ADVERTISEMENT

ತೂತು ಬಿದ್ದ ಮಡಕೆಯಂತಾದ ಕೆರೆ ಕೋಡಿ

ಸದಾ ತುಂಬಿ ತುಳುಕುತ್ತಿದ್ದ ಕೆರೆಗಳು ಬರಿದು; ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ

ಅಂಬರಹಳ್ಳಿ ಸ್ವಾಮಿ
Published 14 ನವೆಂಬರ್ 2021, 16:33 IST
Last Updated 14 ನವೆಂಬರ್ 2021, 16:33 IST
ದೊಡ್ಡರಸಿನಕೆರೆ ಬಳಿ ಇರುವ ಸೂಳೆಕೆರೆಯ ಕೋಡಿಯ ಸ್ಥಿತಿ (ಸಂಗ್ರಹ ಚಿತ್ರ)
ದೊಡ್ಡರಸಿನಕೆರೆ ಬಳಿ ಇರುವ ಸೂಳೆಕೆರೆಯ ಕೋಡಿಯ ಸ್ಥಿತಿ (ಸಂಗ್ರಹ ಚಿತ್ರ)   

ಭಾರತೀನಗರ: ‘ಕೆರೆಯ ಏರಿಯ ಮೇಲೆ ನಡೆದಾಡಲೂ ಆಗದು. ಇನ್ನು ಕೋಡಿಯ ಮಾತೆಲ್ಲಿ. ಬೇಸಿಗೆ ಬಂದಾಗ ಕೆರೆಯ ನೀರಿನ ಬಗ್ಗೆ ಯೋಚಿಸುವ ರೈತರು ಮಳೆಗಾಲದಲ್ಲಿ ಕೆರೆಯ ನೀರನ್ನು ಉಳಿಸಿಕೊಳ್ಳುವ ಯೋಚನೆ ಮಾಡುತ್ತಿಲ್ಲ. ಇದೆಲ್ಲ ಮಳೆ ನಿಂತ ಮೇಲೆ ಕೊಡೆ ಹಿಡಿದಂತೆ...’

ಕೆರೆಗಳ ಕುರಿತು ಯುವ ರೈತ ಮಣಿಗೆರೆ ಪ್ರಕಾಶ್‌ ಅವರ ನೋವಿನ ಮಾತುಗಳಿವು.

ಚಿಕ್ಕರಸಿನಕೆರೆ ಹೋಬಳಿಯ ಬಹುತೇಕ ಕೆರೆಗಳ ವಾಸ್ತವವೂ ಇದೇ ರೀತಿ ಇದೆ. ಎತ್ತಿನ ಬಂಡಿ ಸೇರಿದಂತೆ ಬಹುತೇಕ ವಾಹನಗಳು ಚಲಿ ಸಬಹುದಾಗಿದ್ದ ಕೆರೆಯ ಏರಿಗಳಿಂದು ತಿರುಗಾಡಲು ಸಂಕಷ್ಟಪಡುವಂಥ ಸ್ಥಿತಿಗೆ ತಲುಪಿವೆ. ಗಿಡ ಗಂಟಿಗಳು ಬೆಳೆದು ನಿಂತಿದ್ದು, ಹಳ್ಳ, ಗುಂಡಿಗಳು ಬಿದ್ದು ರಸ್ತೆಯೇ ಕಾಣದಂತಾಗಿವೆ.

ADVERTISEMENT

ಕೆರೆ ತೂಬುಗಳ ಪರಿಸ್ಥಿತಿ ತೂತು ಬಿದ್ದ ಮಡಕೆಯಂತಾಗಿದೆ. ಮಳೆಗಾಲದಲ್ಲಿ ಎಷ್ಟೇ ನೀರು ತುಂಬಿದ್ದರೂ ಅತ್ಯಲ್ಪ ಕಾಲದಲ್ಲೇ ಬರಿದಾಗುತ್ತದೆ. ಬೇಸಿಗೆಯ ಆರಂಭದಲ್ಲೇ ವ್ಯವಸಾಯಕ್ಕಾಗಲಿ, ಜನ, ಜಾನುವಾರುಗಳ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಪರಿಸ್ಥಿತಿ ಬಹುತೇಕ ಎಲ್ಲ ಗ್ರಾಮಗಳಲ್ಲೂ ಇದೆ.

ಹೋಬಳಿಯ ಪ್ರಮುಖ ಕೆರೆ ಎನಿಸಿರುವ ಸೂಳೆಕೆರೆಯ ಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ಈ ಕೆರೆಯೂ ಸಪರ್ಪಕ ನಿರ್ವಹಣೆಯ ಕೊರತೆಯಿಂದ ಅಳಿವಿನಂಚಿಗೆ ಸಾಗುತ್ತಿದೆ. ಕೆರೆ ಏರಿಯ ಮೇಲೆಲ್ಲ ಗಿಡಗಂಟಿಗಳು ಬೆಳೆದಿವೆ. ಗುಂಡಿಗಳು ಬಿದ್ದು ಏರಿಯ ಭದ್ರತೆ ಕ್ಷೀಣವಾಗುತ್ತಿದೆ.

ತೂಬಿನ ನಿರ್ವಹಣೆಯೂ ಇಲ್ಲವಾಗಿದೆ. ಕೋಡಿ ಕೊರಕಲು ಬಿದ್ದು ನೀರು ಹೆಬ್ಬಾಳದಲ್ಲಿ ಹರಿದು ಶಿಂಷಾ ನದಿ ಸೇರುತ್ತಿದೆ. ಹಲವು ವರ್ಷಗಳ ಕಾಲ ಮಳೆಯಾಗದಿದ್ದರೂ ಸೂಳೆಕೆರೆ ಬರಿದಾಗುತ್ತಿರಲಿಲ್ಲ. ಆದರೆ ಈಗ ಅಲ್ಪಾವಧಿಯಲ್ಲೇ ಬರಿದಾಗಿ ಕೆರೆಯನ್ನೇ ನಂಬಿದ್ದ ರೈತರು ಸಂಕಷ್ಟ ಪಡುವಂತಾಗಿದೆ. ಕೆರೆಯಲ್ಲಿ ನೀರು ನಿಂತು ಬೆಳೆ ಹಾಳಾಗುವ ಕಾರಣ ನೀಡಿ ಕೆರೆಯ ಹಿನ್ನೀರಿನಲ್ಲಿ ಬರುವ ರೈತರು ಕೋಡಿಯನ್ನೇ ಸ್ವಲ್ಪಮಟ್ಟಿಗೆ ಒಡೆದಿರುವ ಪ್ರಸಂಗಗಳೂ ನಡೆದಿವೆ. ಅಧಿಕಾರಿಗಳು ಇವೆಲ್ಲವನ್ನು ಕಂಡಿದ್ದರೂ ನಿರ್ಲಕ್ಷಿಸುತ್ತಿದ್ದಾರೆ.

ಕಾಡುಕೊತ್ತನಹಳ್ಳಿ, ಸಬ್ಬನಹಳ್ಳಿ, ಯಲಾದಹಳ್ಳಿ, ಮುಟ್ಟನಹಳ್ಳಿ, ದೊಡ್ಡರಸಿನಕೆರೆ, ಚಿಕ್ಕರಸಿನಕೆರೆ ಕೆರೆಗಳು ವ್ಯವಸಾಯ ಸೇರಿದಂತೆ ಜನ ಜಾನುವಾರುಗಳ ನೀರಿನ ಮೂಲಗಳಾಗಿದ್ದವು. ಅವು ಕೂಡ ಹಲವು ಕಾರಣಗಳಿಂದ ಕಿರಿದಾಗುತ್ತಿವೆ. ಜತಗೆ ಬರಿದಾಗುತ್ತಿದೆ.

25 ಎಕರೆ ವ್ಯಾಪ್ತಿಯಲ್ಲಿದ್ದ ಮೆಣಸಗೆರೆ ಕೆರೆಯೇ ಕಣ್ಮರೆಯಾಗಿದೆ. ಎಸ್‌.ಐ.ಹೊನ್ನಲಗೆರೆ, ಎಸ್‌.ಐ.ಹಾಗಲ ಹಳ್ಳಿ, ಹೊನ್ನಾ ಯಕನಹಳ್ಳಿ, ತೊರೆಬೊಮ್ಮನಹಳ್ಳಿ, ಮಡೇನಹಳ್ಳಿ ಕೆರೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಬಹುತೇಕ ಕೆರೆಗಳಿಗೆ ವಿ.ಸಿ.ನಾಲೆ, ಹೆಬ್ಬಾಳ ಪಿಕಪ್, ಸೂಳೆಕೆರೆಯ ಮೂಲಕ ನೀರು ತುಂಬಿಸಲಾಗುತ್ತದೆ. ಬೇಸಿಗೆ ಬಂತೆಂದರೆ ಕನ್ನಂಬಾಡಿ ಕಟ್ಟೆಯ ನೀರು ಬಿಡುವಂತೆ ಗೋಗರೆಯಬೇಕಾದ ಪರಿಸ್ಥಿತಿ ಈ ಭಾಗದಲ್ಲಿ ಇದೆ. ತಿಟ್ಟಮೇಲನಹಳ್ಳಿ, ಕೂಳಗೆರೆ ಹಾಗೂ ಚಿಕ್ಕರಸಿನಕೆರೆ ಗ್ರಾಮಗಳಲ್ಲಿ ಏತ ನೀರಾವರಿ ಮೂಲಕ
ಹಲವು ಗ್ರಾಮಗಳ ಕೆರೆಗೆ ನೀರು ತುಂಬಿಸುವ ಕಾಮಗಾರಿಗಳೂ ಭರದಿಂದ ಸಾಗಿವೆ.

ವ್ಯರ್ಥವಾಗುತ್ತಿರುವ ಕೆರೆ ನೀರು: ಹಳ್ಳಿಗಳ ನೀರಿನ ಮೂಲವಾಗಿದ್ದ ಕೆರೆಗಳು ಹಲವು ಕಾರಣಗಳಿಂದಾಗಿ ಕಣ್ಮರೆಯಾಗುತ್ತಿವೆ. ಎರಡು ವರ್ಷ ಮಳೆಯಾಗದಿದ್ದರೂ ಹಳ್ಳಿಗಳ ಕೆರೆಗಳಲ್ಲಿ ನೀರಿರುತ್ತಿತ್ತು. ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎಂಬುದೇ ಇರಲಿಲ್ಲ. ಆದರೆ ಈಗ ಬೇಸಿಗೆ ಕಾಲದಲ್ಲಿ ನೀರಿಗಾಗಿ ಮನೆಗೆ ಬರುವ ನಲ್ಲಿಯ ನೀರನ್ನೇ ಅವಲಂಬಿಸಬೇಕಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಣ್ಣುಡಿಯಂತಾಗುತ್ತಿದೆ. ಮಳೆಗಾಲದಲ್ಲಿ ಕೆರೆಯ ನೀರು ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಎಂ.ಆರ್‌.ಮಧುಸೂದನ, ಮೆಣಸಗೆರೆ

ಅಧಿಕಾರಿಗಳ ನಿರ್ಲಕ್ಷ್ಯ

ಬೇಸಿಗೆ ಬಂತೆಂದರೆ ಕೆರೆ ನೀರಿನ ಧ್ಯಾನ. ಮಳೆಗಾಲದಲ್ಲಿ ಕೆರೆ ನೀರಿನ ನಿರ್ಲಕ್ಷ್ಯ. ಇದು ನಮ್ಮ ಅಧಿಕಾರಿಗಳು ಕೆರೆ ಅಭಿವೃದ್ಧಿ ಮಾಡುವ ವಿಧಾನ. ಕೆರೆಗಳು ಎಂಜಿನಿಯರುಗಳಿಗೆ ದುಡ್ಡು ಮಾಡುವ ಮೂಲಗಳಾಗಿ ಮಾರ್ಪಾಡಾಗಿವೆ

ಮಣಿಗೆರೆ ಪ್ರಕಾಶ್‌, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.