ADVERTISEMENT

ಆಧುನಿಕ ಕೃಷಿ ಪದ್ಧತಿ ಅರಿವು ಮೂಡಿಸಿದ ಮೇಳ

ಮಂಡ್ಯ ಹೊರಹೊಲಯದ ವಿ.ಸಿ. ಫಾರಂನಲ್ಲಿ ಪ್ರಾರಂಭ, ವಿವಿಧ ತಾಲ್ಲೂಕು, ಜಿಲ್ಲೆಯ ರೈತರು ಭಾಗಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 9:58 IST
Last Updated 7 ಡಿಸೆಂಬರ್ 2019, 9:58 IST
ಮಂಡ್ಯ ಹೊರಹೊಲಯದ ವಿ.ಸಿ.ಫಾರಂನಲ್ಲಿ ಶುಕ್ರವಾರ ನಡೆದ ಕೃಷಿ ಮೇಳದಲ್ಲಿ ಭತ್ತ ಕೊಯ್ಲು ಪ್ರಾತ್ಯಕ್ಷಿಕೆ ನೀಡಲಾಯಿತು
ಮಂಡ್ಯ ಹೊರಹೊಲಯದ ವಿ.ಸಿ.ಫಾರಂನಲ್ಲಿ ಶುಕ್ರವಾರ ನಡೆದ ಕೃಷಿ ಮೇಳದಲ್ಲಿ ಭತ್ತ ಕೊಯ್ಲು ಪ್ರಾತ್ಯಕ್ಷಿಕೆ ನೀಡಲಾಯಿತು   

ಮಂಡ್ಯ: ರೈತರಲ್ಲಿ ಆಧುನಿಕ ಬೇಸಾಯ ಪದ್ಧತಿಯತ್ತ ಒಲವು ಮೂಡಿಸುವ ನಿಟ್ಟಿನಲ್ಲಿ ಎರಡು ದಿನಗಳ ಕೃಷಿ ಮೇಳ ವಿ.ಸಿ.ಫಾರಂನಲ್ಲಿ ಶುಕ್ರವಾರ ಆರಂಭವಾಯಿತು.

ಸಾಂಪ್ರದಾಯಿಕ ಬೇಸಾಯ ಪದ್ಧತಿಯತ್ತಲೇ ಒಲವು ಹೊಂದಿರುವ ಜಿಲ್ಲೆಯ ಕೃಷಿಕರಲ್ಲಿ ಸುಧಾರಿತ ಬೇಸಾಯ ಪದ್ಧತಿಯತ್ತ ಆಸಕ್ತಿ ಹೊರಳಿಸುವುದು, ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವುದು, ಕೃಷಿ ವೆಚ್ಚ ತಗ್ಗಿಸುವ ಕುರಿತು ಮಾರ್ಗೋಪಾಯ ತಿಳಿಸುವುದು ಮತ್ತು ಯಾಂತ್ರೀಕೃತ ಬೇಸಾಯ ಪದ್ಧತಿಯ ಲಾಭಾಂಶಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮೇಳದಲ್ಲಿ ಆಯಿತು.

ಪ್ರಗತಿಪರ ರೈತರೊಂದಿಗೆ ಸಂವಾದ, ವಸ್ತು ಪ್ರದರ್ಶನ ಮೇಳದ ಆಕರ್ಷಣೆಗಳಾಗಿದ್ದವು. ನಗರ, ಜಿಲ್ಲೆಯ ವಿವಿಧ ತಾಲ್ಲೂಕು, ಹೊರ ಜಿಲ್ಲೆಗಳ ಸಾವಿರಾರು ರೈತರು, ಶಾಲಾ ಮಕ್ಕಳು,ಕಾಲೇಜು ವಿದ್ಯಾರ್ಥಿಗಳು ಕೃಷಿ ಮೇಳದಲ್ಲಿ ಪಾಲ್ಗೊಂಡು ತಂತ್ರಜ್ಞಾನಗಳನ್ನು ಕಂಡು ಆಶ್ಚರ್ಯಚಕಿತರಾದರು.

ADVERTISEMENT

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ, ಸುಧಾರಿತ ಬಿತ್ತನೆ ಬೀಜಗಳ ಬಳಕೆ, ಕೃಷಿ ವಿಜ್ಞಾನಿಗಳಿಂದ ಕಾಲ ಕಾಲಕ್ಕೆ ತಕ್ಕ ಮಾರ್ಗೋಪಾಯಗಳನ್ನು ಪಡೆಯುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು.

ವಿವಿಧ ತಳಿಗಳ ವಿಶೇಷತೆ, ಇಳುವರಿ ಮಾಹಿತಿಯನ್ನು ಒಳಗೊಂಡ ಫಲಕಗಳು ಪ್ರಾತ್ಯಕ್ಷಿಕೆ ಮುಂದಿದ್ದವು. ಅಲ್ಲಿನ ವಿದ್ಯಾರ್ಥಿಗಳೂ ಬೆಳೆಗಳ ಬಗ್ಗೆ ವಿವರಿಸಿದರು. ಕಬ್ಬು, ಭತ್ತ, ಸೊಪ್ಪು ನಾಟಿ, ಭತ್ತ ಕೊಯ್ಲು, ಹುಲ್ಲು ಕಟ್ಟುವುದು, ಕಬ್ಬಿನ ತರಗು ತುಂಡರಿಸುವ ಯಂತ್ರೋಪಕರಣಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದವು.

ಕಬ್ಬಿನ ಮಧ್ಯೆ ಕಡಿಮೆ ಅವಧಿಯ ಅಂತರ ಬೆಳೆಗಳ ಪ್ರಾತ್ಯಕ್ಷಿಕೆ ಬೆಳೆಗಾರರಿಗೆ ಹೊಸ ಆಲೋಚನೆಯನ್ನು ಮೂಡಿಸಿತು. ಮಳೆಯಾಶ್ರಿತ, ನೀರಾವರಿ ಪ್ರದೇಶಗಳಿಗೆ ಸೂಕ್ತವಾದ ಬೆಳೆಗಳ ಮಾಹಿತಿ ನೀಡಲಾಯಿತು.

ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳು, ಸಲಕರಣೆಗಳು ಮೇಳದಲ್ಲಿ ಗಮನ ಸೆಳೆದವು. ಕೆಲಸವನ್ನು ಸುಲಭವಾಗಿಸುವ ಕಾರ್ಮಿಕರ ಕೊರತೆ ನೀಗಿಸುವ ಸಲಕರಣೆಗಳ ಬಗ್ಗೆ ಬಂದಿದ್ದ ರೈತರು ಆಕರ್ಷಿತರಾದರೂ ಬೆಲೆ ಹೆಚ್ಚಿದ್ದ ಕಾರಣ ನೋಡಿಯಷ್ಟೇ ತೃಪ್ತಿ ಪಟ್ಟುಕೊಂಡರು. ಸ್ಪಿಂಕ್ಲರ್‌ ಪೈಪ್‌ ಮಳಿಗೆಗಳಿದ್ದವು. ತರಕಾರಿ, ಹಣ್ಣು ಬೀಜಗಳ ಖರೀದಿಗೆ ಜನರು ಮುಗಿಬಿದ್ದರು. ಗಿಡಗಳ ಬೆಲೆ ಕೇಳಿ ಕೆಲವರು ಅಲ್ಲೇ ಬಿಟ್ಟು ಹೋದರು.

ಅರಣ್ಯ ಇಲಾಖೆಯಲ್ಲಿನ ಮಳಿಗೆಯಲ್ಲಿ ಕೇವಲ ಗಿಡಗಳನ್ನು ಇಡಲಾಗಿತ್ತು. ಕೋಳಿ ಸಾಕಣೆ ಜೊತೆಗೆ ಮೀನು ಸಾಕಣೆಯ ಸಮಗ್ರ ಮಾಹಿತಿ ನೀಡಲಾಗುತ್ತಿತ್ತು.

ಕೃಷಿ ಮೇಳ ಮತ್ತು ಪ್ರಾತ್ಯಕ್ಷಿಕೆಗಳನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ‘ರೈತರು ಉತ್ತಮ ಬದುಕು ಕಟ್ಟಿಕೊಳ್ಳಲು, ಹೊಸ ಹೈಬ್ರಿಡ್‌ ಉತ್ಪನ್ನಗಳನ್ನು ಬೆಳೆಯಲು ಅನುಕೂಲವಾಗುವಂತೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಕಡಿಮೆ ಭೂಮಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು. ನಗರ ಪ್ರದೇಶದ ವಾಸಿಗಳೂ ತಾರಸಿ ಮೇಲೆ ಸಾವಯವ ತರಕಾರಿ, ಹಣ್ಣು ಬೆಳೆಯಬಹುದು’ ಎಂದು ತಿಳಿಸಿದರು.

‌ಜಿ.ಪಂ ಸಿಇಒ ಕೆ.ಯಾಲಕ್ಕಿಗೌಡ, ಬೆಂಗಳೂರು ಕೃಷಿ ವಿ.ವಿ ಸಂಶೋಧನಾ ನಿರ್ದೇಶಕ ಡಾ.ವೈ.ಜಿ.ಷಡಕ್ಷರಿ, ವಿಸ್ತರಣಾ ನಿರ್ದೇಶಕ ಡಾ.ಎನ್‌.ಎಸ್‌.ಶಿವಲಿಂಗೇಗೌಡ, ವಿ.ಸಿ.ಫಾರಂ ಡೀನ್‌ ಡಾ.ವೆಂಕಟೇಶ್‌, ಸಹ ಸಂಶೋಧನಾ ನಿರ್ದೇಶಕ ಡಾ.ಎಸ್‌.ಎನ್‌.ವಾಸುದೇವನ್‌, ಸಹ ವಿಸ್ತರಣಾ ಅಧಿಕಾರಿ ಡಾ.ಡಿ.ರಘುಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.