ADVERTISEMENT

ಕೆ.ಆರ್.ಪೇಟೆ: ಕತ್ತಲಲ್ಲಿದ್ದ ಬಸ್ತಿ ಗೊಮ್ಮಟನಿಗೆ ಬೆಳಕು

ಕನ್ನಂಬಾಡಿ ಜಲಸಾಗರದ ಹಿನ್ನೀರಿನಲ್ಲಿರುವ ಮೂರ್ತಿ ಸ್ಥಳಾಂತರ, ₹ 6 ಕೋಟಿ ವೆಚ್ಚ

ಬಲ್ಲೇನಹಳ್ಳಿ ಮಂಜುನಾಥ
Published 3 ಸೆಪ್ಟೆಂಬರ್ 2023, 6:55 IST
Last Updated 3 ಸೆಪ್ಟೆಂಬರ್ 2023, 6:55 IST
ಕೆ.ಆರ್‌.ಪೇಟೆ ತಾಲ್ಲೂಕಿನ ಬಸ್ತಿ ಗೊಮ್ಮಟ ಕ್ಷೇತ್ರದಲ್ಲಿ ಗೊಮ್ಮಟೇಶ್ವರ ಮೂರ್ತಿ ಪ್ರತಿಷ್ಠಾಪನಾ ಕಾಮಗಾರಿ ಪ್ರಗತಿಯಲ್ಲಿರುವುದು
ಕೆ.ಆರ್‌.ಪೇಟೆ ತಾಲ್ಲೂಕಿನ ಬಸ್ತಿ ಗೊಮ್ಮಟ ಕ್ಷೇತ್ರದಲ್ಲಿ ಗೊಮ್ಮಟೇಶ್ವರ ಮೂರ್ತಿ ಪ್ರತಿಷ್ಠಾಪನಾ ಕಾಮಗಾರಿ ಪ್ರಗತಿಯಲ್ಲಿರುವುದು   

ಕೆ.ಆರ್.ಪೇಟೆ: ರಾಜ್ಯದ 4ನೇ ಪ್ರಮುಖವಾದ ಗೊಮ್ಮಟ ಮೂರ್ತಿ ಎಂಬ ಕೀರ್ತಿಗೆ ಪಾತ್ರನಾಗಿರುವ ಬಸ್ತಿಗೊಮ್ಮಟ ಕ್ಷೇತ್ರದ ಅಭಿವೃದ್ಧಿಗೆ ಕಾಲ ಕೂಡಿಬಂದಿದೆ. ತಾಲ್ಲೂಕಿನ ಬಸ್ತಿ ಹೊಸಕೋಟೆ ಸಮೀಪ, ಕೆಆರ್‌ಎಸ್‌ ಹಿನ್ನೀರಿನಲ್ಲಿ ಒಬ್ಬಂಟಿಯಾಗಿದ್ದ ‘ಬಸ್ತಿ ಗೊಮ್ಮಟ’ ಪ್ರತಿಮೆಯ ಸ್ಥಳಾಂತರ ಕಾರ್ಯ ಆರಂಭಗೊಂಡಿದ್ದು ಷ್ಟು ವರ್ಷಗಳ ಕಾಲ ಗ್ರಹಣ ಹಿಡಿದಿದ್ದ ಕನಸಿಗೆ ಕೊನೆಗೂ ಮುಕ್ತಿ ದೊರೆತಂತಾಗಿದೆ.

ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಿತವಾಗಿದ್ದ ಈ ಗೊಮ್ಮಟ ಮೂರ್ತಿ 18 ಅಡಿ ಎತ್ತರ ಹೊಂದಿದೆ. ಮೂರ್ತಿ ಇದ್ದ ಜಾಗ ಮಾಣಿಕ್ಯಪುರಿ ಎಂಬ ಹೆಸರು ಪಡೆದಿತ್ತು. ಕನ್ನಂಬಾಡಿ ಕಟ್ಟೆಯ ನಿರ್ಮಾಣವಾದ ನಂತರ ಮಾಣಿಕ್ಯಪುರಿ ಮುಳುಗಡೆಯಾಯಿತು. ಇಲ್ಲಿದ್ದ ನಿವಾಸಿಗಳು ಗೊಮ್ಮಟ ಮೂರ್ತಿ ಇರುವ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಬಸ್ತಿ ಹೊಸಕೋಟೆ, ಕುರುಬರ ಬಸ್ತಿ ಊರು ಕಟ್ಟಿಕೊಂಡರು. ಕ್ರಮೇಣ ಅಲ್ಲಿದ್ದ ವಿಗ್ರಹಗಳು ಭಗ್ನಗೊಂಡವು, ಜಿನಮಂಟಪಗಳು ಶಿಥಲಗೊಂಡವು.

ಆದರೆ ಸ್ಥಳೀಯ ಗ್ರಾಮಸ್ಥರು ಮಾತ್ರ ಶ್ರವಣಪ್ಪ ಎಂದು ಕರೆಯುವ ಮೂಲಕ ಮೂರ್ತಿಯ ಸಂರಕ್ಷಣೆ ಮಾಡಿಕೊಂಡು ಬಂದರು. ಹಿಂದೆ ಇಲ್ಲಿದ್ದ ಜೈನ ಸಮಾಜದವರು ವರ್ಷಕ್ಕೋ, ಮೂರು ವರ್ಷಕ್ಕೋ ಬಂದು ಗೊಮ್ಮಟ ಮೂರ್ತಿಗೆ ಮಹಾ ಮಸ್ತಕಾಭಿಷೇಕ ಮಾಡಿ ತೆರಳುತ್ತಿದ್ದರು. ಹಲವು ವರ್ಷಗಳಿಂದ ಬಸ್ತಿಗೊಮ್ಮಟನ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂಬ ಕೂಗ ಮಾತ್ರ ಉಳಿದಿತ್ತು.

ADVERTISEMENT

ಈಗ ಕ್ಷೇತ್ರದ ಅಭಿವೃದ್ಧಿಗೆ ಕಾಲ ಕೂಡಿ ಬಂದಿದ್ದು ₹ 6 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ದಿಪಡಿಸುವ, ಗೊಮ್ಮಟನನ್ನು ಸ್ಥಳಾಂತರಿಸಿ ಎತ್ತರವಾದ ಜ‌ಗುಲಿಯ ಮೇಲೆ ಪ್ರತಿಷ್ಠಾಪಿಸುವ ಕಾಮಗಾರಿ ಆರಂಭಗೊಂಡಿದೆ. ಅತ್ಯಂತ ಮನಮೋಹಕವಾದ ಈ ವಿಗ್ರಹವನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ. ಪ್ರಾಚೀನವಾದ ಈ ವಿಗ್ರಹವನ್ನು ವಜ್ರಲೇಪನಗೊಳಿಸುವ ಮೂಲಕ ನವೀಕರಿಸುವ ಕಾಮಗಾರಿ ನಡೆದಿದೆ.

ಮೂಲಸ್ಥಳದಿಂದ ವಿಗ್ರಹವನ್ನು ಕನ್ನಂಬಾಡಿ ಹಿನ್ನೀರಿನ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ 14 ಅಡಿ ಎತ್ತರದ ವಿಶಾಲವಾದ ಕಾಂಕ್ರೀಟ್ ಜಗುಲಿ ನಿರ್ಮಾಣ ಮಾಡಲಾಗಿದ್ದು ಪೂರ್ವಾಭಿಮುಖವಾಗಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಜಗುಲಿಯ ಮೇಲಿನಿಂದ ಕಾಣುವ ನೀಲವಾದ ಆಕಾಶದ ತೆರೆಯಲ್ಲಿ ಪ್ರಕೃತಿಯ ರಮಣೀಯ ನೋಟ ಕಣ್ಮನ ಸೆಳೆಯುತ್ತದೆ. ಜಲಸಾಗರದ ವೈಭವದೊಂದಿಗೆ ಗೊಮ್ಮಟ ಮೂರ್ತಿ ಅತೀ ಸುಂದರವಾಗಿ ಕಾಣುತ್ತಿದೆ. ಕಣ್ಣಾಯಿಸಿದಷ್ಟೂ ಜಲರಾಶಿಯ ಅಂಚಿನಲ್ಲಿ ಈ ಸ್ಥಳವಿದ್ದು ಕನ್ನಂಬಾಡಿ ಕಟ್ಟೆ ಸಂಪೂರ್ಣ ತುಂಬಿದಾಗ ಗೊಮ್ಮಟನ ಸುತ್ತಲೂ ನೀರು ಆವರಿಸುತ್ತದೆ.

ರಾಜಸ್ತಾನದದಿಂದ ಚಾತುರ್ಮಾಸ ವ್ರತಕ್ಕೆ ಬಂದಿದ್ದ ದಿಗಂಬರ ಜೈನಮುನಿಗಳಾದ ಅಮೋಘಕೀರ್ತಿ ಮಹರಾಜ, ಅಮರಕೀರ್ತಿ ಮಹರಾಜರ ಮಾರ್ಗದರ್ಶನದಲ್ಲಿ , ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಹಕಾರದೊಂದಿಗೆ ಕಾಮಗಾರಿ ಆರಂಭಗೊಂಡಿದೆ.

‘ಮುಂದಿನ ವರ್ಷದೊಳಗೆ ಜೈನಮುನಿಗಳ ಪವಿತ್ರ ಕ್ಷೇತ್ರ ಮತ್ತು ಪ್ರವಾಸಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದ್ದು ದಿಗಂಬರ ಜೈನಮುನಿಗಳು ಬಸ್ತಿ ಹೊಸಕೋಟೆಗೆ ಪಾದಸ್ಪರ್ಶ ಮಾಡಿದ ಫಲವಾಗಿ ಗೊಮ್ಮಟಕ್ಷೇತ್ರಕ್ಕೆ ಅಭಿವೃದ್ಧಿಯ ಸ್ಪರ್ಶ ಸಿಕ್ಕಿದೆ’ ಎಂದು ಜೈನ ಸಮಾಜದ ಮುಖಂಡ ಎಚ್.ಎನ್. ವಜ್ರಪ್ರಸಾದ್ ತಿಳಿಸಿದರು.

‘ನಮ್ಮೂರಿನ ಗೊಮ್ಮಟ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿಕೊಂಡೇ ಬಂದಿದ್ದೇವೆ. ಕೊನೆಗೂ ನಮ್ಮ ಮೊರೆ ಕೇಳಿಸಿ ಶ್ರೀ ಕ್ಷೇತ್ರವಾಗಿ ಪರಿವರ್ತನೆಯಾಗುತ್ತಿರುವುದು ಸಂತಸದ ವಿಚಾರ’ ಎಂದು ಗ್ರಾಮದ ಮುಖಂಡರಾದ ಬಸ್ತಿ ರಂಗಪ್ಪ ಹೇಳಿದರು.ಕಡೆಗೂ ಅಭಿವೃದ್ಧಿಯ ಕನಸು ಈಡೇರುತ್ತಿದೆ ಮೂರ್ತಿ ರಕ್ಷಣೆ ಮಾಡಿದ್ದ ಸ್ಥಳೀಯ ಗ್ರಾಮಸ್ಥರು ಜೈನ ಸಮಾಜದ ಸದಸ್ಯರಿಂದ ಮಹಾಭಿಷೇಕ

ಸುಂದರ ಪ್ರವಾಸಿ ತಾಣ ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿರುವ ಈ ಸ್ಥಳ ಕೆ.ಆರ್.ಪೇಟೆಯಿಂದ 30 ಕಿ.ಮೀ ಮೈಸೂರಿನಿಂದ 50 ಕಿ.ಮೀ ಮಂಡ್ಯದಿಂದ 50 ಕಿ.ಮೀ ಶ್ರವಣಬೆಳಗೊಳದಿಂದ 60 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮೈಸೂರು ಮತ್ತು ಮಂಡ್ಯ ಕಡೆಯಿಂದ ಬರುವವರು ಭೂ ವರಾಹನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿಯೇ ಬಂದರೆ ಈ ಸ್ಥಳ ತಲುಪಬಹುದಾಗಿದೆ. ಕಟ್ಟೇರಿ ಸರ್ಕಲ್‌ನಿಂದ ಎಡಕ್ಕೆ ತಿರುಗಿ ಬನ್ನಂಗಾಡಿ ಬಿಂಡಹಳ್ಳಿ ಮಾರ್ಗವಾಗಿ ಹೊಸ ಸಾಯಪನಹಳ್ಳಿ ಬಳಿ ಮತ್ತೆ ಎಡಕ್ಕೆ ತಿರುಗಬೇಕು. ಕಬ್ಬಲಗೆರೆ ಪುರ ಹೆರಗನಹಳ್ಳಿ ಬಸ್ತಿ ಹೊಸಕೋಟೆ ಗ್ರಾಮದ ನಂತರ ಈ ತಾಣವನ್ನು ತಲುಪಬಹುದು. ಇಲ್ಲಿಂದ ಮಾವಿನಕೆರೆ ತಲುಪಿ ರಾಜೇನಹಳ್ಳಿ ಮಾರ್ಗದಲ್ಲಿ ಗಂಜಿಗೆರೆಗೆ ತೆರಳಿ ಭೂ ವರಾಹನಾಥ ಕ್ಷೇತ್ರದ ದರ್ಶನವನ್ನೂ ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.