ADVERTISEMENT

ಮಂಡ್ಯ: ಜಾಲತಾಣ ಸಂದೇಶಗಳ ಮೇಲೆ ನಿಗಾ

ಮಾಧ್ಯಮ ಮೇಲ್ವಿಚರಣಾ ಕೋಶಕ್ಕೆ ಜಿಲ್ಲಾ ಚುನಾವಣಾಧಿಕಾರಿ ಭೇಟಿ, ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 15:11 IST
Last Updated 21 ಮಾರ್ಚ್ 2024, 15:11 IST
ಜಿಲ್ಲಾ ಚುನಾವಣಾಧಿಕಾರಿ ಕುಮಾರ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಮಾಧ್ಯಮ ಮೇಲ್ವಿಚರಣಾ ಕೋಶ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜಿಲ್ಲಾ ಚುನಾವಣಾಧಿಕಾರಿ ಕುಮಾರ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಮಾಧ್ಯಮ ಮೇಲ್ವಿಚರಣಾ ಕೋಶ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಮಂಡ್ಯ: ‘ಸಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು ಪೋಸ್ಟ್‌ ಮಾಡುವ ಸಂದೇಶಗಳ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಿದೆ. ಮಾಧ್ಯಮ ಮೇಲ್ವಿಚಾರಣಾ ಕೋಶದ ಸಿಬ್ಬಂದಿ ಜಾಲತಾಣಗಳ ಸಂದೇಶ ಪರಿಶೀಲಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಕುಮಾರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಮೇಲ್ವಿಚರಣಾ ಕೋಶಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಪ್ರಸಾರವಾಗುವ ರಾಜಕೀಯ ಜಾಹೀರಾತುಗಳಿಗೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಟಿವಿ, ಕೇಬಲ್ ವಾಹಿನಿ, ಸಾಮಾಜಿಕ ಮಧ್ಯಮದಲ್ಲಿ ಪ್ರಸಾರವಾಗುವ ಸುದ್ದಿ ಹಾಗೂ ಜಾಹೀರಾತುಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಯಾವುದೇ ದೂರುಗಳು ದಾಖಲಾದರೂ ನಿಯಮಾನುಸಾರ ಕ್ರಮ ಜರುಗಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್‌, ಮುದ್ರಣ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ, ಹಣಕ್ಕಾಗಿ ಸುದ್ದಿ ಪ್ರಕಟಗೊಳ್ಳುವ ಸಾಧ್ಯತೆ ಇರುತ್ತದೆ. ಇವುಗಳ ಬಗ್ಗೆ ಎಚ್ಚರವಹಿಸಿ ಉನ್ನತಾಧಿಕಾರಿಗಳಿಗೆ ವರದಿ ಮಾಡಬೇಕು. ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿಯು ಪಾವತಿ ಸುದ್ದಿಯ ಬಗ್ಗೆ ಕಟ್ಟುನಿಟ್ಟಿನ ಎಚ್ಚರ ವಹಿಸಬೇಕು’ ಎಂದು ಸೂಚನೆ ನೀಡಿದರು.

ದೂರು ನಿರ್ವಹಣಾ ಕೋಶಕ್ಕೆ ಭೇಟಿ ನೀಡಿದ ಅವರು ‘ದೂರು ನಿರ್ವಹಣಾ ಕೋಶದಲ್ಲಿ ಸ್ವೀಕೃತವಾಗುವ ದೂರುಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು. ದೂರುಗಳನ್ನು ಸಂಬಂಧಿಸಿದ ವಿಭಾಗಕ್ಕೆ ಸಲ್ಲಿಸಿ ಕೈಗೊಂಡ ಕ್ರಮಗಳ ಬಗ್ಗೆ ವರದಿಯಾಗಬೇಕು’ ಎಂದರು.

‘ಎಸ್.ಎಸ್‌.ಟಿ ತಂಡಗಳ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸಲಾಗಿದ್ದು, ಅವುಗಳ ಚಲನ- ವಲನಗಳು ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಣೆ ಸಹ ದೂರು ನಿರ್ವಹಣಾ ಕೋಶದಲ್ಲಿ ಪರಿಶೀಲಿಸಬೇಕು’ ಎಂದರು.

‘ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿಯು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಯಾವುದೇ ರೀತಿಯಿಂದಲೂ ಕರ್ತವ್ಯದಲ್ಲಿ ವಿಘ್ನ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಅನುಮಾನಗಳಿಗೆ ಎಡೆಮಾಡಿಕೊಡದಂತೆ ಕ್ರಮ ವಹಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್ ನಾಗರಾಜು, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ, ಎಸ್. ಎಚ್. ಮೀಡಿಯಾ ಮಾನಿಟರಿಂಗ್ ಸೆಲ್‌ನ ನೋಡಲ್ ಅಧಿಕಾರಿ ಸಿದ್ದರಾಜು, ನೋಡೆಲ್‌ ಅಧಿಕಾರಿಗಳಾದ ಮನೋಹರ್, ಶಿವರಾಜು ಇದ್ದರು.

ಇವಿಎಂ ಪ್ರಥಮ ರ್‍ಯಾಂಡಮೈಸೇಷನ್: ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಪ್ರಥಮ ಹಂತದ ರ್‍ಯಾಂಡಮೈಸೇಷನ್ ಪ್ರಕ್ರಿಯೆ  ನಡೆಯಿತು.

ಇವಿಎಂ, ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌ಗಳ ಸಂಪೂರ್ಣ ಮಾಹಿತಿ, ವಿಧಾನಸಭಾ ಕ್ಷೇತ್ರವಾರು ಹಂಚಿಕೆಗಳ ಸಂಪೂರ್ಣ ಮಾಹಿತಿಯನ್ನು ನಿಯಮಾನುಸಾರ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ನಿಯಮಾನುಸಾರ ಕರ್ತವ್ಯ ನಿರ್ವಹಣೆಗೆ ಸೂಚನೆ ದೂರು ಕುರಿತು ಕೈಗೊಂಡ ಕ್ರಮದ ವರದಿ ಕಡ್ಡಾಯ ನ್ಯಾಯಸಮ್ಮತ ಚುನಾವಣೆ ನಡೆಸಲು ಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.