ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳುವಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಲೋಕಾರ್ಪಣೆಯಾಗಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ಪ್ರತಿನಿತ್ಯ ಪ್ರಯಾಣಿಸುವ ಜನ ಮತ್ತು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಕಿಹೆಬ್ಬಾಳು ಮೂಲಕವೇ ಭೇರ್ಯ, ಕೆ.ಆರ್. ನಗರ, ಹೊಳೆನರಸೀಪುರ, ಹಾಸನ, ಕೆ.ಆರ್.ಪೇಟೆ, ಮಿರ್ಲೆ , ರಾಮನಾಥಪುರ ಪಟ್ಟಣಗಳಿಗೆ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಬಸ್ ನಿಲ್ದಾಣವಿಲ್ಲದೇ ರಸ್ತೆ ಬದಿಯಲ್ಲೇ ನಿಂತು ಬಸ್‌ಗಾಗಿ ಕಾಯಬೇಕಿತ್ತು. ಇದನ್ನು ಮನಗಂಡು ಗ್ರಾಮಸ್ಥರ ಬೇಡಿಕೆಯಂತೆ ಕಳೆದ ಸರ್ಕಾರದ ಅವಧಿಯಲ್ಲಿ ಬಸ್ ನಿಲ್ದಾಣ ಮಂಜೂರಾಗಿ ಆಗ ಸಚಿವರಾಗಿದ್ದ ನಾರಾಯಣಗೌಡ ಶಂಕುಸ್ಥಾಪನೆ ನೆರವೇರಿಸಿದ್ದರು.
ಕಾಮಗಾರಿ ಮುಗಿದು ಐದಾರು ತಿಂಗಳಾದರೂ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡುವ ಪ್ರಯತ್ನವನ್ನು ಸಾರಿಗೆ ಇಲಾಖೆ ಮಾಡಿದಂತಿಲ್ಲ. ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರವಾಗಿರುವುದಲ್ಲದೆ, ಇಲ್ಲಿ ಹಲವು ಪ್ರಸಿದ್ಧ ದೇವಾಲಯಗಳಿವೆ. ಹೀಗಾಗಿ ಪ್ರತಿನಿತ್ಯ ದೇವರ ದರ್ಶನ, ವ್ಯಾಪಾರ, ವ್ಯವಹಾರಗಳಿಗೆ ಜನರು ಇಲ್ಲಿಗೆ ಬರುತ್ತಾರೆ.
ಅಲ್ಲದೇ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪರ ಊರಿಗೆ ಪ್ರಯಾಣ ಮಾಡುತ್ತಾರೆ. ಆದರೆ ಅವರು ಬಸ್ಸಿಗೆ ಕಾಯಲು, ಹತ್ತಲು ಇಳಿಯಲು ಸರಿಯಾದ ಸ್ಥಳ ಅವಕಾಶವಿಲ್ಲದೇ ಪರದಾಡುವಂತಾಗಿದೆ. ಆದ್ದರಿಂದ ಶಾಸಕರು ಗಮನಹರಿಸಿ ಬಸ್ ನಿಲ್ದಾಣದ ಲೋಕಾರ್ಪಣೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ನಮ್ಮ ಊರಿಗೆ ಬಸ್ ನಿಲ್ದಾಣವಾಗಬೇಕು ಎಂಬುದು ದಶಕದ ಬೇಡಿಕೆ. ಈಗ ಅದು ಈಡೇರಿದ್ದರೂ ಲೋಕಾರ್ಪಣೆಯಾಗಿಲ್ಲ. ಕೆಎಸ್ಆರ್‌ಟಿಸಿ ಅಧಿಕಾರಿಗಳು ಮತ್ತು ಶಾಸಕರು ಬಸ್ ನಿಲ್ದಾಣ ಉದ್ಘಾಟನೆಗೆ ಗಮನಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅಕ್ಕಿಹೆಬ್ಬಾಳಿನ ಮುಖಂಡ ರಘು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಅಜರುದ್ದೀನ್ ಆಗ್ರಹಿಸಿದ್ದಾರೆ.
ಕಾಮಗಾರಿ ಮುಗಿದು 6 ತಿಂಗಳಾದರೂ ಉದ್ಘಾಟನೆಯಾಗಿಲ್ಲ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಪ್ರಯಾಣಿಕರ ಸಂಚಾರ ಅಕ್ಕಿಹೆಬ್ಬಾಳು ಪ್ರಸಿದ್ಧ ಧಾರ್ಮಿಕ ತಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.