ADVERTISEMENT

ಕೆ.ಆರ್.ಪೇಟೆ: ಕೆರೆ ಒಡಲಿಗೆ ಫುಡ್ ಪಾರ್ಕ್‌ ತ್ಯಾಜ್ಯ!

ಬಲ್ಲೇನಹಳ್ಳಿ ಮಂಜುನಾಥ
Published 11 ಜುಲೈ 2024, 5:38 IST
Last Updated 11 ಜುಲೈ 2024, 5:38 IST
<div class="paragraphs"><p>ಕೆ.ಆರ್.ಪೇಟೆ ತಾಲ್ಲೂಕಿನ ಬಣ್ಣೇನಹಳ್ಳಿ ಸಮೀಪದ ಫೇವರಿಚ್ ಮೆಗಾ ಫುಡ್ ಪಾರ್ಕ್‌ನ ಕಲುಷಿತ ನೀರು ಹರಿಯುತ್ತಿರುವುದು</p></div>

ಕೆ.ಆರ್.ಪೇಟೆ ತಾಲ್ಲೂಕಿನ ಬಣ್ಣೇನಹಳ್ಳಿ ಸಮೀಪದ ಫೇವರಿಚ್ ಮೆಗಾ ಫುಡ್ ಪಾರ್ಕ್‌ನ ಕಲುಷಿತ ನೀರು ಹರಿಯುತ್ತಿರುವುದು

   

ಕೆ.ಆರ್.ಪೇಟೆ: ಕಾರ್ಖಾನೆಗಳು ಸ್ಥಾಪನೆಯಾದರೆ ಮನೆ ಮುಂದೆ ಉದ್ಯೋಗ ಸಿಗುತ್ತದೆ, ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು, ಗ್ರಾಮಗಳು ಅಭಿವೃದ್ಧಿಯಾಗಬಹುದು ಎಂಬ ಕನಸು ಕಂಡು ಮೆಗಾ ಫುಡ್ ಪಾರ್ಕ್‌ ಆರಂಭಿಸಲು ಸಹಕಾರ ನೀಡಿದ ತಾಲ್ಲೂಕಿನ ಬಣ್ಣೇನಹಳ್ಳಿ ಪರಿಸರದ ಗ್ರಾಮಸ್ಥರು ಈಗ ಅದೇ ಕಾರ್ಖಾನೆಗಳು ಹಾಕುವ ತ್ಯಾಜ್ಯ ಮತ್ತು ಕಲುಷಿತ ನೀರಿನಿಂದ ಕಂಗಾಲಾಗಿದ್ದಾರೆ.

ಮೈಸೂರು -ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಗೆ ಅನತಿ ದೂರದಲ್ಲಿ ನಿರ್ಮಾಣಗೊಂಡಿರುವ ಈ ‘ಫೇವರಿಚ್ ಮೆಗಾ ಫುಡ್ ಪಾರ್ಕ್’ 2014ರಲ್ಲಿ ಸ್ಥಾಪನೆಯಾದಾಗ ಈ ಭಾಗದ ಸಾವಿರಾರು ಯುವಕರಿಗೆ ಉದ್ಯೋಗ ದೊರಕುತ್ತದೆ ಎಂಬ ಕನಸು ಕಂಡಿದ್ದರು. ವಿದೇಶಿ ಕಂಪನಿಗಳು ಅತ್ಯಾಧುನಿಕ ಆಹಾರ ತಂತ್ರಜ್ಞಾನದ ಘಟಕಗಳು ಆರಂಭವಾಗುತ್ತವೆ ಎಂದು ನಿರೀಕ್ಷಿಸಿದ್ದರು.

ADVERTISEMENT

ಆದರೆ, ಇಲ್ಲಿ ಆರಂಭಗೊಂಡಿರುವ ದೇಶಿಯ ಘಟಕಗಳು ಮನ್‌ಮುಲ್‌ ಜೊತೆ ಒಪ್ಪಂದ ಮಾಡಿಕೊಂಡು ಪಶು ಆಹಾರ ಉತ್ಪನ್ನ ಘಟಕ, ತಂಪು ಪಾನೀಯ ಉತ್ಪಾದನಾ ಘಟಕಗಳನ್ನು ಮಾತ್ರ ಆರಂಭಿಸಿವೆಯೇ ವಿನಃ ದೊಡ್ಡಪ್ರಮಾಣದ ಘಟಕಗಳನ್ನು ಆರಂಭಿಸಿಯೇ ಇಲ್ಲ.

ಹೊರ ರಾಜ್ಯದವರಿಗೆ ಮಣೆ:

ಇಲ್ಲಿ ಆರಂಭಗೊಂಡಿರುವ ಆಹಾರ ಉತ್ಪಾದನಾ ಘಟಕಗಳು ಹೊರ ರಾಜ್ಯದ ಯುವಕರಿಗೆ ಮಣೆ ಹಾಕಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿವೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಒಪ್ಪಂದಗಳನ್ನು ಪಾಲಿಸದೆ ಘಟಕಗಳಿಂದ ಹೊರಸೂಸುವ ತ್ಯಾಜ್ಯ ಮತ್ತು ಕಲುಷಿತ ನೀರನ್ನು ಸಮೀಪದ ಕೆರೆ ಕಟ್ಟೆಗಳಿಗೆ ಬಿಡುವ ಮೂಲಕ ರೈತರೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಕೆರೆಯ ನೀರು ಕಲುಷಿತಗೊಂಡಿರುವುದುರಿಂದ ಫುಡ್‌ಪಾರ್ಕ್ ವ್ಯಾಪ್ತಿಯ ಐಚನಹಳ್ಳಿ, ಬಣ್ಣೇನಹಳ್ಳಿ, ತಗಡೂರು, ವೆಂಕಟರಾಜಪುರ, ಅಶೋಕನಗರ, ಚೀಕನಹಳ್ಳಿ ಮುಂತಾದ ಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಲುಷಿತ ನೀರನ್ನು ಕೃಷಿ ಚಟುವಟಿಕೆ ಸೇರಿದಂತೆ ದೈನಂದಿನ ಕೆಲಸಗಳಿಗೆ ಬಳಸುವ ಸಮೀಪದ ಕೆರೆ, ಕಟ್ಟೆಗಳಿಗೆ ಹರಿಸುತ್ತಿರುವುದರಿಂದ ಅವುಗಳು ತ್ಯಾಜ್ಯದ

ಗುಂಡಿಗಳಾಗಿದ್ದು, ಪಶು, ಪಕ್ಷಿ ಮತ್ತು ಜಾನುವಾರು ಬಳಸದ ಸ್ಥಿತಿಗೆ ತಲುಪಿದೆ. ತ್ಯಾಜ್ಯದ ನೀರಿನಿಂದ ರೈತರ ಬದುಕು ನರಕವಾಗುತ್ತಿದ್ದು, ಇದರಿಂದ ಮುಕ್ತಿ ದೊರಕಿಸಿಕೊಡಿ’ ಎಂದು ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಹೋರಾಟಗಾರ ನಾಗೇಶ್ ಮನವಿ ಮಾಡುತ್ತಾರೆ.

‘ಯಾವುದೇ ಕಾರ್ಖಾನೆಗಳು ತ್ಯಾಜ್ಯದ ನೀರು ಘನ ತ್ಯಾಜ್ಯವನ್ನು ಸಂಸ್ಕರಿಸಿ ಶುದ್ಧೀಕರಿಸಿ ಮತ್ತೆ ಮರುಬಳಕೆ ಮಾಡಬೇಕೆಂಬ ಕಟ್ಟುನಿಟ್ಟಿನ ನಿಯಮವಿದ್ದರೂ ಮೆಗಾ ಫುಡ್ ಪಾರ್ಕ್ ನಿಯಮವನ್ನು ಗಾಳಿಗೆ ತೂರಿ ಕೆರೆಕಟ್ಟೆಗಳಿಗೆ ಬಿಡುತ್ತಿದೆ. ಇದರಿಂದಾಗಿ ಕೆರೆಯ ನೀರು ಬಳಸಲು ಯೋಗ್ಯವಾಗದ ಸ್ಥಿತಿ ತಲುಪಿದೆ. ಇದೇ ಕೆರೆಗಳಿಗೆ ಹೇಮಾವತಿ ನೀರನ್ನು ಏತ ನೀರಾವರಿಯ ಮೂಲಕ ಹರಿಸುವ ಯೋಜನೆ ಕಾರ್ಯರೂಪದಲ್ಲಿ ಇರುವುದರಿಂದ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕು’ ಎಂದು ಬೂಕನಕೆರೆಯಲ್ಲಿ ಈಚೆಗೆ ನಡೆದ ಜನಸ್ಪಂದನ ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಗ್ರಾಮಸ್ಥರು ಮತ್ತು ಸ್ಥಳೀಯ ಸಾಮಾಜಿಕ ಹೋರಾಟಗಾರರ ಮನವಿ ಮೇರೆಗೆ ಮಾನವ ಹಕ್ಕು ಆಯೋಗ, ಕೇಂದ್ರ ಪರಿಸರ ಮಂಡಳಿಗೆ ಸೇರಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ದೂರಿದರು.

ಈ ಬಗ್ಗೆ ಕಾರ್ಖಾನೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ತ್ಯಾಜ್ಯ ನೀರನ್ನು ಸಂಸ್ಕರಿಸಿಯೇ ಹೊರಬಿಟ್ಟಿದ್ದೇವೆ. ಮುಂದೆ ಕೆರೆಗೆ ಹರಿದುಹೋಗದಂತೆ ಕ್ರಮ ವಹಿಸುತ್ತೇನೆ ಎಂದು ಹೇಳುತ್ತಾರೆ.

ಇಷ್ಟೆಲ್ಲಾ ಆದರೂ ಫುಡ್ ಪಾರ್ಕ್ ಆಹಾರ ತಯಾರಿಕಾ ಘಟಕಗಳ ಅಧಿಕಾರಿಗಳು ಮಾತ್ರ ಯಾವುದೇ ಕಾಳಜಿವಹಿಸದೇ ಇರುವುದು ರೈತರಲ್ಲಿ ಅಸಮಾಧಾನ ಮೂಡಿಸಿದ್ದು, ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಕೇಂದ್ರ ಸಚಿವ, ಜಿಲ್ಲೆಯ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ವರದಿ ಪಡೆದು ಪರಿಸರ ಸಂರಕ್ಷಣೆಯ ಜೊತೆಗೆ ರೈತರು ಮತ್ತು ಸಾರ್ವಜನಿಕರ ಹಿತರಕ್ಷಣೆ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.