ಮಂಡ್ಯ: ‘ನಾಗಮಂಗಲದಲ್ಲಿ ನಡೆದ ಗಲಭೆಯಲ್ಲಿ ಕೇರಳ ಮೂಲದ ಇಬ್ಬರು ಪಾಲ್ಗೊಂಡಿದ್ದ ಬಗ್ಗೆ ತನಿಖೆ ನಡೆಸುತ್ತೇವೆ. ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ) ತನಿಖೆ ಮಾಡಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಇಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೇರಳ ಮೂಲದ ಇಬ್ಬರು ನಾಗಮಂಗಲದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಎಫ್‌ಐಆರ್ ಕೂಡ ಆಗಿದೆ’ ಎಂದು ಹೇಳಿದರು.
‘ಗಣಪತಿ ಮೂರ್ತಿಯನ್ನು ಆ ರಸ್ತೆಯಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗಿದ್ದರಿಂದ ಸಣ್ಣ ಘರ್ಷಣೆ ಆಗಿದೆ. ಯಾರು ಮೊದಲು ಕಲ್ಲು ತೂರಿದರು ಎಂಬುದನ್ನೂ ವಿಚಾರಣೆ ಮಾಡಬೇಕಾಗುತ್ತದೆ. ಸದ್ಯಕ್ಕೆ ಹಿಂದೂ–ಮುಸ್ಲಿಮರಿಬ್ಬರೂ ಒಟ್ಟಾಗಿ ಹಬ್ಬಗಳನ್ನು ಶಾಂತಿಯುತವಾಗಿ ನಡೆಸಲು ಒಪ್ಪಿದ್ದಾರೆ. ಹಿಂದೂಗಳು ಮುಸ್ಲಿಮರ ಜೊತೆಗೂಡಿ ಸೋಮವಾರ ‘ಈದ್ ಮಿಲಾದ್’ ಆಚರಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಗಲಭೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ 74 ಆರೋಪಿಗಳ ಪೈಕಿ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರಾದ 44ನೇ ಆರೋಪಿ ಯೂಸುಫ್, 61ನೇ ಆರೋಪಿ ನಾಸೀರ್ ಎಂಬುವವರು ಕೇರಳ ಮೂಲದ ಮಲ್ಲಪುರಂ ನಿವಾಸಿಗಳು ಎನ್ನಲಾಗಿದೆ.
ಪಿಎಫ್‌ಐ ನಂಟು: ವಿಎಚ್‌ಪಿ ಆರೋಪ
‘ಶಾಂತವಾಗಿದ್ದ ನಾಗಮಂಗಲಕ್ಕೆ ಕಿಚ್ಚು ಹೊತ್ತಿಸಲು ಕೇರಳದ ಪಿಎಫ್‌ಐ ಸಂಘಟನೆಯ ಮುಸ್ಲಿಂ ಯುವಕರು ಮೊದಲೇ ಯೋಜನೆ ಮಾಡಿ ತಯಾರಿ ನಡೆಸಿದ್ದರು. ಗಲಾಟೆ ನಡೆದ ದಿನ ಮೆಡಿಕಲ್ ಶಾಪ್‌ನಲ್ಲಿ 200 ಮಾಸ್ಕ್ ಖರೀದಿಸಿದ್ದಾರೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡವಿದೆ. ಈ ಪ್ರಕರಣವನ್ನು ಎನ್.ಐ.ಎ. ತನಿಖೆಗೆ ವಹಿಸಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಸದಸ್ಯರಾದ ರಾಘವೇಂದ್ರ, ಚಿಕ್ಕಬಳ್ಳಿ ಬಾಲಕೃಷ್ಣ, ಅಜಿತ್ ಜೈನ್ ಆಗ್ರಹಿಸಿದ್ದಾರೆ.
‘ಮುನಿರತ್ನ ನಡವಳಿಕೆ ಅಸಭ್ಯ’
‘ಮುನಿರತ್ನ ನಡೆದುಕೊಂಡಿರೋದು ಬರಿ ಜಾತಿ ನಿಂದನೆ ಮಾತ್ರ ಅಲ್ಲಾ ಎಲ್ಲಾ ರೀತಿ ಅಸಭ್ಯವಾಗಿದೆ. ಜನಪ್ರತಿನಿಧಿಯಾಗಿ ಈ ರೀತಿ ನಡೆದುಕೊಳ್ಳಬಾರದು. ಆರ್. ಅಶೋಕ ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ತಪ್ಪಲ್ಲಿ ಅಶೋಕ ಭಾಗಿಯಾಗಲು ಸಿದ್ಧವಾಗಿದ್ದಾರಾ? ಎಂದು ಪ್ರಶ್ನಿಸಿದರು. ‘ನಮ್ಮ ಕಡೆ ಬೆರಳು ಮಾಡುವ ಬದಲು ಐದು ವರ್ಷ ಸುಮ್ಮನಿರೋಕೆ ಹೇಳಿ ಇಲ್ಲವಾದರೆ ಈಗಲೇ ಸ್ಪೀಡ್ ಆಗಿ ಹೋದರೆ ಐದು ವರ್ಷ ಮುಗಿಯೋದರೊಳಗೆ ಠುಸ್ ಆಗಿ ಬಿಡುತ್ತಾರೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.