ಶ್ರೀರಂಗಪಟ್ಟಣ: ಹತ್ತು ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮೂವರಿಗೆ ಕಾರಾಗೃಹ ಶಿಕ್ಷೆ ವಿಧಿಸಿ ಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.
ತಾಲ್ಲೂಕಿನ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಂಕನಹಳ್ಳಿ ಗ್ರಾಮದ ಸೋಮಶೇಖರ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ಹಾಗೂ ಶಿವರಾಜು ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಲಾಗಿದೆ. ಇತರ ಆರೋಪಿಗಳಾದ ಜವರಯ್ಯ, ಅವಿನಾಶ್ ಮತ್ತು ಪ್ರಮೋದ್ ಎಂಬುವರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ಆದೇಶ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ಆರೋಪಿಗಳು 2014ರ ಜ.1ರಂದು ಅದೇ ಗ್ರಾಮದ ಅಂಕಪ್ಪ ಎಂಬವರ ಮಗ ಶ್ರೀಧರ್ ಅಲಿಯಾಸ್ ಕೆಂಚಪ್ಪ ಎಂಬಾತನಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಚಿಕ್ಕ ಅಂಕನಹಳ್ಳಿ ಗ್ರಾಮದ ಅಂಬೇಡ್ಕರ್ ಭವನದ ಬಳಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ವಿಷಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶ್ರೀಧರ್ ಅವರ ಕೊಲೆಯಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಮಂದಿ ಆರೋಪಿಗಳ ವಿರುದ್ಧ ಅಂದಿನ ಸಿಪಿಐ ಸಿ.ಟಿ. ಜಯಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಪ್ರಫುಲ್ಲ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.