ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಅಲ್ಲಾಪಟ್ಟಣ, ಮರಳಗಾಲ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಲೀಥಿಯಂ ಕುರಿತ ಸಂಶೋಧನೆ ಪ್ರಾಥಮಿಕ ಹಂತದಲ್ಲಿದೆ ಎಂದು ಅಣು ಖನಿಜ ನಿಕ್ಷೇಪ ಪತ್ತೆ ಹಾಗೂ ಸಂಶೋಧನಾ ನಿರ್ದೇಶನಾಲಯದ (ಎಎಂಡಿ) ಭೂ ವಿಜ್ಞಾನಿಗಳು ತಿಳಿಸಿದರು.
ಲೋಕಸಭೆಯಲ್ಲಿ ಈಚೆಗೆ ದಾವಣಗೆರೆ ಸಂಸದ ಜಿ.ಎಸ್.ಸಿದ್ದೇಶ್ವರ ಕೇಳಿದ ಪ್ರಶ್ನೆಗೆ, ಮಂಡ್ಯ ಜಿಲ್ಲೆಯಲ್ಲಿ 1,600 ಮೆಟ್ರಿಕ್ ಟನ್ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವ ಜಿತೇಂದ್ರಸಿಂಗ್ ಲಿಖಿತ ಉತ್ತರ ನೀಡಿದ್ದರು. ನಂತರ ಅಲ್ಲಾಪಟ್ಟಣ, ಮರಳಗಾಲದಲ್ಲಿ ನಡೆಯುತ್ತಿರುವ ಸಂಶೋಧನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿಗಳು ಹರಿದಾಡುತ್ತಿವೆ.
ಅಲ್ಲಾಪಟ್ಟಣ ಗ್ರಾಮದ ಹೊರವಲಯದ ಗೋಮಾಳದಲ್ಲಿ ನಡೆಯುತ್ತಿರುವ ಸಂಶೋಧನಾ ಸ್ಥಳಕ್ಕೆ ಪ್ರಜಾವಾಣಿ ವರದಿಗಾರ ಭೇಟಿ ನೀಡಿದ್ದ ಸಂದರ್ಭದಲ್ಲಿ, ತಮ್ಮ ಹೆಸರು ಬರೆಯಬಾರದೆಂಬ ಷರತ್ತಿನೊಂದಿಗೆ ಲೀಥಿಯಂ ಸಂಶೋಧನೆಯ ಹಲವು ವಿಚಾರಗಳನ್ನು ಭೂವಿಜ್ಞಾನಿಗಳು ಹಂಚಿಕೊಂಡರು.
ಕರಿಘಟ್ಟದ ಆಸುಪಾಸಿನ ಗುಡ್ಡಗಳಲ್ಲಿ ಅಪರೂಪದ ಖನಿಜಗಳು ಪತ್ತೆಯಾಗಿದ್ದು ಅದರಲ್ಲಿ ಲೀಥಿಯಂ ಸಾಂದ್ರತೆ ಹೆಚ್ಚಾಗಿದೆ. ನಿಕ್ಷೇಪ ಹರಡಿರುವ ವಿಸ್ತೀರ್ಣ, ಲೀಥಿಯಂ ಪ್ರಮಾಣ ಹಾಗೂ ಖನಿಜ ಹೊರತೆಗೆಯುವುದು ಆರ್ಥಿಕವಾಗಿ ಕಾರ್ಯಸಾಧುವೇ ಎಂಬ ಬಗ್ಗೆ ಶೀಘ್ರದಲ್ಲೇ ಪ್ರಧಾನಿ ಕಚೇರಿ ಅಡಿ ಬರುವ ಅಣು ಇಂಧನ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
‘ವಿದ್ಯುತ್‌ಚಾಲಿತ ಕಾರುಗಳ ಬ್ಯಾಟರಿ, ಮೊಬೈಲ್ ಬ್ಯಾಟರಿಗಳಲ್ಲಿ ಲೀಥಿಯಂ ಬಳಕೆ ಹೆಚ್ಚುತ್ತಿದೆ. ಅದಕ್ಕೆ, ಹೆಚ್ಚುಕಾಲ ವಿದ್ಯುತ್ ಹಿಡಿದಿಡುವ ಶಕ್ತಿ ಇದೆ. ಅಲ್ಲಾಪಟ್ಟಣ–ಮರಳಗಾಲ ಗ್ರಾಮಗಳ ಗುಡ್ಡಗಳಲ್ಲಿ ಹೊಂಡ ತೋಡಿ ಖನಿಜ ಪರಿಶೀಲಿಸಲಾಗುತ್ತಿದೆ. ಪ್ರಾಥಮಿಕ ಹಂತದ ಸಂಶೋಧನೆ ನಡೆಯುತ್ತಿದ್ದು ಇನ್ನೂ ಹಲವು ಹಂತಗಳಿವೆ. ಅಂತಿಮ ನಿರ್ಧಾರಕ್ಕೆ ಬರಲು ನಾಲ್ಕೈದು ವರ್ಷಗಳಾದರೂ ಬೇಕು’ ಎಂದು ಭೂವಿಜ್ಞಾನಿಯೊಬ್ಬರು ತಿಳಿಸಿದರು.
1979ರಲ್ಲೇ ಖನಿಜ ಪತ್ತೆ: ಅಲ್ಲಾಪಟ್ಟಣ ಹೊರವಲಯದ ಗೋಮಾಳದಲ್ಲಿ 1979ರಲ್ಲೇ ಅಪರೂಪದ ಖನಿಜಗಳು ಪತ್ತೆಯಾಗಿವೆ. 2013ರಿಂದ ಎಎಂಡಿ ಭೂವಿಜ್ಞಾನಿಗಳು ಅಣು ವಿದ್ಯುತ್ ಉತ್ಪಾದನೆಯಲ್ಲಿ ಬಳಸುವ ಕೊಲಂಬೈಟ್ ಟ್ಯಾಂಟಲೈಟ್, ನಿಯೋಮಿಯಂ ಟ್ಯಾಂಟಲಮ್, ಪೆಗ್ಮಟೈಟ್ ಖನಿಜಗಳನ್ನು ಹೊರತೆಗೆಯುತ್ತಿದ್ದಾರೆ.
ಮಣ್ಣು ಹೊರತೆಗೆದು ಅದನ್ನು ಮೂರು ಹಂತದಲ್ಲಿ ಸಂಸ್ಕರಿಸಿ, ಖನಿಜಾಂಶವನ್ನು ಸಂಗ್ರಹಿಸಲಾಗುತ್ತಿದೆ. ಚಿನ್ನದಷ್ಟು ಭಾರವಾದ ಹಾಗೂ ಗಡುಸಾದ ಖನಿಜಗಳು ಈ ಪ್ರದೇಶದಲ್ಲಿ ಪತ್ತೆಯಾಗಿದ್ದು ಅದನ್ನು ದೇಶದ ವಿವಿಧೆಡೆ ಇರುವ ಅಣು ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಬೆಂಗಳೂರಿನ ಎಎಂಡಿ ಪ್ರಾದೇಶಿಕ ನಿರ್ದೇಶಕರ ಕಚೇರಿ ಸಿಬ್ಬಂದಿ ಈ ಘಟಕವನ್ನು ನಿರ್ವಹಿಸುತ್ತಿದ್ದಾರೆ. ವಿಜ್ಞಾನಿಗಳಿಗೆ ಇಲ್ಲಿಯೇ ಮನೆ ನಿರ್ಮಿಸಿಕೊಡಲಾಗಿದೆ. 30 ಮಂದಿ ಸ್ಥಳೀಯರಿಗೆ ಈ ಘಟಕದಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ನೀಡಲಾಗಿದೆ.
‘ನಾವು ಇಲ್ಲಿಯವರೆಗೂ ಲೀಥಿಯಂ ತೆಗೆದಿಲ್ಲ. ಅಣು ವಿದ್ಯುತ್‌ಗೆ ಬೇಕಾದ ಖನಿಜವನ್ನಷ್ಟೇ ಹೊರತೆಗೆಯುತ್ತಿದ್ದೇವೆ. ಕೆಲವರು ಇದನ್ನೇ ಲೀಥಿಯಂ ಎಂದು ತಪ್ಪು ತಿಳಿದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ’ ಎಂದು ವಿಜ್ಞಾನಿಗಳು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.