ADVERTISEMENT

ಅವಹೇಳನಾಕಾರಿ ಮಾತು; ಕಾಂಗ್ರೆಸ್‌ ಮುಖಂಡರಿಗೆ ಸಿ.ಎಸ್‌.ಪುಟ್ಟರಾಜು ಎಚ್ಚರಿಕೆ

ಉದಯ್‌ ಅಕ್ಕ–ತಂಗಿಯರ ಜೊತೆ ಹುಟ್ಟಿಲ್ಲವೇ?

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 14:05 IST
Last Updated 6 ಏಪ್ರಿಲ್ 2024, 14:05 IST
ಸಿ.ಎಸ್‌.ಪುಟ್ಟರಾಜು
ಸಿ.ಎಸ್‌.ಪುಟ್ಟರಾಜು   

ಮಂಡ್ಯ: ‘ಮದ್ದೂರು ಕ್ಷೇತ್ರದ ಶಾಸಕ ಜಿಲ್ಲೆಯ ಹಿರಿಯ ರಾಜಕಾರಣಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಖಂಡನೀಯ. ಕಾಂಗ್ರೆಸ್‌ ವರಿಷ್ಠರು ಅವರ ಬಾಯಿಗೆ ಬೀಗ ಹಾಕದಿದ್ದರೆ ಮುಂದೆ ಸಂಭವಿಸುವ ಅನಾಹುತಗಳಿಗೆ ಕಾಂಗ್ರೆಸ್‌ ವರಿಷ್ಠರೇ ಹೊಣೆಯಾಗಬೇಕಾಗುತ್ತದೆ’ ಎಂದು ಜೆಡಿಎಸ್‌ ಮುಖಂಡ ಸಿ.ಎಸ್‌.ಪುಟ್ಟರಾಜು ಎಚ್ಚರಿಕೆ ನೀಡಿದರು.

‘ಜಿಲ್ಲೆಯ ಹಿರಿಯ ರಾಜಕಾರಣಿ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಗ್ಗೆ ಕದಲೂರು ಉದಯ್ ಅವರು 3ನೇ ದರ್ಜೆಯ ವ್ಯಕ್ತಿಗಳಂತೆ ಮಾತನಾಡಿದ್ದಾರೆ. ಮದ್ದೂರು ಶಾಸಕ ಅಕ್ಕ– ತಂಗಿಯರ ಜೊತೆ ಹುಟ್ಟಿಲ್ಲವೇ, ರಾಜಕಾರಣಕ್ಕಾಗಿ ಹೆಂಡತಿ-ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಲಾಗುತ್ತದೆಯೇ, ಗಂಡಸ್ತನ ಪದ ಬಳಸಿ ಟೀಕೆ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನ ವರಿಷ್ಠರು ಉದಯ್ ಅವರನ್ನು ಹದ್ದು ಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಕಾಂಗ್ರೆಸ್ ವರಿಷ್ಠರೇ ಹೊಣೆಯಾಗಬೇಕಾಗುತ್ತದೆ? ಅವರ ನಾಲಗೆಯ ಸಂಸ್ಕಾರ ಕಂಡು ಮುಜುಗರವಾಗುತ್ತಿದೆ. ಜನಪ್ರತಿನಿಧಿಗಳು ತಲೆ ತಗ್ಗಿಸುವ ಮಟ್ಟಿಗೆ ನಾಲಗೆ ಹರಿಯಬಿಟ್ಟಿದ್ದಾರೆ. ಸೂರ್ಯನನ್ನು ನೋಡಿ ಆಗಸಕ್ಕೆ ಉಗುಳಿದರೆ ಅದು ನಮ್ಮ ಮುಖದ ಮೇಲೆಯೇ ಬೀಳುತ್ತದೆ ಎಂಬುದನ್ನು ಅರಿಯಬೇಕು’ ಎಂದರು.

ADVERTISEMENT

‘ರವೀಂದ್ರ ಶ್ರೀಕಂಠಯ್ಯ ಅವರ ತಾತ ಚುಂಚೇಗೌಡರು ಮನೆತನ ದಾನಧರ್ಮ ಮಾಡಿಕೊಂಡು ಬಂದಿದೆ. ಅವರ ಜನಸೇವೆಯನ್ನು ಮೆಚ್ಚಿಸಿ ಸ್ವತಃ ಮೈಸೂರು ಮಹಾರಾಜರೇ ಶ್ಲಾಘಿಸಿದ್ದಾರೆ. ಅವರ ಮನೆಗೆ ಬಂದು ಊಟ ಮಾಡಿ ಹೋಗಿದ್ದಾರೆ. ಇಂತಹ ಕುಟುಂಬದ ಬಗ್ಗೆ ಕೀಳು ಭಾಷೆ ಬಳಸಿ ಮಾತನಾಡಿರುವುದು ಸರಿಯಲ್ಲ’ ಎಂದರು.

‘ಡಿ.ಸಿ.ತಮ್ಮಣ್ಣ ಅವರು ತಾತನ ಕಾಲದಿಂದಲೂ ನೂರಾರು ಎಕರೆ ಹೊಂದಿರುವ ಜಮೀನ್ದಾರರು. ಜನರ ಕಷ್ಟ–ಸುಖಗಳಿಗೆ ಸ್ಪಂದಿಸಿದ, ಆರ್ಥಿಕವಾಗಿ ನೆರವು ನೀಡಿದ ಕುಟುಂಬ ಅವರದು. ಅವರ ಬಗ್ಗೆಯೂ ಕೀಳಾಗಿ ಮಾತನಾಡಿರುವುದು ಶಾಸಕ ಉದಯ್ ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ’ ಎಂದರು.

‘ಮಳವಳ್ಳಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ನನ್ನನ್ನು ದೊಡ್ಡರಾಜು ಎಂದು ಮೂದಲಿಸಿ ಮಾತನಾಡಿದ್ದಾರೆ. ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರೇ ನನ್ನನ್ನು ದೊಡ್ಡರಾಜು ಎಂದು ಕರೆದಿದ್ದಾರೆ. ನಮ್ಮನ್ನು ಟೀಕಿಸುವ ಹಕ್ಕು ನಿಮಗಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಮ್ಮ ಶಾಸಕತ್ವ ಉಳಿಸಿಕೊಟ್ಟಿದ್ದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ನೀವು ಕರೆದ ಸ್ಥಳಕ್ಕೆ ಬರುತ್ತೇವೆ’ ಎಂದರು.

ಮುಖಂಡ ಸುರೇಶ್‌ಗೌಡ ಮಾತನಾಡಿ ‘ಶಾಸಕ ಉದಯ್ ಮಾತುಗಳ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು. ಚುನಾವಣೆ ನೆಪದಲ್ಲಿ ಗಣಿ ಇಲಾಖೆಯ ಅಧಿಕಾರಿಗಳ ಮೂಲಕವೇ ಗಣಿ ಮಾಲೀಕರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇದಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್‌ ಮುಖಂಡರಾದ ಬಿ.ಆರ್.ರಾಮಚಂದ್ರ, ಡಿ.ರಮೇಶ್, ಮುಖಂಡ ನವೀನ್‌ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.