ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ಬುಧವಾರ ಸಂಜೆ ವೇಳೆ 111.50 ಅಡಿಗೆ ತಲುಪಿದೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಿದ್ದು, 34,779 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕಳೆದ ಎರಡು ದಿನಗಳಲ್ಲಿ ಅಣೆಕಟ್ಟೆಗೆ 3.5 ಅಡಿಗಳಷ್ಟು ನೀರು ಹರಿದು ಬಂದಿದೆ. ಕುಡಿಯುವ ನೀರು ಮತ್ತು ಕೆರೆ, ಕಟ್ಟೆಗಳನ್ನು ತುಂಬಿಸಲು 2,376 ಕ್ಯುಸೆಕ್ ನೀರನ್ನು ನದಿ ಮತ್ತು ನಾಲೆಗಳಿಗೆ ಹರಿಸಲಾಗುತ್ತಿದೆ.
ಒಟ್ಟು 49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 33.258 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೂ 16.194 ಟಿಎಂಸಿ ನೀರು ಬರಬೇಕಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 89.5 ಅಡಿ ನೀರಿನ ಸಂಗ್ರಹವಿತ್ತು.
‘ಕೆಆರ್‌ಎಸ್ ಅಣೆಕಟ್ಟೆಯಲ್ಲಿ 111 ಅಡಿಗಳಿಂತಲೂ ಹೆಚ್ಚು ನೀರಿನ ಸಂಗ್ರಹವಿದ್ದು, ಮುಂಗಾರು ಹಂಗಾಮು ಬೆಳೆಗೆ ಕೃಷಿ ಇಲಾಖೆ ತಕ್ಷಣ ಭತ್ತದ ಬಿತ್ತನೆ ಬೀಜ ವಿತರಿಸಬೇಕು’ ಎಂದು ಕೃಷಿಕ ಸಮಾಜದ ಉಪಾಧ್ಯಕ್ಷ ಕಡತನಾಳು ಬಾಲಕೃಷ್ಣ ಒತ್ತಾಯಿಸಿದ್ದಾರೆ.
‘ಜಲಾಶಯದ ನೀರಿನ ಮಟ್ಟ 110 ಅಡಿ ದಾಟಿದರೆ ಬಿತ್ತನೆ ಬೀಜ ವಿತರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು, ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.