ಪಾಂಡವಪುರ: ತಾಲ್ಲೂಕಿನ ಕೆಆರ್‌ಎಸ್ ಹಿನ್ನೀರು ಪ್ರದೇಶದ ವೇಣುಗೋಪಾಲಸ್ವಾಮಿ ಬಳಿ ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ಹೆಲಿ ಟೂರಿಸಂ ಮತ್ತು ಜಲಸಾಹಸ ಕ್ರೀಡೆಗಳಿಗೆ ಭಾನುವಾರ ಚಾಲನೆ ನೀಡಲಾಯಿತು.
ಪ್ರವಾಸಿಗರು, ಸ್ಥಳೀಯರು ಸ್ಪೀಡ್ ಬೋಟಿಂಗ್, ಕಯಾಕಿಂಗ್, ಜೆಟ್ ಸ್ಕೀ ಜಲಸಾಹಸ ಕ್ರೀಡೆಗಳಲ್ಲಿ ಮಿಂದರೆ, ಹೆಲಿಕಾಪ್ಟರ್ ಏರಿ ಜಾಯ್ ರೈಡ್ ಮಾಡಿ ಸಂಭ್ರಮಿಸಿದರು.
ನವದೆಹಲಿಯ ಚಿಪ್ಸಾನ್ ಏವಿಯೇಷನ್ಸ್ ಸಂಸ್ಥೆಯು ಹೆಲಿಕಾಪ್ಟರ್ ಜಾಯ್ ರೈಡ್ಸ್ ಹಮ್ಮಿಕೊಂಡಿದೆ. ಬೆಂಗಳೂರಿನ ಅಮೃತೂರು ಅಕ್ವಾಟಿಕ್ಸ್ ಸಂಸ್ಥೆಯು ಸ್ಪೀಡ್ ಬೋಟಿಂಗ್, ಕಯಾಕಿಂಗ್, ಜೆಟ್ ಸ್ಕೀ ಕ್ರೀಡೆಗಳನ್ನು ಆಯೋಜಿಸಿದೆ.
ಪ್ರವಾಸಿಗರು ಜಾಕೆಟ್ ತೊಟ್ಟು ಬೋಟ್‌ನಲ್ಲಿ ಕುಳಿತರು. ಬೋಟ್ ಜಲಾಶಯದ ಹಿನ್ನೀರನ್ನು ಸೀಳುತ್ತಾ ಹೊರಟಿತು. ಒಂದಷ್ಟೂ ದೂರ ಸಾಗಿ ಮತ್ತೆ ವಾಪಸ್ ಬಂತು. ಸ್ಪೀಡ್ ಬೋಟ್‌ನಲ್ಲಿ ಕುಳಿತಿದ್ದ ಬಹುತೇಕ ಮಂದಿ, ಎಷ್ಟು ಬೇಗ ದಡ ಸೇರುತ್ತೇವೋ ಎಂದು ಜೀವವನ್ನು ಕೈಯಲ್ಲಿ ಹಿಡಿದು ಕುಳಿತಿದ್ದರು. ಮಕ್ಕಳು, ಯುವಕ, ಯುವತಿಯರು ಜಲಸಾಹಸ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಹೆಲಿಕಾಪ್ಟರ್ ಪ್ರತಿಬಾರಿ 8 ನಿಮಿಷಗಳ ಹಾರಾಟ ನಡೆಸಲಿದೆ. ಕೆಆರ್‌ಎಸ್ ಜಲಾಶಯ, ಬೃಂದಾವನ ಉದ್ಯಾನ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹಸಿರು ಪರಿಸರವನ್ನು ಸುತ್ತು ಹಾಕಿತು. ಪ್ರವಾಸಿಗರು ಆಗಸದಿಂದ ಕೆಆರ್‌ಎಸ್ ಜಲಾಶಯವನ್ನು ಕಣ್ತುಂಬಿಕೊಂಡರು. ‘ಜಲಾಶಯವನ್ನು ವೈಮಾನಿಕ ಸಮೀಕ್ಷೆ ಮಾಡಿದೆವು’ ಎಂದು ಪ್ರವಾಸಿಗರು ತಮ್ಮ ಅನಿಸಿಕೆ ಹಂಚಿಕೊಂಡರು.
ಸಮುದ್ರದ ಬೋಟಿಂಗ್‌ಗಿಂತ ಈ ಜಲಾಶಯದ ಬೋಟಿಂಗ್ ಹೆಚ್ಚು ಖುಷಿ ನೀಡುತ್ತದೆ. ಜಲಾಶಯವನ್ನೆಲ್ಲಾ ಕಣ್ತುಂಬಿ ಕೊಳ್ಳಬಹುದು. ಆದರೆ ಸಮುದ್ರದ ಬೋಟಿಂಗ್‌ನಲ್ಲಿ ಒನ್ ಸೈಡ್ ಸೀಯಿಂಗ್ ಆಗುತ್ತದೆ ಎಂದು ಕುಶಾಲನಗರದ ಸುನೀರ್ ಹಾಗೂ ರೋಷನ್ ತಮ್ಮ ಅನುಭವವನ್ನು ಹಂಚಿಕೊಂಡರು.
ಶಾಸಕ ಸಿ.ಎಸ್.ಪುಟ್ಟರಾಜು, ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜು, ಅಧಿಕಾರಿ ರಮೇಶ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಬೋಟ್‌ನಲ್ಲಿ ಕುಳಿತು ಜಲಾಶಯದಲ್ಲಿ ಒಂದು ಸುತ್ತು ಹಾಕಿದರು. ಹೆಲಿಕಾಪ್ಟರ್ ಏರಿ ಹಾರಾಡಿದರು.
ಚಿಪ್ಸಾನ್ ಏವಿಯೇಷನ್‌ನ ಮಾಲೀಕ ಸುನಿಲ್ ನಾರಾಯಣ್, ಡೈಸಿ, ಬೆಂಗಳೂರಿನ ಅಮೃತೂರು ಅಕ್ವಾಟಿಕ್ಸ್‌ನ ದರ್ಶನ್, ಮನೋಹರ ಹಾಜರಿದ್ದರು.
ದರವೆಷ್ಟು?
ಹೆಲಿಕಾಪ್ಟರ್ ಜಾಯ್ ರೈಡ್‌ಗೆ ಪ್ರತಿ ವ್ಯಕ್ತಿಗೆ ₹2,600 ದರವಿದೆ. ವಿವಿಧ ರೀತಿಯ ಜಲಸಾಹಸ ಕ್ರೀಡೆಗಳಿಗೆ ₹50, ₹100, ₹150, ₹400 ದರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.