ADVERTISEMENT

ಲೋಕಸಭಾ ಚುನಾವಣೆ | ಚುಂಚಶ್ರೀ ಆಶೀರ್ವಾದ ಪಡೆಯಲು ಪೈಪೋಟಿ

ಒಕ್ಕಲಿಗ ಮತ ಸೆಳೆಯಲು ಕಸರತ್ತು, ಅಭ್ಯರ್ಥಿಗಳಿಗೆ ಶಕ್ತಿಕೇಂದ್ರವಾದ ಆದಿಚುಂಚನಗಿರಿ ಮಠ

ಎಂ.ಎನ್.ಯೋಗೇಶ್‌
Published 13 ಏಪ್ರಿಲ್ 2024, 6:46 IST
Last Updated 13 ಏಪ್ರಿಲ್ 2024, 6:46 IST
ಮೈಸೂರು– ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಶ್ರೀಕಂಠದತ್ತ ಚಾಮರಾಜ ಒಡೆಯರ್‌ ಅವರು ಈಚೆಗೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಗೌರವ ಸ್ವೀಕರಿಸಿದರು
(ಸಂಗ್ರಹ ಚಿತ್ರ)
ಮೈಸೂರು– ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಶ್ರೀಕಂಠದತ್ತ ಚಾಮರಾಜ ಒಡೆಯರ್‌ ಅವರು ಈಚೆಗೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಗೌರವ ಸ್ವೀಕರಿಸಿದರು (ಸಂಗ್ರಹ ಚಿತ್ರ)   

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಒಕ್ಕಲಿಗರ ಮತ ಸೆಳೆಯುವ ರಾಜಕೀಯ ಲಾಭದ ಉದ್ದೇಶವೇ ಶ್ರೀಕ್ಷೇತ್ರ ಆದಿಚುಂಚನಗಿರಿ ಹಾಗೂ ಚುಂಚಶ್ರೀ ಭೇಟಿಯ ಹಿಂದಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ.

ಅಭ್ಯರ್ಥಿಗಳು, ಅಭ್ಯರ್ಥಿಗಳ ತಂದೆ, ತಾಯಿ, ಸಂಬಂಧಿಗಳು, ರಾಜಕೀಯ ಪಕ್ಷಗಳ ಮುಖಂಡರು ನಿರ್ಮಲಾನಂದನಾಥ ಸ್ವಾಮೀಜಿ ಎಲ್ಲಿದ್ದರೂ ಅಲ್ಲಿಗೇ ಹುಡುಕಿಕೊಂಡು ತೆರಳಿ ಆಶೀರ್ವಾದ ಪಡೆಯುತ್ತಿದ್ದಾರೆ. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಹೆಚ್ಚಿನ ಮುಖಂಡರು ಎಡತಾಕುತ್ತಿದ್ದಾರೆ. ಶ್ರೀಗಳು ಬೆಂಗಳೂರು ಶಾಖಾ ಮಠದಲ್ಲಿದ್ದರೂ ಅಲ್ಲಿಯೇ ಭೇಟಿಯಾಗಿ ಆಶೀರ್ವಾದ ಬೇಡುತ್ತಿದ್ದಾರೆ.

ಚುಂಚಶ್ರೀ ಭೇಟಿಗೆ ಪಕ್ಷಗಳ ಭೇದವಿಲ್ಲ, ಎಲ್ಲಾ ಪಕ್ಷಗಳು ಅಭ್ಯರ್ಥಿಗಳು ಶ್ರೀಗಳ ಪ್ರೀತಿ ಪಡೆಯಲು ಹವಣಿಸುತ್ತಿದ್ದಾರೆ. ಶ್ರೀಗಳು ಮಾತ್ರ ಏಕಾಗ್ರಚಿತ್ತರಾಗಿ ಎಲ್ಲಾ ಅಭ್ಯರ್ಥಿ, ಮುಖಂಡರುಗಳಿಗೆ ಆಶೀರ್ವಾದ ಮಾಡಿ ಕಳುಹಿಸುತ್ತಿದ್ದಾರೆ. ಜೊತೆಗೆ ಮಠದ ವತಿಯಿಂದ ಶಾಲು– ಹಾರ ಹಾಕಿ, ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿ ಗೌರವ ಸಲ್ಲಿಸುತ್ತಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈಚೆಗೆ ಬೆಂಗಳೂರಿನ ಶಾಖಾ ಮಠದಲ್ಲಿ ಚುಂಚಶ್ರೀಯನ್ನು ಭೇಟಿಯಾಗಿದ್ದಾರೆ. ಮಠ, ಮಂದಿರಗಳ ಭೇಟಿಗೆ ಅಷ್ಟೇನೂ ಆಸಕ್ತಿ ತೋರದ ಅವರು ಚುನಾವಣೆ ಸಂದರ್ಭದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿಯಾಗಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ತಮ್ಮ ತವರು ಮೈಸೂರು ಸೇರಿದಂತೆ ಆ ಭಾಗದ ಕ್ಷೇತ್ರಗಳಲ್ಲಿ ಒಕ್ಕಲಿಗರ ಮತ ಸೆಳೆಯುವುದು ಸಿ.ಎಂ ಭೇಟಿಯ ಉದ್ದೇಶವಾಗಿದೆ ಎಂದೇ ಬಣ್ಣಿಸಲಾಗಿದೆ.

‘ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಟಿಕೆಟ್‌ ಖಾತ್ರಿಯಾದ ಕೂಡಲೇ ಅಭ್ಯರ್ಥಿಗಳು ಮೊದಲ ಬಾರಿಗೆ ಚುಂಚಶ್ರೀಯನ್ನು ಭೇಟಿಯಾಗಿದ್ದಾರೆ. ನಂತರ ಹಲವು ಸಂದರ್ಭಗಳಲ್ಲಿ, ಧಾರ್ಮಿಕ ಉತ್ಸವಗಳಿಗೆ ಮತ್ತೆ ಮತ್ತೆ ಭೇಟಿಯಾಗುತ್ತಿದ್ದಾರೆ. ಒಕ್ಕಲಿಗರ ಶಕ್ತಿಕೇಂದ್ರವಾಗಿರುವ ಆದಿಚುಂಚನಗಿರಿಗೆ ಭೇಟಿ ನೀಡಿದರೆ ಸಮುದಾಯದ ಜನರು ಆಶೀರ್ವಾದ ಮಾಡುತ್ತಾರೆ ಎಂಬುದು ಮುಖಂಡರ ನಂಬಿಕೆಯಾಗಿದೆ’ ಎಂದು ಒಕ್ಕಲಿಗ ಮುಖಂಡರೊಬ್ಬರು ತಿಳಿಸಿದರು.

ಅವಾಮಾಸ್ಯ ಪೂಜೆಗೂ ದಂಡು: ಅಮಾವಾಸ್ಯೆ ದಿನದಂದು ನಡೆಯುವ ವಿಶೇಷ ಪೂಜೆಗೆ ಶ್ರೀಕ್ಷೇತ್ರ ಆದಿಚುಂಚನಗಿರಿ ರಾಜಕಾರಣಿಗಳಿಂದಲೇ ತುಂಬಿ ಹೋಗುತ್ತಿದೆ. ವಿಶೇಷ ಪೂಜೆ, ಹೋಮ, ಹವನಗಳ ಮೂಲಕ ಮುಖಂಡರು ಹರಕೆ ತೀರಿಸುತ್ತಾರೆ. ಅಮವಾಸ್ಯೆ ದಿನ ಕ್ಷೇತ್ರದಲ್ಲಿ ಭಕ್ತ ಸಾಗರವೇ ಬಂದು ಸೇರುತ್ತದೆ. ಜೊತೆಗೆ ವಿಐಪಿಗಳೂ ವಿಶೇಷ ಪೂಜೆ ಸಲ್ಲಿಸುತ್ತಾರೆ.

‘ರಾಜಕೀಯ ಮುಖಂಡರು ಸೇರಿದಂತೆ ಸಾರ್ವಜನಿಕರು ದೇವರ ದರ್ಶನಕ್ಕಾಗಿ ಆದಿಚುಂಚನಗಿರಿಗೆ ಬಂದು ಹೋಗುವುದು ಸಹಜ. ಆದರೆ ಈಗಿನ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗರ ಮತ ಸೆಳೆಯುವ ಉದ್ದೇಶದಿಂದಲೇ ವಿವಿಧ ಪಕ್ಷಗಳ ಮುಖಂಡರು ಚುಂಚನಗಿರಿಯತ್ತ ಬರುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಆದಿಚುಂಚನಗಿರಿ ಭೇಟಿಗೆ ಪಕ್ಷಗಳ ಭೇದವಿಲ್ಲ ಸರ್ವರಿಗೂ ಆಶೀರ್ವಾದ ಮಾಡುತ್ತಿರುವ ಶ್ರೀಗಳು ರಾಜಕೀಯ ಲಾಭದ ಉದ್ದೇಶದಿಂದ ಈ ಭೇಟಿ

ಮುಸ್ಲಿಂ ಅಭ್ಯರ್ಥಿಗಳೂ ಭೇಟಿ ಆದಿಚುಂಚನಗಿರಿ ಭೇಟಿಗೆ ಧರ್ಮಗಳ ಭೇದವಿಲ್ಲ ಮುಸ್ಲಿಂ ಕ್ರೈಸ್ತ ಅಭ್ಯರ್ಥಿಗಳೂ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನವನ್ನೂ ಪಡೆದಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಈಚೆಗೆ ತಮ್ಮ ತಂದೆ ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌ ಹಾಗೂ ಕುಟುಂಬ ಸದಸ್ಯರೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮೀಜಿ ದರ್ಶನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.