ಬೇಸಿಗೆ ಶಿಬಿರದ ನಿಮಿತ್ತ ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿಯ ಮುಖ್ಯಸ್ಥ ಡಾ.ಆರ್‌. ರಾಘವೇಂದ್ರ ಮಾತನಾಡಿದರು. ಡಾ.ಬಿ. ಸುಜಯಕುಮಾರ್‌ ಇದ್ದಾರೆ   

ಶ್ರೀರಂಗಪಟ್ಟಣ: ‘ಮೊಬೈಲ್‌ ಬಳಕೆಯ ಗೀಳು ಸಮಯ ಮತ್ತು ಸೃಜನಶೀಲ ಸಾಮರ್ಥ್ಯವನ್ನು ಹಾಳು ಮಾಡುತ್ತಿದ್ದು, ಮೊಬೈಲ್‌ ಬಳಕೆಯ ಗೀಳಿನಿಂದ ಮಕ್ಕಳನ್ನು ದೂರ ಇಡಬೇಕು’ ಎಂದು ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌ ಹೇಳಿದರು.

ಪಟ್ಟಣದಲ್ಲಿ ಆಚೀವರ್ಸ್‌ ಅಕಾಡೆಮಿ ಏರ್ಪಡಿಸಿದ್ದ ಉಚಿತ ಕ್ರೀಡಾ ಬೇಸಿಗೆ ಶಿಬಿರದ ನಿಮಿತ್ತ ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೊಬೈಲ್‌ನ ಅತಿಯಾದ ಬಳಕೆಯಿಂದ ಕಣ್ಣು ಮತ್ತು ಮಿದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ತಜ್ಞರ ವರದಿಗಳು ಹೇಳುತ್ತಿವೆ. ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಮೊಬೈಲ್‌ ಬಳಕೆ ಅಡ್ಡಿಯಾಗುತ್ತಿದೆ. ಹಾಗಾಗಿ ಪೋಷಕರು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. ವಯಸ್ಕರು ಕೂಡ ಅಗತ್ಯ ಮೀರಿ ಮೊಬೈಲ್‌ ಬಳಸಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಬೇಸಿಗೆ ಶಿಬಿರಗಳು ಮಕ್ಕಳ ಅಂತರ್ಗತ ಶಕ್ತಿಯನ್ನು ಬೆಳಕಿಗೆ ತರಲು ಸಹಕಾರಿಯಾಗಿವೆ. ಕ್ರೀಡೆ, ಗಾಯನ, ಯೋಗ ಇತರ ಚಟುವಟಿಕೆಗಳು ಶಿಬಿರಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಸಂವಹನ ಶಕ್ತಿಯೂವೃದ್ಧಿಸುತ್ತದೆ. ರಾಘವೇಂದ್ರ ಅವರು ಹಲವು ವರ್ಷಗಳಿಂದ ಇಂತಹ ಶಿಬಿರಗಳನ್ನು ನಡೆಸುತ್ತಿದ್ದು, ನೂರಾರು ಮಂದಿಗೆ ಅನುಕೂಲ ಆಗಿದೆ’ ಎಂದು ಶ್ಲಾಘಿಸಿದರು.

ಶಿಬಿರದ ಸಂಯೋಜಕ ಡಾ.ಆರ್‌. ರಾಘವೇಂದ್ರ ಮಾತನಾಡಿ, ‘ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ, ಉಚಿತವಾಗಿ ಈ ಕ್ರೀಡಾ ಶಿಬಿರವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಮಕ್ಕಳಿಗೆ ಇದರಿಂದ ಅನುಕೂಲ ಆಗಿದೆ. ಪೊಲೀಸ್‌, ರೈಲ್ವೆ, ಭಾರತೀಯ ಸೇನೆಗೆ ಸೇರುವ ಆಸಕ್ತರಿಗೂ ಉಚಿತವಾಗಿ ಕ್ರೀಡಾ ತರಬೇತಿ ನೀಡಲಾಗಿದೆ’ ಎಂದರು.

ವಕೀಲ ಪಿ.ಮಂಜುರಾಂ ಪುಟ್ಟೇಗೌಡ, ಪುರಸಭೆ ಮಾಜಿ ಸದಸ್ಯೆ ಕಾವೇರಮ್ಮ ಶೇಷಾದ್ರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.