ADVERTISEMENT

ಎಚ್‌ಡಿಕೆ‌– ಸುಮಲತಾ ನಡುವೆ ಶೀತಲ ಸಮರ: ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡದ ಸಂಸದೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 5:28 IST
Last Updated 29 ಏಪ್ರಿಲ್ 2024, 5:28 IST
<div class="paragraphs"><p>ಎಚ್‌ಡಿಕೆ‌– ಸುಮಲತಾ</p></div>

ಎಚ್‌ಡಿಕೆ‌– ಸುಮಲತಾ

   

ಮಂಡ್ಯ: ಲೋಕಸಭಾ ಚುನಾವಣೆ ನಂತರ ಸಂಸದೆ ಸುಮಲತಾ ಹಾಗೂ ಜೆಡಿಎಸ್‌ ಮುಖಂಡರ ನಡುವೆ ಮಾತಿನ ಸಮರ ಆರಂಭವಾಗಿದೆ. ಇದು ತಾರಕ್ಕೇರುವ ಲಕ್ಷಣಗಳು ಗೋಚರಿಸುತ್ತಿದ್ದು ಜಿಲ್ಲೆಯಲ್ಲಿ ಹಲವು ರೀತಿಯ ಚರ್ಚೆ ಹುಟ್ಟು ಹಾಕಿವೆ.

ಬೂದಿ ಮುಚ್ಚಿದ ಕೆಂಡದಂತಿದ್ದ ಸುಮಲತಾ ಹಾಗೂ ಕುಮಾರಸ್ವಾಮಿ ನಡುವಿನ ಕೋಪ ಈಗ ಶೀತಲ ಸಮರದ ರೂಪ ಪಡೆದಿದೆ. ಸಂಸದೆ ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದು ಮೈತ್ರಿಯ ಭಾಗವಾಗಿದ್ದಾರೆ. ಆದರೆ, ಕುಮಾರಸ್ವಾಮಿ ಪರವಾಗಿ ಒಂದು ದಿನವೂ ಪ್ರಚಾರಕ್ಕೆ ಬಾರದ ಅವರು ಜೆಡಿಎಸ್‌ ಮೇಲಿನ ಅಸಮಾಧಾನವನ್ನು ಮನದೊಳಗೆ ಇಟ್ಟುಕೊಂಡೇ ಇದ್ದಾರೆ ಎಂಬ ಮಾತುಗಳಿವೆ.

ADVERTISEMENT

ಮತದಾನ ಮಾಡಿದ ನಂತರ ಸುಮಲತಾ ಅವರು ಜೆಡಿಎಸ್‌ ಮೇಲಿರುವ ಅಸಮಾಧಾನವನ್ನು ಸ್ಫೋಟಿಸಿದರು. ‘ಜೆಡಿಎಸ್‌ನವರು ಪ್ರಚಾರಕ್ಕೆ ಕರೆದೇ ಇಲ್ಲ, ಕರೆಯದೇ ಹೇಗೆ ಬರಲಿ’ ಎಂದು ಪ್ರಶ್ನಿಸಿದರು. ಇದಕ್ಕೆ ಖಾರವಾಗಿಯೇ ಉತ್ತರ ಕೊಟ್ಟ ಕುಮಾರಸ್ವಾಮಿ ‘ಮನೆಗೆ ಹೋಗಿದ್ದೆ ಬೆಂಬಲ ಕೋರಿದ್ದೆ, ಮೋದಿ ಕಾರ್ಯಕ್ರಮದಲ್ಲಿ ಕರೆದಿದ್ದೆ, ಇನ್ನೆಷ್ಟು ಬಾರಿ ಕರೆಯಬೇಕು’ ಎಂದು ಪ್ರಶ್ನಿಸಿದ್ದಾರೆ.

ಸುಮಲತಾ– ಎಚ್‌ಡಿಕೆ ಅವರ ಈ ಮಾತುಗಳಲ್ಲಿ ಕೋಪ, ತಾಪಗಳೆಲ್ಲವೂ ವ್ಯಕ್ತವಾಗಿದ್ದು ಮುಂದೆ ಇದು ಜಿಲ್ಲೆಯಾದ್ಯಂತ ಹೊರ ರೂಪದ ಮುಸುಕಿನ ಗುದ್ದಾಟಕ್ಕೆ ಕಾರಣವಾಗಲಿದೆ ಎಂದೇ ಹೇಳಲಾಗುತ್ತಿದೆ.

ಆಹ್ವಾನಿಸಲು ಹಿಂದೇಟು: ಕುಮಾರಸ್ವಾಮಿ ಅವರು ಸುಮತಲಾ ಮನೆಗೆ ಹೋಗಿ ಬೆಂಬಲ ಕೋರಿರುವುದು ನಿಜ. ಆದರೆ ಮೈತ್ರಿ ಅಭ್ಯರ್ಥಿಪರ ಪ್ರಚಾರ ಮಾಡಬೇಕು ಎಂದು ಜೆಡಿಎಸ್‌ ಮುಖಂಡರು ತುಂಬು ಮನಸ್ಸಿನಿಂದ ಆಹ್ವಾನಿಸಿಲ್ಲ, ಜೊತೆಗೆ ಸುಮಲತಾ ಬೆಂಬಲಿಗರನ್ನೂ ಮಾತನಾಡಿಲ್ಲ. ಇದಕ್ಕೆ ಜೆಡಿಎಸ್‌ ಮುಖಂಡರೇ ಕಾರಣ ನೀಡುತ್ತಾರೆ.

ಸುಮಲತಾ ಒಂದು ಕ್ಷಣ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದರೂ ಅವರು ಅದರಿಂದಾಗುವ ಲಾಭದತ್ತ ಕಣ್ಣಿಡುತ್ತಾರೆ. ಕುಮಾರಸ್ವಾಮಿ ಗೆದ್ದರೆ ತನ್ನಿಂದಲೇ ಗೆಲುವಾಯಿತು ಎಂಬ ಶ್ರೇಯ ಪಡೆಯಲು ಪ್ರಯತ್ನಿಸುತ್ತಿದ್ದರು. ಅವರ ಪ್ರಚಾರದಿಂದ ಲಾಭವನೂ ಆಗುತ್ತಿರಲಿಲ್ಲ. ಕರೆಸುವುದಕ್ಕಿಂತ ಅವರನ್ನು ದೂರ ಇಡುವುದೇ ಒಳ್ಳೆಯದು ಎಂಬ ನಿರ್ಣಯವನ್ನು ಜೆಡಿಎಸ್‌ ಮುಖಂಡರು ಮೊದಲೇ ಕೈಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

‘ಸುಮಲತಾ ಅವರ ಜನಪ್ರಿಯತೆ ಈಗ ಶೂನ್ಯಕ್ಕೆ ಕುಸಿದಿದೆ, ಅವರ ಜೊತೆ ರಾಜಕಾರಣ ಮಾಡುವವರು ಯಾರೂ ಇಲ್ಲ. ಅವರ ಹಿಂದಿರುವ ನಾಲ್ಕೈದು ಹಿಂಬಾಲಕರಿಗೆ ಮತ ಹಾಕಿಸುವ ಶಕ್ತಿಯೂ ಇಲ್ಲ. ಸುಮಲತಾ ವಿರುದ್ಧ ಜನರಿಗೆ ಅಸಮಾಧಾನವಿದ್ದು  ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬಂದಿದ್ದರೆ ಲಾಭಕ್ಕಿಂತ ನಷ್ಟವೇ ಆಗುತ್ತಿತ್ತು. ಈಗ ಎಚ್‌ಡಿಕೆ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ’ ಮುಖಂಡರೊಬ್ಬರು ಹೇಳಿದರು.

ಸುಮಲತಾ
ಆಂಧ್ರ ರಾಜ್ಯಪಾಲರಾಗ್ತಾರಾ ಸುಮಲತಾ?
‘ಸ್ವಾಭಿಮಾನದ ಹೆಸರಿನಲ್ಲಿ ಅಭೂತಪೂರ್ವವಾಗಿ ಗೆದ್ದ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ್ದೇನೆ’ ಎನ್ನುತ್ತಿರುವ ಸುಮಲತಾ ಅವರು ಮುಂದೆ ರಾಜ್ಯಪಾಲ ಹುದ್ದೆ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕ ಬಿ.ಎಲ್‌.ಸಂತೋಷ್‌ ಅವರ ಮೂಲಕ ಆಂಧ್ರಪ್ರದೇಶ ರಾಜ್ಯಪಾಲರಾಗಲು ಲಾಬಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಮಂಡ್ಯ ಕ್ಷೇತ್ರದ ಟಿಕೆಟ್‌ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು ಆದರೆ ಅದು ಸಾಧ್ಯವಾಗಲಿಲ್ಲ. ಟಿಕೆಟ್‌ ಬಿಟ್ಟುಕೊಡುವ ಮೊದಲು ಅವರು ರಾಜ್ಯಪಾಲ ಹುದ್ದೆಗೆ ಬೇಡಿಕೆ ಇಟ್ಟಿದ್ದರು. ಆದರೆ ವರಿಷ್ಠರಿಂದ ಅವರಿಗೆ ಯಾವುದೇ ಭರವಸೆ ಸಿಕ್ಕಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು. ಸಂಸದೆ ಸುಮಲತಾ ಅವರು ಫೋನ್‌ ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.