ADVERTISEMENT

ಮಂಡ್ಯ: ನವಸಾಕ್ಷರರಾದ 126 ಜೈಲುಹಕ್ಕಿಗಳು

ಮಂಡ್ಯ ಜಿಲ್ಲಾ ಕಾರಾಗೃಹ: ಕೈದಿಗಳ ಬಾಳಿಗೆ ಬೆಳಕಾದ ‘ಅಕ್ಷರಾಭ್ಯಾಸ’

ಸಿದ್ದು ಆರ್.ಜಿ.ಹಳ್ಳಿ
Published 19 ಜೂನ್ 2024, 5:33 IST
Last Updated 19 ಜೂನ್ 2024, 5:33 IST
ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿರುವ ದೃಶ್ಯ  –ಪ್ರಜಾವಾಣಿ ಚಿತ್ರ 
ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿರುವ ದೃಶ್ಯ  –ಪ್ರಜಾವಾಣಿ ಚಿತ್ರ    

ಮಂಡ್ಯ: ಕತ್ತಲ ಕೋಣೆಯಲ್ಲಿ ದಿನದೂಡುತ್ತಿದ್ದ ಜೈಲುಹಕ್ಕಿಗಳಿಗೆ ‘ಅಕ್ಷರಾಭ್ಯಾಸ’ ಮಾಡಿಸುವ ಮೂಲಕ ಅವರ ಬಾಳಲ್ಲಿ ಬೆಳಕು ತರುವ ಪ್ರಯತ್ನವನ್ನು ಮಾಡಿದ್ದಾರೆ ಜಿಲ್ಲಾ ಕಾರಾಗೃಹದ ಅಧಿಕಾರಿಗಳು. 

ಕಳೆದ ಮೂರು ವರ್ಷಗಳಲ್ಲಿ ಓದು–ಬರಹ ಗೊತ್ತಿಲ್ಲದ 126 ಅನಕ್ಷರಸ್ಥ ವಿಚಾರಣಾಧೀನ ಕೈದಿಗಳಿಗೆ ಸಾಕ್ಷರತೆಯ ಪಾಠ ಮಾಡಿ ‘ನವಸಾಕ್ಷರ’ರನ್ನಾಗಿ ಮಾಡಲಾಗಿದೆ. 

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದಲ್ಲಿ 2020–21ರಿಂದ ‘ಕಲಿಕೆಯಿಂದ ಬದಲಾವಣೆ’ ಎಂಬ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. 

ADVERTISEMENT

2020–21ರಲ್ಲಿ 33 ಕೈದಿಗಳು, 2021–22ರಲ್ಲಿ 49 ಮಂದಿ, 2022–23ರಲ್ಲಿ 44 ಬಂಧಿಗಳು ಅಕ್ಷರಾಭ್ಯಾಸ ಮಾಡಿ, ಪರೀಕ್ಷೆಯಲ್ಲಿ ತೇರ್ಗಡೆಯಾಗಿ ‘ನವಸಾಕ್ಷರರ ಪ್ರಶಸ್ತಿ ಪತ್ರ’ವನ್ನು ಪಡೆದಿದ್ದಾರೆ. 

ಪರೀಕ್ಷೆಗೆ ಅಣಿಯಾದ 45 ಕೈದಿಗಳು:

‘ಈ ಬಾರಿ 37 ಪುರುಷರು ಮತ್ತು 8 ಮಹಿಳೆಯರು ಸೇರಿದಂತೆ ಒಟ್ಟು 45 ಕೈದಿಗಳು ಜೂನ್‌ 23ರಂದು ನಡೆಯುವ ಪರೀಕ್ಷೆ ಎದುರಿಸಲು ಅಣಿಯಾಗಿದ್ದಾರೆ. ನಿತ್ಯ ಬೆಳಿಗ್ಗೆ 9.30ರಿಂದ 11.30ರವರೆಗೆ 2 ಗಂಟೆ ಪಾಠ ಮಾಡಿದ್ದೇವೆ. ‘ಬಾಳಿಗೆ ಬೆಳಕು’ ಪುಸ್ತಕದ ಮೂಲಕ ಓದು, ಬರಹ ಮತ್ತು ಲೆಕ್ಕಾಚಾರವನ್ನು ಕಲಿಸಿದ್ದೇವೆ. ‘ಸವಿ ಬರಹ’ ಅಭ್ಯಾಸ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದೇವೆ’ ಎಂದು ಶಿಕ್ಷಕ ಶಿವಲಿಂಗಯ್ಯ ಮಾಹಿತಿ ನೀಡಿದರು. 

‘ನಾನು ತಿರುಪತಿಯವನು. ನನಗೆ ಕನ್ನಡ ಭಾಷೆ ಬರುತ್ತಿರಲಿಲ್ಲ. ಕಾರಾಗೃಹಕ್ಕೆ ಬಂದ ನಂತರ ಸರಾಗವಾಗಿ ಕನ್ನಡದಲ್ಲಿ ಮಾತನಾಡುವುದನ್ನು ಕಲಿತಿದ್ದೇನೆ. ಅಷ್ಟೇ ಅಲ್ಲ, ಓದು–ಬರಹವನ್ನೂ ಕಲಿತಿದ್ದೇನೆ. ಸಹಿ ಹಾಕಲು ಬಾರದ ನಾನು ಈಗ ಅಕ್ಷರಸ್ಥನಾಗಿದ್ದೇನೆ’ ಎಂದು ಕೈದಿಯೊಬ್ಬರು ಸಂತಸ ಹಂಚಿಕೊಂಡರು. 

ಕವನ, ಪ್ರಬಂಧ ರಚನೆ:

‘ಸರ್ವಜ್ಞನ ತ್ರಿಪದಿ ಮತ್ತು ಬಸವಣ್ಣನ ವಚನಗಳ ಬಗ್ಗೆ ಬೋಧಿಸುತ್ತೇವೆ. ಯೋಗಾಭ್ಯಾಸ, ಧ್ಯಾನ ಮುಂತಾದ ಚಟುವಟಿಕೆಗಳು ಕೈದಿಗಳನ್ನು ಮಾನಸಿಕ ಖಿನ್ನತೆಯಿಂದ ಹೊರತರುತ್ತಿವೆ. ಇಲ್ಲಿ ಅಕ್ಷರ ಕಲಿತ ಕೆಲವರು ಕವನ, ಪ್ರಬಂಧ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ಕೆಲವರು ಮನೆಗೆ ಪತ್ರ ಬರೆದು ಸಂಭ್ರಮಿಸುತ್ತಾರೆ. ವಿಶೇಷವೆಂದರೆ, ತಮಿಳು, ಹಿಂದಿ, ಉರ್ದು ಭಾಷಿಕರು ಕೂಡ ಸವಿಗನ್ನಡ ಕಲಿಯುತ್ತಿದ್ದಾರೆ’ ಎಂದು ಕಾರಾಗೃಹದ ಸಿಬ್ಬಂದಿ ತಿಳಿಸಿದರು. 

‘ಕಲಿಕೆಯಿಂದ ಬದಲಾವಣೆ’ ಕಾರ್ಯಕ್ರಮದಡಿ ಪ್ರಸ್ತುತ 45 ಕೈದಿಗಳಿಗೆ ಅಕ್ಷರ ಕಲಿಸುತ್ತಿದ್ದು ಇವರಿಗಾಗಿಯೇ ಪ್ರತ್ಯೇಕ ಕೊಠಡಿ ಮತ್ತು ಗ್ರಂಥಾಲಯ ವ್ಯವಸ್ಥೆ ಮಾಡಿದ್ದೇವೆ

– ಟಿ.ಕೆ. ಲೋಕೇಶ್‌ ಅಧೀಕ್ಷಕ ಮಂಡ್ಯ ಜಿಲ್ಲಾ ಕಾರಾಗೃಹ

18 ಸಾವಿರ ಪುಸ್ತಕಗಳ ಗ್ರಂಥಾಲಯ

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಓದಿಗಾಗಿ 18 ಸಾವಿರ ಪುಸ್ತಕಗಳ ಬೃಹತ್‌ ಗ್ರಂಥಾಲಯ ತೆರೆಯಲಾಗಿದೆ. ಇಲ್ಲಿ ಕವನ ಕತೆ ಕಾದಂಬರಿ ಆತ್ಮಕಥನ ಕಾನೂನು ಪುಸ್ತಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳಿದ್ದು ಜೈಲುಹಕ್ಕಿಗಳ ಓದಿನ ಹಸಿವನ್ನು ತಣಿಸುತ್ತಿವೆ.  ನಿತ್ಯ 13 ದಿನಪತ್ರಿಕೆಗಳು 5 ವಾರಪತ್ರಿಕೆಗಳು ಹಾಗೂ ಮಾಸಪತ್ರಿಕೆ ಗ್ರಂಥಾಲಯಕ್ಕೆ ಬರುತ್ತವೆ. ಗ್ರಂಥಾಲಯದಲ್ಲಿ ಟೇಬಲ್‌ ಕುರ್ಚಿ ಫ್ಯಾನ್‌ ಮತ್ತು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ‘ನವಸಾಕ್ಷರ ಪ್ರಮಾಣ ಪತ್ರ’ ಪಡೆದವರು ನೇರವಾಗಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್‌ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.