ಮಳವಳ್ಳಿ: ತಾಲ್ಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಮತದಾರ ಪಟ್ಟಿಯಿಂದ 30ಕ್ಕೂ ಅಧಿಕ ಮತದಾರರ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಹಲವರು ರಾಷ್ಟ್ರೀಯ ಹೆದ್ದಾರಿ-209 ತಡೆದು ಪ್ರತಿಭಟನೆ ನಡೆಸಿದರು.
ದಾಸನದೊಡ್ಡಿ ಗ್ರಾಮದಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಘಟನೆ ನಡೆದಿದೆ ಎನ್ನಲಾಗಿದೆ.
ಕಳೆದ ಹಲವು ವರ್ಷದಿಂದ ಗ್ರಾಮದಲ್ಲಿ ಮತದಾನ ಮಾಡಿಕೊಂಡು ಬಂದಿದ್ದು, ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ವೇಳೆ ಮೃತಪಟ್ಟ ವ್ಯಕ್ತಿಯ ಹೆಸರನ್ನು ಡಿಲೀಟ್ ಮಾಡುವ ವೇಳೆ ಈ ರೀತಿ ನಡೆದಿದೆ. ಶುಕ್ರವಾರ ಮತದಾನ ಮಾಡಲು ಮತಗಟ್ಟೆಗೆ ಬಂದಾಗ ಪಟ್ಟಿಯಲ್ಲಿ ಕೈಬಿಟ್ಟಿ ಹೋಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ದಾಸನದೊಡ್ಡಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ-209 ತಡೆದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಪೊಲೀಸರು ಈ ಬಗ್ಗೆ ಚುನಾವಣಾಧಿಕಾರಿಗಳ ಗಮನಕ್ಕೆ ಬಂದು ಪರಿಶೀಲಿಸುವ ಭರವಸೆ ನೀಡಿದರು.
ಅವಾಂತರ: ತಾಲ್ಲೂಕಿನ ನೆಲಮಾಕನಹಳ್ಳಿಯ ಮತಗಟ್ಟೆ 37ರಲ್ಲಿ ಮತದಾರರ ಪಟ್ಟಿಯಿಂದ ಹಲವು ಮಂದಿಯ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಮತಗಟ್ಟೆಗೆ ನುಗ್ಗಿ ಮತದಾರರ ಪಟ್ಟಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ವೇಳೆ ಗ್ರಾಮಾಂತರ ಪಿಎಸ್ಐ ಶ್ರವಣ ಸ ದಾಸರಡ್ಡಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಸಹಾಯಕ ಚುನಾವಣಾಧಿಕಾರಿ ಎನ್.ಕೆ.ಲೋಕೇಶ್ ಮಾತನಾಡಿ, ‘ನೆಲಮಾಕನಹಳ್ಳಿಯ ಸಮಸ್ಯೆ ಬಗೆಹರಿಸಲಾಗಿದೆ. ದಾಸನದೊಡ್ಡಿಯಲ್ಲಿ ಮತದಾರರ ಪಟ್ಟಿಯನ್ನು ತಿಂಗಳ ಮೊದಲೇ ಪ್ರಕಟಿಸಿದ್ದರೂ ಯಾವುದೇ ಅಕ್ಷೇಪಣೆ ಸಲ್ಲಿಸಿಲ್ಲ, ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.