ADVERTISEMENT

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯೇ ಸ್ಪರ್ಧಿಸಲಿ: ಸುಮಲತಾ ಅಂಬರೀಷ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 13:22 IST
Last Updated 21 ಫೆಬ್ರುವರಿ 2024, 13:22 IST
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್   

ಮಂಡ್ಯ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಮತ ಬಂದಿದ್ದು, ಜಿಲ್ಲೆಯಾದ್ಯಂತ ‌ಪಕ್ಷ ಸಂಘಟನೆಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯೇ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು' ಎಂದು ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ‘ನನಗೇ ಟಿಕೆಟ್ ಕೊಡಬೇಕೆಂದು ಲಾಬಿ ಮಾಡುತ್ತಿಲ್ಲ. ಆದರೆ, ನಾನು ಮಂಡ್ಯದಿಂದಲೇ‌ ಸ್ಪರ್ಧಿಸುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ’ ಎಂದರು.

‘ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲು ತಾಂತ್ರಿಕ ಅಡ್ಡಿ ಇರುವ ಬಗ್ಗೆ ಕೇಂದ್ರ ನಾಯಕರು ನನ್ನೊಂದಿಗೆ ಚರ್ಚಿಸಿದ್ದಾರೆ. ಹೀಗಾಗಿ ಬಾಹ್ಯ ಬೆಂಬಲ ಕೊಟ್ಟಿದ್ದೇ‌ನೆ. ಸಂಸದೆಯಾಗಿ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಪರಿಹಾರಕ್ಕೆ ‌ಕೈಲಾದ ಪ್ರಯತ್ನ ಮಾಡಿದ್ದೇನೆ. ನನ್ನ ಸ್ಪರ್ಧೆಯ ಬಗ್ಗೆ ಊಹಾಪೋಹ ಸೃಷ್ಟಿಸಲಾಗುತ್ತಿದೆ. ನಾನಂತೂ ನನ್ನ ಕ್ಷೇತ್ರಕ್ಕೆ ಅಂಟಿಕೊಂಡಿದ್ದೇನೆ, ಬೇರೆಲ್ಲಿಗೂ ಹೋಗುವುದಿಲ್ಲ’ ಎಂದರು.

ADVERTISEMENT

‘‌ಬಿಜೆಪಿ‌ಯ ಸ್ಥಳೀಯ ಮುಖಂಡರ ಜೊತೆ‌ ಸಂಪರ್ಕದಲ್ಲಿಲ್ಲ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಾನು ಬಿಜೆಪಿ ಸೇರುವವರೆಗೂ ಪಕ್ಷದ ಸಭೆಗಳಿಗೆ ಹೋಗಲಾಗದು. ಆಹ್ವಾನಿಸಿದ ಸಭೆಗಳಿಗೆ ಹೋಗಿದ್ದೇ‌ನೆ. ಸ್ಥಳೀಯ ನಾಯಕರು ನನ್ನ ಸಂಪರ್ಕದಲ್ಲಿ‌ದ್ದಾರೆ’ ಎಂದರು.

ನಾಟಿ ಶೈಲಿ ಅಡುಗೆ ಮನೆಯಲ್ಲಿರಲಿ: ‘ಕಾಂಗ್ರೆಸ್‌ ನಾಟಿ ಬ್ರೀಡ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ’ ಎಂಬ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾಟಿ‌ ಶೈಲಿ ಅಡುಗೆ‌ ಮನೆಯಲ್ಲಿ‌ರಬೇಕು. ಸಂಸತ್‌ಗೆ ಅನ್ವಯವಾಗುವುದಿಲ್ಲ. ಸಂಸದರಾಗುವವರಿಗೆ ನೆಲ, ಜಲ, ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವ ಕನಿಷ್ಠ ಅರ್ಹತೆ ಇರಬೇಕು’ ಎಂದರು.

'ಕಾಂಗ್ರೆಸ್‌ನಲ್ಲಿ ಅಂಬರೀಷ್ 25 ವರ್ಷವಿದ್ದರು. ಈಗಲೂ ಪರಿಚಯಸ್ಥರಿರುವ ಪಕ್ಷ‌ವದು. ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಹಲವರು ಪಕ್ಷಕ್ಕೆ ಕರೆದಿದ್ದಾರೆ. ಚಲುವರಾಯಸ್ವಾಮಿ ವೈಯಕ್ತಿಕವಾಗಿ ಕೇಳಿದರೆ ಅವರ ಹೆಸರು ಹೇಳುತ್ತೇನೆ' ಎಂದರು.

‘ಬೇಬಿಬೆಟ್ಟದಲ್ಲಿ ಪರೀಕ್ಷಾರ್ಥ ಸ್ಫೋಟ ಬೇಡ’

‘ಬೇಬಿಬೆಟ್ಟದ ಆಸುಪಾಸಿನ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಪರೀಕ್ಷಾರ್ಥ ಸ್ಫೋಟ ನಡೆದಬಾರದು’ ಎಂದು‌ ಸುಮಲತಾ ಪ್ರತಿಪಾದಿಸಿದರು. ಪರೀಕ್ಷಾರ್ಥ ಸ್ಫೋಟಕ್ಕೆ ಜಿಲ್ಲಾಡಳಿತ ‌ಸಿದ್ಧತೆ ನಡೆಸುತ್ತಿರುವ ಸಂಬಂಧ ಅವರು ಬುಧವಾರ ಅಧಿಕಾರಿಗಳ ಸಭೆ ನಡೆಸಿ‌ ಸುದ್ದಿಗಾರರರೊಂದಿಗೆ ಮಾತನಾಡಿದರು. ‘ಗಣಿ ಸ್ಫೋಟಕ್ಕೂ ಪರೀಕ್ಷಾರ್ಥ ಸ್ಫೋಟಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪರೀಕ್ಷಾರ್ಥ ಸ್ಫೋಟದಿಂದ ಕೆಆರ್‌ಎಸ್‌ಗೆ ತೊಂದರೆ ಇಲ್ಲ ಎಂಬ ವರದಿ ಬರಬಹುದು. ಗಣಿ ಸ್ಫೋಟದಿಂದ ಕೆಆರ್‌ಎಸ್ ಜಲಾಶಯಕ್ಕೆ ತೊಂದರೆ ಇದ್ದು ಪರೀಕ್ಷಾರ್ಥ ಸ್ಫೋಟವನ್ನೂ ನಡೆಸಬಾರದು’ ಎಂದರು. ‘ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರೀಕ್ಷಾರ್ಥ ಸ್ಫೋಟ ‌ನಡೆಯಲಿ‌ ಎಂದು ಹೇಳಿರುವುದು ಆಶ್ಚರ್ಯ ತರಿಸಿದೆ. ರೈತಸಂಘ ವಿರೋಧಿಸುತ್ತಿದ್ದರೂ ಶಾಸಕರು ಏಕೆ ಸ್ಫೋಟದ ಪರವಾಗಿದ್ದಾರೆಂಬುದು ‌ತಿಳಿಯುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.