ಮಂಡ್ಯ: ಕೆರಗೋಡು ವಿಧಾನಸಭಾ ಕ್ಷೇತ್ರದಿಂದ ನಾಲ್ಕ ಬಾರಿ ಶಾಸಕ, ಒಮ್ಮೆ ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರೂ ಆಗಿದ್ದ ಡಾ.ಎಚ್.ಡಿ.ಚೌಡಯ್ಯ (94) ಮಂಗಳವಾರ ತಡರಾತ್ರಿ ಅನಾರೋಗ್ಯದಿಂದ ನಿಧನರಾದರು.
ತಾಲ್ಲೂಕಿನ ಹೊಳಲು ಗ್ರಾಮದ ಚೌಡಯ್ಯ ಅವರು ಸಹಕಾರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. 1960ರಿಂದ 1968ರವರೆಗೆ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ನಂತರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.
1978ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. 1983ರ ಚುನಾವಣೆಯಲ್ಲಿ ತಮ್ಮ ರಾಜಕೀಯ ಗುರು ಕೆ.ವಿ.ಶಂಕರಗೌಡ ವಿರುದ್ಧವೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1985ರಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1991 ಕಾಂಗ್ರೆಸ್‌ನಿಂದ ಚೌಡಯ್ಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕೆರಗೋಡು ಕ್ಷೇತ್ರ ಮಂಡ್ಯ ಕ್ಷೇತ್ರದೊಂದಿಗೆ ವಿಲೀನವಾಯಿತು.
ಇದಕ್ಕೂ ಮೊದಲು ಚೌಡಯ್ಯ ಅವರು 1968ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿ ಎಸ್.ಎಂ.ಕೃಷ್ಣ ಎದುರು ಸೋಲು ಕಂಡಿದ್ದರು. ನಂತರ ಮತ್ತೆ 1971ರ ಲೋಕಸಭಾ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಅವರ ಎದುರು ಸೋಲು ಕಂಡಿದ್ದರು. ಎಸ್.ಎಂ.ಕೃಷ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೆ, ಚೌಡಯ್ಯ ಅವರು ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.
2004ರಿಂದ ಎಚ್.ಡಿ.ಚೌಡಯ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ರಾಜಕೀಯವಾಗಿ ವಿರೋಧವಿದ್ದರೂ ಕೆ.ವಿ.ಶಂಕರಗೌಡರು ತಾವು ಕಟ್ಟಿದ ಜನತಾ ಶಿಕ್ಷಣ ಸಂಸ್ಥೆ (ಪಿಇಟಿ)ಗೆ ಚೌಡಯ್ಯ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. 31 ವರ್ಷಗಳ ಕಾಲ ಚೌಡಯ್ಯ ಪಿಇಟಿ ಅಧ್ಯಕ್ಷರಾಗಿದ್ದರು. ಇತ್ತೀಚೆಗಷ್ಟೇ ಶಂಕರಗೌಡರ ಮೊಮ್ಮಗ ಕೆ.ಎಸ್.ವಿಜಯ್ ಆನಂದ್ ಅವರಿಗೆ ಪಿಇಟಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದರು.
ಸಯಮ ಪರಿಪಾಲನೆಯಲ್ಲಿ ಶಿಸ್ತಿನ ಸಿಪಾಯಿಯಂತಿದ್ದ ಚೌಡಯ್ಯ ಅವರು ಕ್ರೀಡಾ ಮನೋಭಾವ ಹೊಂದದ್ದರು. ಪಿಇಟಿ ಆವರಣದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಿದ್ದರು. ಅವರು ನಿರ್ಮಿಸಿರುವ ಕ್ರಿಕೆಟ್ ಸ್ಟೇಡಿಯಂ, ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ, ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಟೂರ್ನಾಮೆಂಟ್‌ಗಳು ನಡೆಯುತ್ತವೆ. 2012ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅವರಿಗೆ ಗೌರ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಹೊಳಲು ಗ್ರಾಮದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ, ಬುಧವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.