ಮಂಡ್ಯ: ಅರಣ್ಯ ಪ್ರದೇಶದ ಒತ್ತುವರಿ, ಕಲ್ಲು ಗಣಿಗಾರಿಕೆ, ಕಲ್ಲು ಸ್ಫೋಟ ಮುಂತಾದ ಚಟುವಟಿಕೆ ಗಳಿಗೆ ಬೆದರಿರುವ ಚಿರತೆಗಳು ನಾಡಿನತ್ತ ಬರುತ್ತಿವೆ. ಕಳೆದ ವರ್ಷ ವರ್ಷ ಗಳಿಂದೀಚೆಗೆ ಜನವಸತಿ ಪ್ರದೇಶದಲ್ಲೇ ಚಿರತೆಗಳು ಕಾಣಿಸಿ ಕೊಳ್ಳುತ್ತಿದ್ದು, ಜನ, ಜಾನುವಾರುಗಳಿಗೆ ಪ್ರಾಣಸಂಕಟ ಎದುರಾಗಿದೆ.
ಮೊದಲೆಲ್ಲಾ ಕಾಡಂಚಿನ ಗ್ರಾಮಗಳಲ್ಲಿ ಚಿರತೆಗಳ ದರ್ಶನ ವಾಗುತ್ತಿತ್ತು. ಆದರೆ, ಈಚೆಗೆ ಎಲ್ಲೆಡೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಒಂದು ವರ್ಷದಿಂದೀಚೆಗೆ 100ಕ್ಕೂ ಹೆಚ್ಚು ಕಡೆ ಚಿರತೆಗಳು ಕಾಣಿಸಿಕೊಂಡಿವೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಕೆಲವೆಡೆ ಮಾತ್ರ ಬೋನು ಇರಿಸಿ ಚಿರತೆ ಸೆರೆ ಹಿಡಿದಿದ್ದಾರೆ. ಬಹುತೇಕ ಕಡೆಗಳಲ್ಲಿ ಚಿರತೆ ಸೆರೆಹಿಡಿಯುವಲ್ಲಿ ಇಲಾಖೆ ವಿಫಲವಾಗಿದ್ದು, ಜನರು ಭಯದಿಂದಲೇ ಬದುಕುವಂತಾಗಿದೆ.
ಡಿ.19ರಂದು ತಾಲ್ಲೂಕಿನ ಲೋಕಸರ ಗ್ರಾಮದಲ್ಲಿ ನಾಯಿ ತಿನ್ನಲು ಬಂದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿತ್ತು. ಕಳೆದ ಹಲವು ತಿಂಗಳುಗಳಿಂದ ಚಿರತೆ ಹಾವಳಿಯಿಂದ ಗ್ರಾಮಸ್ಥರು ನಲುಗಿ ಹೋಗಿದ್ದರು. ಜನರು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಅರಣ್ಯ ಇಲಾಖೆ ಸ್ಪಂದಿಸಿರಲಿಲ್ಲ. ಕಡೆಗೂ ಜನರ ಒತ್ತಡಕ್ಕೆ ಮಣಿದ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಚಿರತೆ ಸೆರೆಯಾದ ನಂತರ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಹೈರಾಣಾಗಿದ್ದಾರೆ. ವರ್ಷದಿಂದೀಚೆಗೆ ಚಿರತೆ ದಾಳಿಯಿಂದ 15 ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಮಳವಳ್ಳಿ ತಾಲ್ಲೂಕಿನಲ್ಲಿ ಮೊದಲಿನಿಂದಲೂ ಚಿರತೆ ಹಾವಳಿ ಹೆಚ್ಚಾಗಿದೆ. ರೈತರು ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದ್ದು, ದಡಮಳ್ಳಿ, ಅಂತರವಳ್ಳಿ, ಗಾಣಾಳು, ಬಸವನಬೆಟ್ಟ, ಧನಗೂರು, ಬಾಳೆಹೊನ್ನಿಗ, ಕುಂದೂರು, ಜವನಗಹಳ್ಳಿ ಗುಡ್ಡ, ಸೊಪ್ಪಿನ ಗುಡ್ಡ, ನೆಟ್ಕಲ್, ಶಿಂಷಾ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಸಂತತಿ ಹೆಚ್ಚಾಗಿದೆ.
ಕಳೆದ ಏಳೆಂಟು ತಿಂಗಳ ಹಿಂದೆ ತಾಲ್ಲೂಕಿನ ಉತ್ತೂರು, ದಾಸನದೊಡ್ಡಿ ಗ್ರಾಮಗಳಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಕೂಡ ನಡೆದಿದೆ. ಜನರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ತಾಲ್ಲೂಕಿನ ಸುಣ್ಣದದೊಡ್ಡಿ, ಬಾಳೆಹೊನ್ನಿಗ, ಹಂಗ್ರಾಪುರ ಗ್ರಾಮಗಳಲ್ಲಿ ಮೂರು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ.
ನಾಗಮಂಗಲ ತಾಲ್ಲೂಕಿನ ಕಸಬಾ, ಬಿಂಡಿನವಿಲೆ, ದೇವಲಾಪುರ, ಹೊಣಕೆರೆ ಸೇರಿದಂತೆ ಬೆಳ್ಳೂರು ಹೋಬಳಿಗಳ ಭಾಗಗಳಲ್ಲಿ ಚಿರತೆ ಹಾವಳಿ ಇದೆ. ಅಲ್ಲದೇ ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದಿಂದ ವಿವಿಧ ಭಾಗಗಳಲ್ಲಿ ಮೂರು ಚಿರತೆ ಸೆರೆ ಹಿಡಿಯಲಾಗಿದೆ. ತಾಲ್ಲೂಕಿನಲ್ಲಿ ಒಂದು ವರ್ಷದಿಂದ ಇಬ್ಬರ ಮೇಲೆ ಚಿರತೆ ದಾಳಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ 30 ಜಾನುವಾರುಗಳು ಚಿರತೆ ದಾಳಿಗೆ ಸಾವನ್ನಪ್ಪಿವೆ.
ಕೆ.ಆರ್.ಪೇಟೆ ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಇದೆ. ಹೇಮಗಿರಿ, ರಾಯಸಮುದ್ರದ ನಾರಾಯಣ ದುರ್ಗ, ಗಜರಾಜಗಿರಿ, ಕುಂದೂರು ಬೆಟ್ಟ, ಬಿಲ್ಲೇನಹಳ್ಳಿ, ಗವಿರಂಗನಾಥಸ್ವಾಮಿ ಬೆಟ್ಟ ಮತ್ತು ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ತೀವ್ರಗೊಂಡಿದೆ. ಕನ್ನಂಬಾಡಿ ಕಟ್ಟೆ ಹಿನ್ನೀರಿನ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಕಿಕ್ಕೇರಿ ಹೋಬಳಿ ವ್ಯಾಪ್ತಿಯ ಚಿಕ್ಕಳಲೆ, ಹಿರಿಕಳಲೆ, ರಾಮನಹಳ್ಳಿಯಲ್ಲಿ ಚಿರತೆ ಹಾವಳಿ ವಿಪರೀತವಾಗಿದೆ. ಚಿಕ್ಕಳಲೆ ಕೆರೆ ಸಮೀಪದಲ್ಲಿ ಚಿರತೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ.
ಮದ್ದೂರು ತಾಲ್ಲೂಕಿನ ಕುಂದನಕುಪ್ಪೆ, ದುಂಡನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಕಳೆದ 5 ತಿಂಗಳ ಹಿಂದೆ ಕುಂದನಕುಪ್ಪೆ ಗ್ರಾಮದ ಬಳಿ ಜಮೀನಿಗೆ ತೆರಳುತ್ತಿದ್ದ ಗ್ರಾಮಸ್ಥರೊಬ್ಬರ ಮೇಲೆ ಮರದ ಮೇಲಿದ್ದ ಚಿರತೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು.
ಛತ್ರದ ಹೊಸಹಳ್ಳಿ ಬಳಿ ಕರು, ಮೇಕೆಗಳನ್ನು ಕೊಂದಿತ್ತು. ಆನಂತರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿತ್ತು. ಮಾರಸಿಂಗನಹಳ್ಳಿ, ನಿಲುವಾಗಿಲು, ಮುದಿಗೆರೆ ಭಾಗಗಳಲ್ಲಿ ಚಿರತೆ ಹಾವಳಿ ಇದ್ದು, ಮಾರಸಿಂಗನಹಳ್ಳಿ ಬಳಿ ಇಟ್ಟಿದ್ದ ಬೋನಿಗೆ ಎರಡು ಹೆಣ್ಣು ಚಿರತೆಗಳು ಸೆರೆ ಸಿಕ್ಕಿದ್ದವು.
ಪಾಂಡವಪುರ ತಾಲ್ಲೂಕಿನಾದ್ಯಂತ ಚಿರತೆ ಹಾವಳಿ ಹೆಚ್ಚಾಗಿವೆ. ಬೇಬಿಬೆಟ್ಟದ ಸುತ್ತಮುತ್ತ ಕಲ್ಲು ಗಣಿಗಾರಿಕೆ
ಹೆಚ್ಚಾಗಿದ್ದು, ಅಲ್ಲಿಯ ಚಿರತೆಗಳು ನಾಡಿನತ್ತ ಬರುತ್ತಿವೆ. ಬೇಬಿ
ಗ್ರಾಮ ರಾಗಿಮುದ್ದನಹಳ್ಳಿ ಬನ್ನಂಗಾಡಿ ಕೆಆರ್‌ಎಸ್ ಹಿನ್ನೀರಿನ ಅಂತನಹಳ್ಳಿ
ಹಾಗೂ ಕನಗಮರಡಿ, ವದೇಸಮುದ್ರ ಚಿಕ್ಕ ಕೊಪ್ಪಲು, ಚಿಕ್ಕಮರಳಿ ಬೆಟ್ಟ, ಕುಂತಿಬೆಟ್ಟದಲ್ಲಿ ಚಿರತೆ ಹಾವಳಿ ಇದೆ. 2022ರ ಜನವರಿಯಿಂದ ಇಲ್ಲಿಯವರೆಗೆ 2 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. 100 ಕುರಿ, ಹಸು, ನಾಯಿಗಳು ಬಲಿಯಾಗಿವೆ.
ಕೆಆರ್‌ಎಸ್: ಚಿರತೆ ಸಿಗಲೇ ಇಲ್ಲ
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ವರ್ಷದಿಂದೀಚೆಗೆ ಚಿರತೆಗಳ ಹಾವಳಿ ತೀವ್ರಗೊಂಡಿದೆ. ಕೆಆರ್‌ಎಸ್ ಬೃಂದಾವನದಲ್ಲಿ ಆಗಾಗ ಚಿರತೆ ಕಾಣಿಸಿಕೊಂಡ ಕಾರಣ ನ.3ರಿಂದ 26 ದಿನಗಳ ಕಾಲ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕಡೆಗೂ ಆ ಚಿರತೆಯನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ. ಬೃಂದಾವನದಲ್ಲಿ ಚಿರತೆ ಇಲ್ಲ ಎಂದು ಅಧಿಕಾರಿಗಳು ನಿರ್ಣಯಿಸಿದ ಕಾರಣ ಬೃಂದಾವನ ತೆರೆಯಲಾಯಿತು.
ಈಚೆಗೆ ತಾಲ್ಲೂಕಿನ ಗರಕಹಳ್ಳಿಯೊಳಗೆ ನುಗ್ಗಿದ್ದ ಚಿರತೆ ಹಸು ಕರುವನ್ನು ಎಳೆದೊಯ್ದಿತ್ತು. ಚಂದಗಿರಿಕೊಪ್ಪಲು ಬಳಿ ರೈಲ್ವೆ ಹಳಿಗಳ ಪಕ್ಕದಲ್ಲಿ ಡಿಸೆಂಬರ್ ಮೊದಲ ವಾರ ಚಿರತೆ ಓಡಾಡಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ತಿಂಗಳ ಆರಂಭದಲ್ಲಿ ಹುಂಜನಕೆರೆಯಿಂದ ಅರಕೆರೆ ಗ್ರಾಮಕ್ಕೆ ತೆರಳುವ ಮಾರ್ಗ ಹಾಗೂ ಅಲ್ಲಾಪಟ್ಟಣಯಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು.
ಬಾರದ ಪರಿಹಾರ; ಬೋನುಗಳ ಕೊರತೆ
ವರ್ಷದಿಂದ ಚಿರತೆ ಹಾವಳಿಗೆ 200ಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿದ್ದು, ಬಹುತೇಕ ಪ್ರಕರಣಗಳಿಗೆ ಇಲ್ಲಿಯವರೆಗೂ ಪರಿಹಾರ ಬಂದಿಲ್ಲ. ಪರಿಹಾರ ಕೊಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಪರಿಹಾರ ಸಂಬಂಧ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಳಿ ಅತ್ಯಾಧುನಿಕ ಉಪಕರಣ, ಬೋನುಗಳ ಕೊರತೆ ಇದೆ. ಜಿಲ್ಲೆಯಲ್ಲಿ 30 ಬೋನುಗಳಿದ್ದು, ತಾಲ್ಲೂಕುಗಳಿಂದ ಬರುವ ದೂರುಗಳನ್ನು ಸಮರ್ಪಕವಾಗಿ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಮುತ್ತತ್ತಿ ಪ್ರದೇಶದಲ್ಲಿ ಆತಂಕ
ಹಲಗೂರು ಅರಣ್ಯ ವ್ಯಾಪ್ತಿ, ಕಾವೇರಿ ವನ್ಯಜೀವಿ ವಲಯ, ಮುತ್ತತ್ತಿ, ಬಸವನ ಬೆಟ್ಟ, ಭೀಮನಕಂಡಿ ಅರಣ್ಯ ವ್ಯಾಪ್ತಿಯ ಗ್ರಾಮದಲ್ಲಿರುವ ಬೆಟ್ಟಗುಡ್ಡಗಳಲ್ಲಿ ಚಿರತೆಗಳು ವಾಸಿಸುತ್ತಿವೆ. ಕಬ್ಬಿನ ಗದ್ದೆ ಮತ್ತು ನೀಲಗಿರಿ ತೋಟದಲ್ಲಿ ಸೇರಿಕೊಳ್ಳುವ ಚೆರತೆಗಳು ಹೊಲ, ಗದ್ದೆಗಳಿಗೆ ತೆರಳುವ ರೈತರು ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ.
ಅಂತರವಳ್ಳಿ, ಹುಚ್ಚೇಗೌಡನದೊಡ್ಡಿ, ಹುಸ್ಕೂರು, ಬೆಳತೂರು, ಯತ್ತಂಬಾಡಿ, ಬೆನಮನಹಳ್ಳಿ, ಕೊನ್ನಾಪುರ, ದಳವಾಯಿ ಕೋಡಿಹಳ್ಳಿ, ದೇವಿರಹಳ್ಳಿ, ಕೆಂಪಯ್ಯನದೊಡ್ಡಿ, ಗುಂಡಾಪುರ, ಬ್ಯಾಡರಹಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುರಿ, ಮೇಕೆ, ಹಸು, ಎಮ್ಮೆಗಳ ಮೇಲೆ ದಾಳಿ ಮಾಡುತ್ತಿವೆ.
ಹುಸ್ಕೂರು ಗ್ರಾಮದಲ್ಲಿ ಕಬ್ಬು ಕಡಿಯುತ್ತಿದ್ದಾಗ ಶಂಕರ್ ಎಂಬ ಕೂಲಿಕಾರನ ಮೇಲೆ ದಾಳಿ ಮಾಡಿದ್ದ ಚಿರತೆ ಮೂಗು, ಕಿವಿಯನ್ನು ಗಾಯಗೊಳಿಸಿತ್ತು.
ರೈತರಿಗೆ ಸಂಕಷ್ಟ
ಜನವಸತಿ ಪ್ರದೇಶಗಳಲ್ಲಿ ಚಿರತೆಗಳು ದಾಳಿ ಹೆಚ್ಚಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ತೋಟಗಳಿಗೆ ರಾತ್ರಿ ಸಮಯ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಮೇಕೆ, ಹಸುಗಳು ಚಿರತೆಗಳ ಪಾಲಾಗುತ್ತಿದ್ದು, ರೈತರಿಗೆ ನಷ್ಟವಾಗುತ್ತಿದೆ.
–ಕೆ.ಜಿ.ಸಿದ್ದಲಿಂಗಮೂರ್ತಿ, ಕೊನ್ನಾಪುರ
ವಾಯುವಿಹಾರಕ್ಕೆ ಹೋಗಲು ಭಯ
ಹಲಗೂರು ಸುತ್ತಲಿನ ಕಾಡಂಚಿನ ಹಳ್ಳಿಗಳಲ್ಲಿ ಮಕ್ಕಳು, ಮಹಿಳೆಯರು ಓಡಾಡುವುದಕ್ಕೆ ಭಯಪಡುತ್ತಾರೆ. ನಾಲ್ಕು ದಿನಗಳ ಹಿಂದೆ ಹಲಗೂರಿನ ಬೈಪಾಸ್ ರಸ್ತೆಯಲ್ಲಿ ಸಾರ್ವಜನಿಕರು ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದಾಗ ಚಿರತೆ ಕಾಣಿಸಿಕೊಂಡಿದೆ. ವಾಯು ವಿಹಾರಕ್ಕೆ ಹೋಗುವುದಕ್ಕೆ ಭಯಪಡುವಂತಾಗಿದೆ.
–ಶೋಭಾ, ಹಲಗೂರು
ಚಿರತೆ ಭೀತಿಯಲ್ಲೇ ಬದುಕು
ಚಿರತೆ ಹಾವಳಿ ರೈತರನ್ನು ಕಂಗೆಡಿಸಿದೆ. ರೈತರು ಹೊಲ ಗದ್ದೆಗೆ ತೆರಳಲು ದಿಗಿಲು ಪಡುವಂತಾಗಿದೆ. ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದುಹಾಕುತ್ತಿವೆ.
–ಅಣ್ಣೇಗೌಡ, ಕಿಕ್ಕೇರಿ
***
ಜಿಲ್ಲೆಯ ಯಾವುದೇ ಮೂಲೆ ಯಲ್ಲಿ ಚಿರತೆ ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಬಹುತೇಕ ಚಿರತೆಗಳನ್ನು ಹಿಡಿದು ಕಾಡಿಗೆ ಬಿಡಲಾಗಿದೆ.
–ರುದ್ರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.