ADVERTISEMENT

ಕುಮಾರಸ್ವಾಮಿ ಸ್ಪರ್ಧೆಗೆ ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರದಿಂದ ಒತ್ತಾಯ: ನಿಖಿಲ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 13:07 IST
Last Updated 6 ಮಾರ್ಚ್ 2024, 13:07 IST
<div class="paragraphs"><p>ಎಚ್‌.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ</p></div>

ಎಚ್‌.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ

   

ಕೋಲಾರ: ‘ಮಂಡ್ಯ, ಕೋಲಾರ, ಹಾಸನ, ತುಮಕೂರು ಸೇರಿದಂತೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅತಿ ಹೆಚ್ಚು ಮತ ಪಡೆದಿದೆ. ಹೀಗಾಗಿ, ಪಕ್ಷದ ವರಿಷ್ಠರು ಈ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಮೈತ್ರಿಕೂಟದಲ್ಲಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಅವರ ಸ್ಪರ್ಧೆಗೆ ಮಂಡ್ಯ, ತುಮಕೂರು ಹಾಗೂ ಚಿಕ್ಕಬಳ್ಳಾಪುರದಿಂದ ಒತ್ತಾಯ ಕೇಳಿ ಬರುತ್ತಿದೆ. ಕಾರ್ಯಕರ್ತರು ಪ್ರೀತಿಯಿಂದ ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವುದು ಸತ್ಯ. ಆದರೆ, ರಾಜ್ಯ ಬಿಟ್ಟು ದೆಹಲಿಗೆ ಹೋಗಬೇಕೇ ಎಂಬ ವಿಚಾರವಾಗಿ ಅವರು ಯೋಚಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರ ಸಲಹೆ, ನಿರ್ದೇಶನ ಹಾಗೂ ಪಕ್ಷದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಜೆಡಿಎಸ್‌ ಚಿಹ್ನೆಯಡಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಸ್ಪರ್ಧಿಸಲಿದ್ದಾರೆ. ಹಾಗೆಯೇ ಬಿಜೆಪಿ ಚಿಹ್ನೆಯಡಿ ಅವರ ಪಕ್ಷದ ಅಭ್ಯರ್ಥಿಗಳೇ ಸ್ಪರ್ಧೆ ಮಾಡಲಿದ್ದಾರೆ. ಇದರಲ್ಲಿ ಗೊಂದಲ ಬೇಡ’ ಎಂದು ಹೇಳಿದರು.

ಮಂಡ್ಯದಲ್ಲಿ ಜೆಡಿಎಸ್‌ ನಡೆಸುತ್ತಿರುವ ಸತತ ಸಭೆಗಳ ಕುರಿತು, ‘ರಾಜ್ಯದಲ್ಲಿ 28 ಕ್ಷೇತ್ರಗಳಿದ್ದು, ಮಾಧ್ಯಮದವರು ಬರೀ ಮಂಡ್ಯದ ಬಗ್ಗೆ ಕೇಳುತ್ತಾರೆ. ಆ ಕ್ಷೇತ್ರದಲ್ಲಿನ ಮುಖಂಡರ ಜೊತೆ ಸತತ ಚರ್ಚೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಸ್ಪರ್ಧೆಗೆ ಅರ್ಹರಾಗಿರುವ ಸ್ಥಳೀಯ ಅನೇಕ ನಾಯಕರು ಇದ್ದಾರೆ. ಹಿರಿಯರಿಗೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ತಿಳಿಸಿದರು.

‘ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಿಚಾರವಾಗಿ ಡಾ.ಎಚ್‌.ಎನ್‌.ರವೀಂದ್ರ ಮಾಡಿರುವುದು ಬರೀ ಆರೋಪ ಅಲ್ಲ; ಅದರಲ್ಲಿ ಸತ್ಯಾಂಶ ಇದೆ’ ಎಂದರು.

‘ನಾನು ಪಕ್ಷದ ಬೆಳವಣಿಗೆ ಹಾಗೂ ಸಂಘಟನೆಯಲ್ಲಿ ತೊಡಗಿರುವುದರಿಂದ ಈ ಬಾರಿ ಸ್ಪರ್ಧಿಸುವುದಿಲ್ಲ. ನನಗಿನ್ನೂ ವಯಸ್ಸಿದೆ, ಪಕ್ಷ ಕಟ್ಟಬೇಕಿದೆ. ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡುವ ಹುಮ್ಮಸ್ಸು ಇದೆ’ ಎಂದು ನುಡಿದರು.

‘ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದರು ಇದ್ದಾರೆ. ಹೀಗಾಗಿ, ಅಧಿಕೃತ ಪಟ್ಟಿ ಬಿಡುಗಡೆ ಆಗುವವರೆಗೆ ಕಾಯಬೇಕು. ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಹಾಗೂ ನಾನು ದೆಹಲಿಗೆ ತೆರಳಲಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಲಿದ್ದೇವೆ. ಮುಂದೆ ಜೆಡಿಎಸ್‌ ಹಾಗೂ ಬಿಜೆಪಿಯ ಜಂಟಿ ಸಭೆಗಳು ನಡೆಯಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.