ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಹಾಗೂ ಸ್ಥಳ ವಿವಾದ ಕಗ್ಗಂಟಾಗಿದ್ದು, ಪರಿಷತ್ತಿನ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯೇ ಕಾರಣ' ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಆರೋಪಿಸಿದರು.
‘ಸಮ್ಮೇಳನವನ್ನು ಜಿಲ್ಲಾಡಳಿತ, ಸರ್ಕಾರ ಹಾಗೂ ಪರಿಷತ್ತು ಒಟ್ಟಾಗಿ ನಡೆ ಸುತ್ತಿದ್ದರೂ, ಮಹೇಶ ಜೋಶಿಯವರು ಜಿಲ್ಲಾಡಳಿತದೊಂದಿಗೆ ಚರ್ಚಿಸದೇ ಹೇಳಿಕೆ ನೀಡುವುದು ಎಷ್ಟು ಸರಿ? ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಜೋಶಿಯವರು ಅಧ್ಯಕ್ಷರ ಆಯ್ಕೆಯ ಗೋಪ್ಯತೆ ಕಾಪಾಡದೇ ವಿವಾದಕ್ಕೆ ಎಡೆ ಮಾಡಿದ್ದಾರೆ. ಅಧ್ಯಕ್ಷರು ವೈಯಕ್ತಿಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ತೀರ್ಮಾನಗಳೆಲ್ಲವೂ ಉಸ್ತುವಾರಿ ಸಚಿವರ ಮೂಲಕವೇ ಆಗಬೇಕು’ ಎಂದು ಆಗ್ರಹಿಸಿದರು.
‘ಸಮ್ಮೇಳನ ಆಯೋಜನೆಗೆ ಸಂಬಂಧಿಸಿ ಜಿಲ್ಲೆಯ ಸಾಹಿತಿಗಳು, ಕಲಾವಿದರು, ಸಂಘಟಕರು ಕರ್ನಾಟಕ ಸಂಘದಲ್ಲಿ ಸಭೆ ನಡೆಸಿ ಕೈಗೊಂಡ ನಿರ್ಣಯಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದು, ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ನೀಡುವ ₹25 ಕೋಟಿಯನ್ನು ದುಂದು ವೆಚ್ಚ ಮಾಡದೆ ಉಳಿಸಬೇಕು. ಅದರಲ್ಲಿ ಸುವರ್ಣ ಕರ್ನಾಟಕ ಸಾಹಿತ್ಯ ಭವನವನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
‘ಸಮ್ಮೇಳನಕ್ಕೆ ಮುನ್ನವೇ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಮತ್ತು ಅಂಬೇಡ್ಕರ್ ಭವನವನ್ನು ಸುಸಜ್ಜಿತಗೊಳಿಸಬೇಕು. ನಾಲ್ವಡಿ ಪ್ರತಿಮೆ ನಿರ್ಮಾಣವನ್ನು ಪೂರ್ಣಗೊಳಿಸಬೇಕು. ಪೂರ್ಣಕುಂಭ ಸ್ವಾಗತ ಮೆರವಣಿಗೆಯಲ್ಲಿ ಪುರುಷರೂ ಇರಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ಮಂಡ್ಯ ನಗರದ ರಸ್ತೆಗಳನ್ನು ಅಭಿ ವೃದ್ಧಿಪಡಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಿದ್ದೇವೆ’ ಎಂದು ತಿಳಿಸಿದರು.
‘ಡಿ.10ರೊಳಗೆ ರಂಗಮಂದಿರವನ್ನು ಸಿದ್ಧಗೊಳಿಸಿ, ಆತಗೂರು ಶಾಸನವನ್ನು ಸ್ಥಾಪಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು. ನಿವೃತ್ತ ಪ್ರಾಂಶುಪಾಲ ಶಂಕರೇಗೌಡ, ಕರ್ನಾಟಕ ಸಂಘದ ನಿರ್ದೇಶಕ ನಾಗಪ್ಪ, ರಾಜಶೇಖರ್, ಸುರೇಶ್ ಇದ್ದರು.
ಮಂಡ್ಯ ನಗರದ ಒಳಗೇ ಸಾಹಿತ್ಯ ಸಮ್ಮೇಳನ ನಡೆಯಬೇಕೆಂಬ ಬಹುಜನರ ಅಭಿಪ್ರಾಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.ಪ್ರೊ.ಬಿ.ಜಯಪ್ರಕಾಶಗೌಡ, ಕರ್ನಾಟಕ ಸಂಘದ ಅಧ್ಯಕ್ಷ
ತಾಂತ್ರಿಕ ವರದಿ ಅನುಸಾರವಾಗಿ, ಹೆದ್ದಾರಿಗೆ ಹೊಂದಿಕೊಂಡಂತಿರುವ ಮಂಡ್ಯ ಹೊರವಲಯದ ಪ್ರದೇಶದಲ್ಲೇ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.ಎನ್.ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.